ಚಿತ್ರದುರ್ಗ:
ಹ್ಯಾಂಡ್‍ಬಾಲ್ ಕ್ರೀಡೆಗೆ ಅಗತ್ಯವಾದ ಬೆಂಬಲ ನೀಡುವುದಾಗಿ ಸಂಸದ ಎ.ನಾರಾಯಣಸ್ವಾಮಿ ಭರವಸೆ ನೀಡಿದರು.ಕರ್ನಾಟಕ ರಾಜ್ಯ ಹ್ಯಾಂಡ್‍ಬಾಲ್ ಸಂಸ್ಥೆ ಬೆಂಗಳೂರು, ಜಿಲ್ಲಾ ಹ್ಯಾಂಡ್‍ಬಾಲ್ ಸಂಸ್ಥೆ ಹಾಗೂ ಕದಂಬ ಯೂತ್ ಹ್ಯಾಂಡ್‍ಬಾಲ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ದಿವಂಗತ ಎಸ್.ಎನ್.ಸ್ವಾಮಿ ಸ್ಮರಣಾರ್ಥ ಆರಂಭಗೊಂಡಿರುವ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷ ಹಾಗೂ ಮಹಿಳೆಯರ ಹ್ಯಾಂಡ್‍ಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಎಸ್.ಎನ್.ಸ್ವಾಮಿ ಕೇವಲ ಚಿತ್ರದುರ್ಗಕ್ಕೆ ಮೀಸಲಾಗಿರದೆ ರಾಷ್ಟಮಟ್ಟದ ಹ್ಯಾಂಡ್‍ಬಾಲ್‍ನಲ್ಲಿ ಪ್ರತಿನಿಧಿಸಿ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿರುವುದನ್ನು ಕ್ರೀಡಾಪಟುಗಳು ನೆನಪಿಸಿಕೊಳ್ಳಬೇಕು. ಹ್ಯಾಂಡ್‍ಬಾಲ್ ಅಷ್ಟಾಗಿ ಪ್ರಸಿದ್ದಿಯಾಗಿಲ್ಲದಿದ್ದರು ರಾಷ್ಟ್ರಮಟ್ಟದ ಗಮನ ಸೆಳೆಯಲು ಸ್ವಾಮಿರವರ ಪರಿಶ್ರಮ ಕಾರಣ. ಜಗತ್ತಿನಾದ್ಯಂತ ಎಲ್ಲೆಡೆ ಕ್ರಿಕೆಟ್ ಮಾತ್ರ ಕಾಣುತ್ತಿದೆ. ಬೇರೆ ಯಾವ ಕ್ರೀಡೆಗಳಿಗೂ ಪ್ರೋತ್ಸಾಹ ಅಷ್ಟಾಗಿ ಸಿಗುತ್ತಿಲ್ಲದಿರುವುದು ನೋವಿನ ಸಂಗತಿ. ಕ್ರಿಕೆಟ್‍ನಿಂದ ದೈಹಿಕವಾಗಿ ಬಲಶಾಲಿಗಳಾಗುತ್ತಾರೆ ಎನ್ನುವುದು ತಪ್ಪು ಕಲ್ಪನೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸರ್ಕಾರಿ ಶಾಲಾ ಕಟ್ಟಡಗಳು ಗುಣಮಟ್ಟದಿಂದ ಕೂಡಿದೆ. ವಿಪರ್ಯಾಸವೆಂದರೆ ಚಿತ್ರದುರ್ಗದ ನನ್ನ ಕ್ಷೇತ್ರದ ಎಲ್ಲಾ ಕಡೆ ಸುತ್ತಾಡಿದ್ದೇನೆ. ಸರ್ಕಾರಿ ಶಾಲೆಗಳು ತಾತ್ಸಾರ. ತಿರಸ್ಕಾರಕ್ಕೆ ಒಳಪಟ್ಟವೆ. ಇದಕ್ಕೆ ಜನಪ್ರತಿನಿಧಿಗಳ ಇಲ್ಲವೇ ಅಧಿಕಾರಿಗಳ ನಿರ್ಲಕ್ಷೆಯಿರಬಹುದು. ಏನೆ ಇರಲಿ ಈ ವಿಚಾರವನ್ನು ಮಾತ್ರ ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ಜಿಲ್ಲೆಯಲ್ಲಿ ಹ್ಯಾಂಡ್‍ಬಾಲ್ ನಿಲ್ಲದೆ ಮುಂದುವರೆಯಬೇಕು. ಅದಕ್ಕೆ ಬೇಕಾದ ಬೆಂಬಲ ನೀಡುತ್ತೇನೆಂದರು.
ಪಂದ್ಯಾವಳಿಗಳ ಸಾನಿಧ್ಯ ವಹಿಸಿದ್ದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ ಚಿತ್ರದುರ್ಗ ಜಿಲ್ಲೆ ಬರಪೀಡಿತ ಪ್ರದೇಶವಾಗಿರುವುದರಿಂದ ಕಳೆದ ಮೂರು ವರ್ಷಗಳಿಂದ ಯಾವುದೆ ಕ್ರೀಡೆಯನ್ನು ನಡೆಸಿರಲಿಲ್ಲ. ಆದರೆ ಈ ಬಾರಿ ಎಸ್.ಎನ್.ಸ್ವಾಮಿ ಸ್ಮರಣಾರ್ಥ ಸರಳವಾಗಿ ಹ್ಯಾಂಡ್‍ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ವಾಲಿಬಾಲ್‍ನಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಚಿತ್ರದುರ್ಗ ತನ್ನದೇ ಆದ ಕೊಡುಗೆ ನೀಡಿದೆ. ರಾಷ್ಟ್ರಮಟ್ಟದ ಹ್ಯಾಂಡ್‍ಬಾಲ್ ಕ್ರೀಡಾಪಟು ಎಸ್.ಎನ್.ಸ್ವಾಮಿ ಕುಟುಂಬಕ್ಕೆ ಭಗವಂತನು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.ಕ್ರೀಡಾಪಟುಗಳು ಸೋಲು-ಗೆಲುವು ಎನ್ನುವುದಕ್ಕಿಂತಲೂ ಮಿಗಿಲಾಗಿ ಕ್ರೀಡೆಯನ್ನು ಸ್ಪೂರ್ತಿಯಿಂದ ಆಡಿ. ಮುಂದಿನ ದಿನಗಳಲ್ಲಿ ಸಂಸದ ಎ.ನಾರಾಯಣಸ್ವಾಮಿರವರು ಕೇಂದ್ರ ಮಂತ್ರಿಯಾಗಿ ಬರಲಿ ಎಂದು ಹಾರೈಸಿದರು.
ಕರ್ನಾಟಕ ರಾಜ್ಯ ಹ್ಯಾಂಡ್‍ಬಾಲ್ ಸಂಸ್ಥೆ ಅಧ್ಯಕ್ಷ ಡಾ.ಮನೋಜ್ ಪಿ.ಸಾಹುಕಾರ್ ಮಾತನಾಡುತ್ತ ನಲವತ್ತು ವರ್ಷಗಳಿಂದ ಹ್ಯಾಂಡ್‍ಬಾಲ್ ಸಂಸ್ಥೆಗೆ ಪದಾಧಿಕಾರಿಗಳು ಯಾರು ಇರಲಿಲ್ಲ. ಈಗ ಅಸೋಸಿಯೇಷನ್ ಮೂಲಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಹ್ಯಾಂಡ್‍ಬಾಲ್ ಕ್ರೀಡೆ ಇನ್ನು ಬೆಳಕಿಗೆ ಬರಬೇಕಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಹ್ಯಾಂಡ್‍ಬಾಲ್ ಟೂರ್ನಮೆಂಟ್ ನಡೆಸುವ ಉದ್ದೇಶವಿದೆ. ಎಲ್ಲಾ ಶಾಲಾ-ಕಾಲೇಜು, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿಯೂ ಹ್ಯಾಂಡ್‍ಬಾಲ್ ಪರಿಚಯಿಸಲಾಗುವುದು. ಅದಕ್ಕಾಗಿ ಕ್ರೀಡಾಪಟುಗಳಿಗೆ ಬೇಕಾದ ಸಲಕರಣೆಗಳನ್ನು ನೀಡುವಂತೆ ಸಂಸದರಲ್ಲಿ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಹ್ಯಾಂಡ್‍ಬಾಲ್ ಸಂಸ್ಥೆ ಕಾರ್ಯಾಧ್ಯಕ್ಷ ಶಿವರಾಂರವರು ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಶಾಶ್ವತವಾದ ಫ್ಲೆಡ್‍ಲೈಟ್ ನಿರ್ಮಿಸಿ ಎಲ್ಲಾ ಶಾಲೆಗಳ ಆಟದ ಮೈದಾನಗಳನ್ನು ಅಭಿವೃದ್ದಿಪಡಿಸುವಂತೆ ಸಂಸದರಲ್ಲಿ ಮನವಿ ಮಾಡಿದರು.ಕರ್ನಾಟಕ ರಾಜ್ಯ ಹ್ಯಾಂಡ್‍ಬಾಲ್ ಸಂಸ್ಥೆ ಕಾರ್ಯದರ್ಶಿ ಬಿ.ಎಲ್.ಲೋಕೇಶ್, ಲ್ಯಾಂಡ್ ಡೆವೆಲಪರ್ಸ್ ಸೈಟ್‍ಬಾಬಣ್ಣ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಜಯಣ್ಣ, ಶೇಖರಪ್ಪ, ಅಬ್ದುಲ್ ರೆಹಮಾನ್, ರಾಜಣ್ಣ, ತಾ.ಪಂ.ಸದಸ್ಯ ಸುರೇಶ್‍ನಾಯ್ಕ, ದಿ.ಎಸ್.ಎನ್.ಸ್ವಾಮಿರವರ ಕುಟುಂಬದವರು ವೇದಿಕೆಯಲ್ಲಿದ್ದರು.