ಎಸ್ ಪಿಎಂಗೆ ಟಿಕೆಟ್ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ನಿರ್ಣಯ

ತುಮಕೂರು

       ಲೋಕಸಭಾ ಚುನಾವಣಾ ಮೈತ್ರಿ ಹಿನ್ನೆಲೆಯಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದಕ್ಕೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಲ್ಲಿ ಅಸಮಧಾನ ಭುಗಿಲೆದ್ದಿದೆ. ನಿರಾಶೆಗೊಂಡ ಮುಖಂಡರು ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ನಡುವೆ ಹಾಲಿ ಸಂಸದ ಎಸ್ ಪಿ ಮುದ್ದಹನುಮೇಗೌಡರಿಗೇ ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಒಮ್ಮತದ ನಿರ್ಣಯ ಮಂಡಿಸಿ ಪಕ್ಷದ ವರಿಷ್ಠರಿಗೆ ಒತ್ತಾಯ ಮಾಡಿತು.

       ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಕಛೇರಿಯಲ್ಲಿ ಸಭೆ ನಡೆಸಿದ ಮುಖಂಡರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡುವ ಬದಲು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಟ್ಟಿರುವ ಮೈತ್ರಿ ನಾಯಕರ ಕ್ರಮ ಖಂಡಿಸಿದರು. ಮುದ್ದಹನುಮೇಗೌಡರಿಗೆ ಎರಡನೇ ಬಾರಿಗೆ ಅವಕಾಶ ನೀಡಬೇಕು ಈ ಬಗ್ಗೆ ಕಾಂಗ್ರೆಸ್ ವರಿಷ್ಠರು ಪುನರ್ ಪರಿಶೀಲನೆ ನಡೆಸಿ, ಕಾಂಗ್ರೆಸ್ ಸ್ಪರ್ಧೆಗೆ ಅವಕಾಶ ನೀಡಬೆಕು ಎಂದು ಒತ್ತಾಯ ಮಾಡಿದರು.

       ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಆರ್ ರಾಮಕೃಷ್ಣ, ಹಾಲಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸಿನ ಹಾಲಿ ಸಂಸದರಿಗೆ ಮರು ಸ್ಪರ್ಧೆ ಮಾಡಲು ಅವಕಾಶ ನೀಡಿ, ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿರಾಕರಿಸಿರುವುದು ಸರಿಯಲ್ಲ, ಇದರಿಂದ ಜಿಲ್ಲೆಯ ಕಾರ್ಯಕರ್ತರಿಗೆ ನೋವಾಗಿದೆ. ಕ್ಷೇತ್ರದ ಜನರ ಭಾವನೆ ಅರ್ಥ ಮಾಡಿಕೊಂಡು ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಬೇಕು ಎಂದು ಪಕ್ಷದ ನಾಯಕರಿಗೆ ವಿನಂತಿಸಿದರು.

         ಮುದ್ದಹನುಮೇಗೌಡರು ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ, ಸಂಸತ್ತಿನಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಮಾಡಿದ್ದಾರೆ. ನಗರದ ಹೆಚ್‍ಎಂಟಿ ಜಾಗದಲ್ಲಿ ಪ್ರತಿಷ್ಠಿತ ಇಸ್ರೋ ಸಂಸ್ಥೆ ಸ್ಥಾಪನೆಯಾಗಲು ಕಾಳಜಿವಹಿಸಿದ್ದರು. ತುಮಕೂರಿನಲ್ಲಿ ಪಾಸ್‍ಪೋರ್ಟ್ ಕಚೇರಿ, ರೈಲ್ವೇ ಯೋಜನೆಗಳು, ಗುಬ್ಬಿ ಬಳಿ ಹೆಚ್‍ಎಎಲ್ ಸ್ಥಾಪನೆಗೂ ಆಸಕ್ತಿವಹಿಸಿದ್ದರು, ಜನರೊಂದಿಗೆ ಬೆರೆತು, ಸ್ಪಂದಿಸಿ ಕೆಲಸ ಮಾಡುವ ಮುದ್ದಹನುಮೇಗೌಡರಿಗೆ ತುಮಕೂರಿನಿಂದ ಕಣಕ್ಕಿಳಿಯಲು ಅವಕಾಶ ಮಾಡಿಕೊಡಬೇಕು ಎಂದು ರಾಮಕೃಷ್ಣ ಮನವಿ ಮಾಡಿದರು.

         ಮಾಜಿ ಶಾಸಕ ಎಸ್ ಷಫಿಅಹಮದ್ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುದ್ದಹನುಮೇಗೌಡರಿಗೆ ಎರಡನೇ ಬಾರಿಗೆ ಅವಕಾಶ ಮಾಡಿಕೊಡಬೇಕು. ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢವಾಗಿದೆ, ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಕಾರ್ಯಕರ್ತರು ಉತ್ಸಾಹ ಹೊಂದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಅವರ ಗಮನಕ್ಕೆ ಈ ವಿಚಾರ ತಂದಿದ್ದು, ಅವರು ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್‍ಗೇ ಉಳಿಸುವ ಭರವಸೆ ನೀಡಿದ್ದಾರೆ ಎಂದರು.

         ನಾವು ಈವರೆಗೂ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳುವ ಪದ್ದತಿ ಇತ್ತು, ಈಗ ಬೇರೆ ಪಕ್ಷಕ್ಕೆ ಮತ ಕೇಳಲು ಸಾಧ್ಯವಾಗುವುದಿಲ್ಲ, ಅಂತಹ ಪರಿಸ್ಥಿತಿ ತರಬೇಡಿ, ಕಾಂಗ್ರೆಸ್ ಅಭ್ಯರ್ಥಿ ತುಮಕೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತಾಗಲಿ ಎಂದು ಹೇಳಿದರು.ನಮ್ಮ ಬೇಡಿಕೆಯನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ, ಇದನ್ನು ಮೀರಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ದವಾಗಬೇಕಾಗುತ್ತದೆ ಎಂದು ಷಫಿಅಹಮದ್ ತಿಳಿಸಿದರು.

          ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್ ರಾಜೇಂದ್ರ ಮಾತನಾಡಿ, ಕಳೆದ ಬಾರಿ ದೇಶದಲ್ಲಿ ಮೋದಿ ಅಲೆಯಿದ್ದರೂ ಮುದ್ದಹನುಮೇಗೌಡರು ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದರು, ಉತ್ತಮ ಸಂಸದೀಯ ಪಟುವಾಗಿ ರಾಷ್ಟ್ರಮಟ್ಟದಲ್ಲಿ ತುಮಕೂರು ಗುರುತಿಸಿಕೊಳ್ಳಲು ಕಾರಣರಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸಶಕ್ತವಾಗಿದೆ, ಮತ್ತೊಮ್ಮೆ ಕಾಂಗ್ರೆಸ್ ಗೆಲ್ಲುತ್ತದೆ, ಹೀಗಾಗಿ ಮುದ್ದಹನುಮೇಗೌಡರಿಗೇ ಟಿಕೆಟ್ ಕೊಡಿ ಎಂದು ವಿನಂತಿಸಿದರು.

         ಜೆಡಿಎಸ್ ಅಭ್ಯರ್ಥಿಯ ಬದಲಾಗಿ ಕಾಂಗ್ರೆಸ್ ಪಕ್ಷಕ್ಕೇ ತುಮಕೂರು ಕ್ಷೇತ್ರ ಉಳಿಸಬೇಕು ಎಂದು ಪಕ್ಷದ ವರಿಷ್ಠರನ್ನು ಒತ್ತಾಯಿಸಿ ಇದೇ ಶನಿವಾರ (ಮಾ.16) ನಗರದ ಟೌನ್‍ಹಾಲ್ ವೃತ್ತದಲ್ಲಿ ಯುವ ಕಾಂಗ್ರೆಸ್‍ನಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಆರ್ ರಾಜೇಂದ್ರ ಹೇಳಿದರು.ಮುಖಂಡರಾದ ಕಲ್ಲಹಳ್ಳಿ ದೇವರಾಜು, ಚಿಕ್ಕವೆಂಕಟಯ್ಯ, ತು ಭೀ ಮಲ್ಲೇಶ್, ಗೂಳೂರು ವಿಜಯಕುಮಾರ್, ಮರಿಚೆನ್ನಮ್ಮ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.ನಂತರ ಪಕ್ಷದ ಕಛೇರಿ ಎದುರು ಪ್ರತಿಭಟನೆ ನಡೆಸಿ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್‍ಗೆ ಉಳಿಸಿ, ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link