ಜಾನಪದ ಕಲೆ, ಕಲಾವಿದರನ್ನು ಗೌರವಿಸುವ ಕೆಲಸ ನಿರಂತರವಾಗಬೇಕು

ಶಿರಾ:

       ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಜಾನಪದ ಕಲಾವಿದರ ಸಂದರ್ಶನ ಹಾಗೂ ಜನಪದರ ನೈಜ ಕಲೆಯ ದಾಖಲೀಕರಣ, ಜನಪದರೊಂದಿಗೆ ಮುಕ್ತ ಮಾತುಕತೆ ಕಾರ್ಯಕ್ರಮವನ್ನು ಗೌಡಗೆರೆ ಹೋಬಳಿ ಹೆಂದೊರೆ ಗ್ರಾಮದ ಐತಿಹಾಸಿಕ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

       ಪ್ರಖ್ಯಾತ ಅಂತರಾಷ್ಟ್ರೀಯ ಚಿತ್ರಕಲಾವಿದರಾದ ಎಮ್.ನಾರಾಯಣ್‍ರವರು ತಂಬೂರಿ ನುಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು, ಹಳ್ಳಿಗಾಡಿನ ಜನರು ಜಾನಪದ ಕಲೆಗಳಾದ ಸುಗ್ಗಿಕುಣಿತ, ಸೋಬಾನೆ, ಭಜನೆ, ಕೋಲಾಟ, ಕಂಸಾಳೆ, ಜನಪದಗೀತೆ, ಅಡುಗೆ, ಪಾರಂಪರಿಕ ವೈದ್ಯಪದ್ದತಿ ಇನ್ನೂ ಮುಂತಾದವುಗಳನ್ನು ಇಂದಿಗೂ ಕೂಡ ತಮ್ಮ ದೈನಂದಿನ ಬದುಕಿನಲ್ಲಿ ನೈಜವಾಗಿ ಉಳಿಸಿಕೊಂಡು ಬಂದಿದ್ದಾರೆ, ಹಾಗಾಗಿ ಜಾನಪದ ಹಿಂದಿನಿಂದಲೂ ತನ್ನದೆ ಆದ ವಿಶಿಷ್ಟ ಪರಂಪರೆಯನ್ನು ರೂಢಿಸಿಕೊಂಡು ಬರುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಜನಪದ ಸಂಸ್ಕತಿಯು ಉತ್ತಮ ಬಾಂಧವ್ಯ ಬೆಸೆಯುತ್ತಿದೆ ಎಂದರು

         ಜಾನಪದಕ್ಕೆ ಎಲ್ಲೆಯೆಂಬುದಿಲ್ಲ, ಅದು ವಿಶ್ವವ್ಯಾಪಿಯಾದುದು ಪ್ರಪಂಚದ ಮೂಲೆ ಮೂಲೆಯಲ್ಲಿ ಜಾನಪದ ಕಲೆಗೆ ಮನ್ನಣೆ ಇದ್ದು ಜನಪದರನ್ನು ಗೌರವಿಸುವ ಹಾಗೂ ಜಾನಪದ ಕಲೆಯನ್ನು ಉಳಿಸುವ ಕೆಲಸವಾಗಬೇಕು ಎಂದು ನಾರಾಯಣ್ ಹೇಳಿದರು.

        ಕಾರ್ಯಕ್ರಮದ ವಿಶೇಷ ಆಹ್ವಾನಿತರಾದ ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಕಾರ್ಯಾಧ್ಯಕ್ಷರಾದ ಡಾ. ಎಸ್.ಬಾಲಾಜಿರವರು ಮಾತನಾಡುತ್ತ ಜನಪದಕ್ಕೆ ಮಾನವೀಯ ಸಂಬಂಧಗಳನ್ನು ಬೆಸೆಯುವಂಥ ಅಗಾಧವಾದ ಶಕ್ತಿ ಇದೆ. ಕಲಾವಿದರ ದಾಖಲೀಕರಣ ಮಾಡುವುದರ ಜೊತೆಗೆ ಜನಪದ ಕಲಾವಿದರ ಜೀವನ ನಿರ್ವಹಣೆಗಾಗಿ ಮಾಶಾಸನ ಕೊಟ್ಟು ಜನಪದ ಕಲೆಯನ್ನು ಪ್ರೋತ್ಸಾಹಿಸಿ, ಉಳಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದಾಗ ಜನಪದ ಕಲೆ, ಸಂಸ್ಕತಿ, ಆಚರಣೆಗಳು ಉಳಿಯಲು ಸಾಧ್ಯವಿದೆ ಎಂದು ಹೇಳಿದರು.

        ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಉಪನ್ಯಾಸಕರಾದ ವಸಂತ್‍ಕುಮಾರ್.ಎನ್ ಮಾತನಾಡಿ ಜನರ ದಿನನಿತ್ಯದಕಾಯಕದಲ್ಲಿಯೇ ಜನಪದ ಹಾಸುಹೊಕ್ಕಾಗಿದೆ, ಹಳ್ಳಿಯಲ್ಲಿ ಜನರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡುತ್ತಿರುವಾಗ ಅವರ ಮಾತಿನ ರೂಪದಲ್ಲಿಯೇ ಗಾದೆ, ಒಗಟು, ಕಥೆ, ನಾಟಕ ಹೀಗೆ ಹಲವು ಬಗೆಯಲ್ಲಿ ಜನಪದರ ಮಾತು ಸಾಹಿತ್ಯರೂಪದಲ್ಲಿ ಸಹಜವಾಗಿ ಅಭಿವ್ಯಕಿಗೊಳ್ಳುತ್ತದೆ, ಕಠಿಣ ಪರಿಶ್ರಮದ ಕೆಲಸ ಮಾಡಿದರು ಕೂಡ ಅವರ ಮುಖದಲ್ಲಿ ಸಂತೋಷ, ನೆಮ್ಮದಿ, ಸಂತೃಪ್ತಿ ಕಂಡು ಬರುತ್ತದೆ, ಜನರ ಜನಪದ ಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೂ ಕಲಿಸುವ ಕೈಂಕರ್ಯಕ್ಕೆ ಪರಿಶುದ್ಧ ಮನಸ್ಸಿನಿಂದ ಕಂಕಣ ಬದ್ದರಾಗಿ ಶ್ರಮಿಸೋಣವೆಂದರು.

          ಈ ಸಂದರ್ಭದಲ್ಲಿ ಜಯಮ್ಮ, ಮಂಜುಳ, ಹನುಮಕ್ಕ, ನರಸಮ್ಮ ಸೋಬಾನೆ ಪದಗಳನ್ನು, ಕಲಾಕಾರ್ ಹುಲಿಕುಂಟೆ, ಹೆಂದೊರೆ ಮಂಜುನಾಥ್ ಜನಪದಗೀತೆ ಹಾಡಿದರು, ಪಾಂಡಪ್ಪ, ಗುಡ್ಡಯ್ಯ, ಲಕ್ಷ್ಮಣರವರು ಭಜನೆಪದ ಹೇಳಿದರು, ವಿದ್ಯಾರ್ಥಿಗಳು ಜನಪದ ನೃತ್ಯ ಮಾಡಿದರು, ಕಾರ್ಯಕ್ರಮದಲ್ಲಿ ಕ.ಜಾ.ಪ. ಜಂಟಿಕಾರ್ಯದರ್ಶಿ ದೇವರಾಜು.ಬಿ.ಆರ್.ಬಟ್ಟಿಗನಹಳ್ಳಿ, ಗೌಡಗೆರೆ ಹೋಬಳಿ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಹುಣಸೇಹಳ್ಳಿ, ಸಂಚಾಲಕರಾದ ನಾಗರಾಜು.ಹೆಚ್.ಹೊಸೂರು ಉಪಸ್ಥಿತರಿದ್ದು, ಕ.ಜಾ.ಪ ಶಿರಾತಾಲ್ಲೂಕು ಘಟಕದ ಅಧ್ಯಕ್ಷರಾದ ಶಿವಣ್ಣ ಹೆಚ್.ಜಿ ಹೆಂದೊರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

          ನಂತರ ಸುಪ್ರಸಿದ್ದ ಸಾಂಸ್ಕತಿಕ ವೀರ ಶಿರಾ ತಾಲ್ಲೂಕಿನ ಕಳುವರಹಳ್ಳಿ ಜುಂಜಪ್ಪನ ಗುಡ್ಡೆ ಜಾತ್ರೆಗೆ ತೆರಳಿ ಗಣೆ ಕಲಾವಿದರು ಹಾಗೂ ಅರೆ ವಾದ್ಯಕಲಾವಿದರನ್ನು ಸಂದರ್ಶಿಸಿ ದೇವಸ್ಥಾನ ಇತಿಹಾಸ, ಗಣೆ ಊದುವುದು, ಅರೆ ವಾದ್ಯ ಬಡಿಯುವುದು, ಚೇಳು ಮತ್ತು ದೀಪಕ್ಕೆ ಎಣ್ಣೆ ಹಾಕುವುದರ ವಿಶೇಷತೆ ಮತ್ತು ಜಾತ್ರೆಯ ಮಹತ್ವದ ಬಗ್ಗೆ ಚರ್ಚಿಸಿ ವೀಡಿಯೋ ದಾಖಲೀಕರಣ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಅರೆವಾದ್ಯ ಕಲಾವಿದ ಬಿ.ಕೆ ನರಸಿಂಹರಾಜು ಮತ್ತು ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link