ಬೆಂಗಳೂರು
ರಾಜ್ಯದಲ್ಲಿ ಪರಿಶಿಷ್ಟ ವರ್ಗದವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಸದ್ಯದಲ್ಲೇ ಒಂದು ತೀರ್ಮಾನಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಪರಿಶಿಷ್ಟ ವರ್ಗದವರಿಗೆ ಜನಸಂಖ್ಯೆಗೆ ಅನುಗಣವಾಗಿ ಮೀಸಲಾತಿ ನೀಡುವ ಸಂಬಂಧ ನ್ಯಾ. ಹೆಚ್.ಎನ್. ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಆದಷ್ಟು ಶೀಘ್ರ ಈ ಸಮಿತಿಯ ವರದಿ ಪಡೆದು ಎಲ್ಲರ ಜತೆ ಚರ್ಚಿಸಿ ಮೀಸಲಾತಿ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಅವರು ಹೇಳಿದರು.
ರಾಮಾಯಣ ಕರ್ತೃ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಮತ್ತು ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಸಮುದಾಯ ಅಭಿವೃದ್ಧಿಯಾಗಲು ಶಿಕ್ಷಣ ಮುಖ್ಯ. ಯಾವುದೇ ಸಮುದಾಯ ಸುಶಿಕ್ಷಿತರಾದರೆ ಆ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹಾಗಾಗಿ ಪರಿಶಿಷ್ಟ ಜಾತಿ, ವರ್ಗದ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.
ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಸಮುದಾಯದ ಅಭಿವೃದ್ಧಿಗೆ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ. ಸ್ವಾಮೀಜಿಗಳ ಅಪೇಕ್ಷೆಗೆ ತಕ್ಕಂತೆ ಸರ್ಕಾರ ಸ್ಪಂದಿಸಲಿದೆ. ಸಮುದಾಯದ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತದೆ ಎಂದರು. ದೇಶಕ್ಕೆ ರಾಮಾಯಣದಂತಹ ಉತ್ಕೃಷ್ಟ ಕೃತಿ ಕೊಟ್ಟ ಮಹರ್ಷಿ ವಾಲ್ಮೀಕಿಯವರಿಂದಲೇ ಪ್ರಭಾವಿತರಾಗಿ ಸ್ವಾಮೀಜಿಯವರು ರಾಮರಾಜ್ಯದ ಕಲ್ಪನೆಯನ್ನು ದೇಶಕ್ಕೆ ಕೊಟ್ಟಿದ್ದರು. ಮಹರ್ಷಿ ವಾಲ್ಮೀಕಿಯವರ ಕಥೆ ಎಲ್ಲರಲ್ಲೂ ಜನಜನಿತವಾಗಿದೆ ಎಂದರು.
ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಆ ಸಮುದಾಯದ ಸ್ವಾಮೀಜಿಯವರು ಹೇಳಿ ರುವ ಬೇಡಿಕೆಗಳನ್ನು ಈಡೇರಿಸಲು ಬದ್ಧವಾಗಿದ್ದೇವೆ. ಮೀಸಲಾತಿ ಏರಿಕೆ ಸಂಬಂಧವೂ ಎಲ್ಲರ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಇದು ವಾಲ್ಮೀಕಿಯವರ ರಾಮಾಯಣ ದರ್ಶನದಲ್ಲಿ ಪ್ರತಿಬಿಂಬಿತವಾಗಿದೆ. ಮಹರ್ಷಿ ವಾಲ್ಮೀಕಿಯವರ ರಾಮಾಯಣದಲ್ಲಿ ಪ್ರಸ್ತಾಪಿಸಿರುವ ಆದರ್ಶ ಎಲ್ಲರಿಗೂ ಮಾದರಿ ಎಂದು ಅವರು ಹೇಳಿದರು.
ವಾಲ್ಮೀಕಿ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸುವ ಸಂದರ್ಭದಲ್ಲಿ ಆ ಮಕ್ಕಳು ಶೇ. 95, 94 ಅಂಕ ಪಡೆದಿರುವುದನ್ನು ಕೇಳಿ ನನ್ನ ಕಣ್ಣಲ್ಲಿ ಆನಂದ ಬಾಷ್ಪ ಬಂದಿತು. ಯಾವುದೇ ಸಮುದಾಯ ಸುಶಿಕ್ಷಿತವಾದರೆ ಅಭಿವೃದ್ಧಿ ಸಾಧ್ಯ. ಸಮುದಾಯದ ಸುಶಿಕ್ಷಿತತೆಗೆ ಸರ್ಕಾರ ಎಲ್ಲ ಕಾರ್ಯಕ್ರಮಗಳನ್ನು ಜಾರಿ ಮಾಡಲಿದೆ ಎಂದರು. ವಾಲ್ಮೀಕಿ ಸಮುದಾಯದ ಅಪೇಕ್ಷೆ ಪೂರೈಸುವುದು ಈ ಸರ್ಕಾರದ ಜವಾಬ್ದಾರಿ ಎಂದು ಅವರು ಹೇಳಿದರು.
ಕಲ್ಯಾಣಕ್ಕೆ ಬದ್ಧ ಇದಕ್ಕೂ ಮೊದಲು ಮಾತನಾಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಸರ್ವ ಜನಾಂಗದ ಅಭಿವೃದ್ಧಿಗೆ ಯಡಿಯೂರಪ್ಪನವರ ಸರ್ಕಾರ ಬದ್ಧ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆಯೇ ವಾಲ್ಮೀಕಿ ಜಯಂತಿ ಸೇರಿದಂತೆ ವಿವಿಧ ಸಮುದಾಯಗಳ ಮಹಾನ್ ಪುರುಷರ ಜಯಂತಿ ಆಚರಣೆಗಳನ್ನು ಆರಂಭಿಸಿದರು ಎಂದು ನೆನಪು ಮಾಡಿದರು.
ವಾಲ್ಮೀಕಿ ಸಮುದಾಯ ಸೇರಿದಂತೆ ಎಲ್ಲ ಸಮುದಾಯಗಳ ಅಭಿವೃದ್ಧಿಗೂ ಸರ್ಕಾರ ಬದ್ಧವಾಗಿದೆ. ನಿರ್ಲಕ್ಷಿತ ಹಾಗೂ ಶೋಷಿತ ಸಮುದಾಯದ ಕಲ್ಯಾಣಕ್ಕೆ ಪೂರಕವಾಗಿ ಯಡಿಯೂರಪ್ಪನವರ ಸರ್ಕಾರ ಕೆಲಸ ಮಾಡಲಿದೆ ಎಂದರು. ಸರ್ಕಾರ ಪರಿಶಿಷ್ಟ ವರ್ಗದ ಕಲ್ಯಾಣಕ್ಕೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಸುಮಾರು 3.71 ಲಕ್ಷ ಮಕ್ಕಳು ಓದುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರತ್ಯೇಕ ಸಚಿವಾಲಯ ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ನರಸಿಂಹನಾಯಕ ಅವರು, ಪರಿಶಿಷ್ಟ ವರ್ಗದವರಿಗೆ ನೀಡುವ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಬೇಕು ಹಾಗೂ ಪರಿಶಿಷ್ಟ ವರ್ಗದವರಿಗೆ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಮೀಸಲಾತಿ ಬೇಡಿಕೆ ಈಡೇರಿಸಿ: ಸ್ವಾಮೀಜಿ ಇದೇ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಯವರು, ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕು. ಸರ್ಕಾರ 2 ತಿಂಗಳಲ್ಲಿ ನಿವೃತ್ತ ನ್ಯಾ. ನಾಗಮೋಹನದಾಸ್ ಸಮಿತಿಯಿಂದ ವರದಿ ಪಡೆದು ಮೀಸಲಾತಿ ಏರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ವರ್ಗದವರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂಬ ಬೇಡಿಕೆಯೂ ಹಳೆಯದು. ಅದನ್ನು ಈಡೇರಿಸುವಂತೆ ಆಗ್ರಹಿಸಿದರು. ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗಿದೆ. ಮೀಸಲಾತಿ ಏರಿಕೆಯಿಂದ ಈ ಅನ್ಯಾಯವನ್ನು ಸರಿಪಡಿಸುವಂತೆಯೂ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಪ್ರಶಸ್ತಿ ಪ್ರದಾನ ಇದೇ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾಗಿರುವ ನಾಡೋಜ ಡಾ. ಕಮಲಾ ಹಂಪನಾ, ಶಿಕ್ಷಣ ತಜ್ಞ ಡಾ. ರಂಗಯ್ಯ ಹಾಗೂ ಓಬಳಪ್ಪ ಇವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ವಸತಿ ಶಾಲೆಗಳಲ್ಲಿ ಅಧ್ಯಯನ ಮಾಡಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಾಗಲಾಂಬಿಕದೇವಿ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ. ಕುಮಾರನಾಯಕ್, ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರ ಡಾ. ಈ. ವೆಂಕಟಯ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಸಂಗಪ್ಪ, ವಾಲ್ಮೀಕಿ ಅಭಿವೃದ್ಧಿ ನಿಗಮದ ಎ. ಹನುಮನರಸಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ