ಹುಳಿಯಾರು:
ಹುಳಿಯಾರು ಸಮೀಪದ ದೊಡ್ಡಎಣ್ಣೇಗೆರೆಯಲ್ಲಿ ಮುಮದಿನ ವರ್ಷದಿಂದ ರೆಸಿಡೆನ್ಷಿಯಲ್ ಸ್ಕೂಲ್ ಆರಂಭಿಸುವುದಾಗಿ ಇಲ್ಲಿನ ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಿ.ಎಸ್.ಪ್ರಶಾಂತ್ ತಿಳಿಸಿದರು.ದೊಡ್ಡಎಣ್ಣೇಗೆರೆಯ ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ 8 ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಶಿಕ್ಷಣ ಕೊಡುವ ಉದ್ದೇಶದಿಂದ ಸುಸಜ್ಜಿತವಾದ ಕಟ್ಟಡ ಹಾಗೂ ನುರಿತ ಶಿಕ್ಷಕರನ್ನೊಳಗೊಂಡಂತೆ ದೊಡ್ಡಎಣ್ಣೇಗೆರೆ ಎಂಬ ಪುಟ್ಟ ಹಳ್ಳಿಯಲ್ಲಿ ಶಾಲೆ ಆರಂಭಿಸಲಾಗಿತ್ತು. ಪೋಷಕರೂ ಸಹ ಉತ್ತಮ ಪ್ರತಿಕ್ರಿಯೆ ನೀಡಿದ ಫಲದಿಂದ 8 ವರ್ಷಗಳಿಂದ ಶಾಲೆ ಯಶಸ್ವಿಯಾಗಿ ನಡೆಯುತ್ತಿದ್ದು ಮಕ್ಕಳೂ ಸಹ ಪಟ್ಟಣದ ಶಾಲಾ ವಿದ್ಯಾರ್ಥಿಗಳಂತೆ ಹರಳು ಹುರಿದಂತೆ ಇಂಗ್ಲೀಷ್ ಮಾತನಾಡುವುದನ್ನು ಕಲಿಯುತ್ತಿದ್ದಾರೆ.
ಈ ಮೂಲಕ ನಮ್ಮ ಶ್ರಮ ಸಾರ್ಥಕವಾಗಿದೆ ಎಂದು ಅವರು ಹೇಳಿದರು.ಶಾಲೆಯಲ್ಲಿ ದೊರೆಯುತ್ತಿರುವ ಗುಣಮಟ್ಟದ ಶಿಕ್ಷಣದ ಬಗ್ಗೆ ಅರಿತ ದೂರದೂರುಗಳ ಪೋಷಕರು ರೆಸಿಡೆನ್ಷಿಯಲ್ ಸ್ಕೂಲ್ ತೆರೆಯುವಂತೆ ಒತ್ತಡ ತಂದ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ಸಾಲಿನಿಂದ ವಸತಿ ಸಹಿತ ಶಾಲೆ ಆರಂಭಿಸಲಾಗುವುದು ಎಂದರಲ್ಲದೆ ರಾಜ್ಯ ಶಿಕ್ಷಣ ಇಲಾಖೆಯು ಎನ್‍ಸಿಆರ್‍ಟಿಇ ಪಠ್ಯ ಕ್ರಮವನ್ನು ಗುಣಮಟ್ಟದ ಶಿಕ್ಷಣವೆಂದು ಒಪ್ಪಿಕೊಂಡಿದೆ.
ಹಾಗಾಗಿ ಸಿಬಿಎಸ್‍ಸಿ ವ್ಯಾಮೋಹದಿಂದ ದುಭಾರಿ ವೆಚ್ಚ ಮಾಡಿ ಪಟ್ಟಣದ ಕಾನ್ವೆಂಟ್‍ಗೆ ಕಳುಹಿಸುವುದನ್ನು ಬಿಟ್ಟು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಇಂಗ್ಲೀಷ್ ಶಿಕ್ಷಣದ ದೊರೆಯುವ ಜ್ಞಾನ ಭಾರತಿ ಕಾನ್ವೆಂಟ್‍ಗೆ ಮಕ್ಕಳನ್ನು ಸೇರಿಸಿ ಎಂದರು. ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಟಿ.ಎಸ್.ರವಿ, ಡಾ.ಸಂಜಯ್, ನಿವೃತ್ತ ಶಿಕ್ಷಕರಾದ ಕೆ.ಶಾಂತವೀರಯ್ಯ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
