ಚಳ್ಳಕೆರೆ
ಮಹಾತ್ಮ ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸನ್ನು ಗ್ರಾಮ ರಾಜ್ಯದ ಆಡಳಿತ ಮೂಲಕವೇ ಯಶಸ್ಸಿಗೊಳಿಸಬೇಕಿದೆ. ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿಯನ್ನು ನೀಡಿ ಗ್ರಾಮಗಳ ಅಭಿವೃದ್ಧಿಗೆ ಸಹಕಾರ ನೀಡಬೇಕಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಆರ್ಥಿಕ ಸೌಲಭ್ಯ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ವಿನಂತಿಸಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ತಿಳಿಸಿದರು.
ಅವರು, ತಾಲ್ಲೂಕಿನ ಪಗಡಲಬಂಡೆ ಗ್ರಾಮದಲ್ಲಿ ಸುಮಾರು 23 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿ ಗ್ರಾಮ ಪಂಚಾಯಿತಿ ಕಟ್ಟಡವನ್ನು ಸೇವೆಗೆ ಸಮರ್ಪಿಸಿ ಮಾತನಾಡಿದರು. ವಿಶೇಷವಾಗಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅವುಗಳ ಪ್ರೇಕರ ಶಕ್ತಿಯಾಗಿರುವ ಈ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರಿಗೆ ಸಮಸ್ತ ಗ್ರಾಮ ಜನರ ಪರವಾಗಿ ಅಭಿನಂದಿಸುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಹಟ್ಟಿ ಚಿನ್ನದಗಣಿ ನಿಗಮದ ಅಧ್ಯಕ್ಷರು, ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ, 14ನೇ ಹಣಕಾಸು ಯೋಜನೆ ಮತ್ತು ಖಾತರಿ ಯೋಜನೆಯಡಿ ಅಂದಾಜು 23 ಲಕ್ಷ ವೆಚ್ಚದಲ್ಲಿ ಈ ನೂತನ ಗ್ರಾಮ ಪಂಚಾಯಿತಿ ಕಟ್ಟಡವನ್ನು ಸುಂದರವಾಗಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಪಂಚಾಯಿತಿ ಕಟ್ಟಡವನ್ನು ಪಡೆಯಲು ಇಲ್ಲಿನ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರ ಸಹಕಾರವೇ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಶಾಸಕರ ಅನುದಾನದಲ್ಲಿ 10 ಲಕ್ಷ ವೆಚ್ಚದಲ್ಲಿ ಕಟ್ಟಡ ಮೇಲಂತಸ್ಥಿ ಸಭಾಂಗಣವನ್ನು ನಿರ್ಮಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮ ಮಾತನಾಡಿ, ಶಾಸಕರ ವಿಶೇಷ ನೆರವಿನ ಸಹಕಾರದಿಂದ ನಮ್ಮ ಗ್ರಾಮ ಪಂಚಾಯಿತಿ ಮಟ್ಟದ ಎಲ್ಲಾ ಗ್ರಾಮಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಪಂಚಾಯಿತಿ ಮಟ್ಟದ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ವಿಶಾಲವಾದ ರಸ್ತೆ, ಕುಡಿಯುವ ನೀರು, ಶಾಲಾ ಕಾಂಪೌಂಡ್ ದುರಸ್ಥಿ ಹಾಗೂ ಪಂಚಾಯಿತಿ ನೂತನ ಕಟ್ಟಡವೂ ಸೇರಿದಂತೆ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿ ಮೂಲಕ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷೇತ್ರದ ಶಾಸಕರು ಹಾಗೂ ಸಂಸದರನ್ನು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಗ್ರಾಮದ ಜನತೆಯ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾ ಶ್ರೀನಿವಾಸ್,ತಾಲ್ಲೂಕು ಪಂಚಾಯಿತಿ ಸದಸ್ಯೆ ಉಮಾಜನರ್ಧನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಈಶ್ವರಪ್ರಸಾದ್, ಬಿಇಒ ವೆಂಕಟೇಶಪ್ಪ, ಗ್ರಾಪಂ ಸದಸ್ಯರಾದ ಟಿ. ಸಿದ್ದಣ್ಣ, ಜೆ. ತಿಪ್ಪೇಸ್ವಾಮಿ, ಕೆ. ಬೊಮ್ಮಲಿಂಗಪ್ಪ, ಜಿ. ರೂಪೇಶ್, ಇ. ಶಿವಮೂರ್ತಿ, ಎಚ್.ಎಂ. ಮಹಾಂತೇಶ್, ಈರಮಲ್ಲಪ್ಪ, ಸಿ. ಶೈಲಪ್ಪ, ಬಂಡೆರುದ್ರಪ್ಪ, ಎಸ್.ವೈ. ವೀರಭದ್ರಪ್ಪ, ವೆಂಕಟೇಶಪ್ಪ, ಬಾಲನಾಗಮ್ಮ, ಉಮಾದೇವಿ, ಮಾಂತಮ್ಮ, ಕಮಲಮ್ಮ, ಜಯಲಕ್ಷ್ಮಮ್ಮ, ಲೀಲಾವತಿ, ವಿ. ರಾಧ, ಲಕ್ಷ್ಮಿದೇವಿ, ಉಮಾತಿಮ್ಮಯ್ಯ, ಶ್ವೇತ ಮುಂತಾದವರು ಉಪಸ್ಥಿತರಿದ್ದರು.