ಶಿಕ್ಷಣ ಸಚಿವ ಸುರೇಶ್‍ಕುಮಾರ್ ರಾಜೀನಾಮೆಗೆ ಆಗ್ರಹ

ದಾವಣಗೆರೆ:

      ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಎಂಬರ್ಥದಲ್ಲಿ ರಾಜ್ಯ ಸರ್ಕಾರವು ದೋಷಪೂರಿತ ಸುತ್ತೋಲೆ ಹೊರಡಿಸಲು ಕಾರಣರಾಗಿರುವ ಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ರಾಜೀನಾಮೆ ಪಡೆಯಬೇಕು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿ ಉಮಾಶಂಕರ್‍ನನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

      ನಗರದ ಅಂಬೇಡ್ಕರ್ ವೃತ್ತದದಿಂದ ಪ್ರತಿಭಟನಾ ಮೆರವಣಿಗೆ ಹೊರಟ ದಲಿತ ಸಂಘರ್ಷ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ದೋಷಪೂರಿತ ಸುತ್ತೊಲೆ ಹೊರಡಿಸಿ, ಅಂಬೇಡ್ಕರ್ ಅವರ ಪ್ರತಿಭೆಗೆ ಕಳಂಕ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಎಸಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಕ.ದ.ಸಂ.ಸ. ಸಂಚಾಲಕ ಎಚ್.ಮಲ್ಲೇಶ್, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನ, ಅಂಬೇಡ್ಕರ್ ಕುರಿತಂತೆ ಅವಹೆಳನ ಮಾಡುವ ಮೂಲಕ ಜನರ ಭಾವನೆ ಕೆರಳಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‍ಡಿಎ ಸರ್ಕಾರದಲ್ಲಿ ಸ್ವತಃ ವಾಜಪೇಯಿ ಸಹ ಸಂವಿಧಾನ ಪರಮಾರ್ಶಿಸಬೇಕೆಂಬ ಹೇಳಿಕೆ ನೀಡಿದ್ದರು. ಅಲ್ಲದೇ, ಪೇಜಾವರ ಶ್ರೀಗಳು ಸಂವಿಧಾನದ ಬಗ್ಗೆ ಇಂತಹದ್ದೇ ಮಾತುಗಳನ್ನಾಡಿದ್ದರು.

     2014ರಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಮತ್ತು ಸಂಘಪರಿವಾದವರು ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಅಸಹನೆ ತೋರುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಅಂಬೇಡ್ಕರ್ ವಿದ್ವತ್, ಪಾಂಡಿತ್ಯವನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ವಿಶ್ವದಲ್ಲೇ ಶ್ರೇಷ್ಟ ಸಂವಿಧಾನವನ್ನು ಅಂಬೇಡ್ಕರ್ ಭಾರತಕ್ಕೆ ನೀಡಿದ್ದಾರೆಂಬು ಮುಕ್ತ ಕಂಠದಿಂದ ಹೊಗಳುತ್ತಿದೆ. ಅಲ್ಲದೇ, ವಿಶ್ವಸಂಸ್ಥೆ ಸಹ ಅಂಬೇಡ್ಕರ್ ಜನ್ಮ ದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಘೋಷಣೆ ಮಾಡಿದೆ.

        ಆದರೆ, ಇದನೆಲ್ಲಾ ಸಹಿಸದ ಬಿಜೆಪಿ ಮತ್ತು ಸಂಘ ಪರಿವಾರದ ಗುಪ್ತ ಅಜೆಂಡಾದಂತೆ ಬಿಜೆಪಿ ಸರ್ಕಾರದ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿ ಉಮಾಶಂಕರ್ ಮೂಲಕ ಅಂಬೇಡ್ಕರ್ ಬರೆದಿಲ್ಲ. ಸಂವಿಧಾನವನ್ನು 299 ಸದಸ್ಯರ ವರದಿ ಕ್ರೋಢೀಕರಿಸಿ ಅಂಬೇಡ್ಕರ್ ಜೋಡಣೆ ಮಾಡಿಕೊಟ್ಟಿದ್ದಾರೆಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ. ಇಲಾಖೆ ವೆಬ್‍ಸೈಟ್‍ಗೂ ಈ ಸುತ್ತೋಲೆ ಅಪ್‍ಡೇಟ್ ಮಾಡಿದೆ ಎಂದು ಆರೋಪಿಸಿದರು.

      ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಂಬೇಡ್ಕರ್ ಬಗ್ಗೆ ನಿಜಕ್ಕೂ ಗೌರವವಿದ್ದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಬರೆದಿಲ್ಲವೆಂಬ ಸಂಗತಿ ಬಿತ್ತುತ್ತಿರುವ ಸಿಎಂಸಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಇಲಾಖೆಯ ಅಧಿಕಾರಿ ಉಮಾಶಂಕರ್‍ನನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು. ಶಿಕ್ಷಣ ಸಚಿವ ಎಸ್‍ಸುರೇಶ ಕುಮಾರ್ ಅವರಿಂದ ರಾಜೀನಾಮೆ ಪಡೆಯಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಎಸ್.ಜಿ.ವೆಂಕಟೇಶಬಾಬು, ಎಚ್.ಸಿ.ಮಲ್ಲಪ್ಪ, ಎಸ್.ಎಚ್.ಅಣ್ಣಪ್ಪ, ನೀಲಗುಂದ ಅಂಜಿನಪ್ಪ, ಅಣ್ಣಪ್ಪ ತಣಿಗೆರೆ, ಮಾರುತಿ ಕಡ್ಲೇಬಾಳು, ಆಂಜನೇಯ, ಎಂ.ರುದ್ರೇಶ, ಬಿ.ಮಲ್ಲೇಶಪ್ಪ, ಎನ್.ಸಿ.ಶ್ರೀನಿವಾಸ, ನರಸಿಂಹಪ್ಪ, ರವಿ, ನಾಗರಾಜ, ಮಾಲತೇಶ ಕೆಳಗಿನ ಮನಿ ಇತರರು ಇದ್ದರು. ಜಿ.ಎನ್ ಮಲ್ಲಿಕಾರ್ಜುನ್, ಸಿದ್ದನೂರು ಬಸವರಾಜ್, ಅನಿಲ್ ಕೇಸರಿ, ಜಿ.ಎಸ್ ಲೋಕೇಶ್ ಹಾಲೇಕಲ್ಲು ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link