ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ

ಚಳ್ಳಕೆರೆ

      ನಮ್ಮ ಹಿಂದೂ ಸಂಪ್ರದಾಯದಲ್ಲಿ ಅವಿಭಕ್ತ ಕುಟುಂಬಕ್ಕೆ ವಿಶೇಷ ಗೌರವವಿದ್ದು, ಅನಾದಿಕಾಲದಿಂದಲೂ ಮನೆಯ ಹಿರಿಯನ್ನು ಅನುಸರಿಸುವ ಪದ್ದತಿ ರೂಡಿಯಲ್ಲಿದೆ. ನಮ್ಮಲ್ಲಿನ ಹಿರಿಯರು ಅತಿ ಹೆಚ್ಚು ಅನುಭವವನ್ನು ಹೊಂದಿದ್ದು, ಯಾವುದೇ ವಿಷಯವನ್ನು ಸಹ ತಕ್ಷಣವೇ ಪರಿಹರಿಸುವ ಬುದ್ದಿ ಶಕ್ತಿ ಅವರಲ್ಲಿದೆ. ನಮ್ಮ ಹಿರಿಯರ ಅನುಭವದ ಮಾರ್ಗದರ್ಶನದಲ್ಲಿ ನಡೆದಲ್ಲಿ ಮಾತ್ರ ನಮ್ಮೆಲ್ಲರ ಬದುಕು ಸಾರ್ಥಕತೆಯನ್ನು ಕಾಣುವುದರಲ್ಲಿ ಸಂಶವಿಲ್ಲವೆಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವೇಂದ್ರ ಪಂಡಿತ್ ತಿಳಿಸಿದರು.

      ಅವರು, ಬುಧವಾರ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರೀಕರ ದಿನಾಚರಣೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

         ಇತ್ತೀಚಿನ ದಿನಗಳಲ್ಲಿ ನಮ್ಮನ್ನು ಹೊತ್ತು ಹೆತ್ತು ಸಾಕಿ ಬೆಳೆಸಿದ ದೇವರ ಸಮಾನರಾದ ತಂದೆ, ತಾಯಿಯವರನ್ನು ಅಗೌರವದಿಂದ ಕಾಣುತ್ತಾ, ಅಲಕ್ಷ ಮಾಡುತ್ತಾ ವೃದ್ದಾಶ್ರಮದಲ್ಲಿ ಬಲವಂತವಾಗಿ ಅಲ್ಲಿರುವಂತೆ ಮಾಡುವ ಕುರಿತು ಬಂಧ ಆರೋಪಗಳ ಹಿನ್ನೆಲೆಯಲ್ಲಿ ಹಿರಿಯರನ್ನು ಅಗೌರವಿಸುವವರ ವಿರುದ್ದ ಸೆಕ್ಷನ್ 125 ಸಿಆರ್‍ಪಿಸಿ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದ್ದು, 6 ತಿಂಗಳ ಜೈಲು ಶಿಕ್ಷೆ ಇರುತ್ತದೆ. ಪ್ರತಿಯೊಬ್ಬ ತಂದೆ ತಾಯಿಯು ತಮ್ಮ ಮಕ್ಕಳ ಹಿತ ಮತ್ತು ಸುಖವನ್ನು ಬಯಸುವ ಹೃದಯ ವೈಶಾಲತೆಯನ್ನು ಹೊಂದಿದ್ದು, ಇಂತಹವರ ಬಗ್ಗೆ ಹೆಚ್ಚು ಗೌರವವನ್ನು ನಾವೆಲ್ಲರು ಹೊಂದಬೇಕು ಎಂದು ಅವರು ತಿಳಿಸಿದರು.

        ಅಪರ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ ಮಾತನಾಡಿ, ಸರ್ಕಾರವೂ ಸಹ ಅನೇಕ ಸೌಲಭ್ಯಗಳನ್ನು ಹಿರಿಯ ನಾಗರೀಕರಿಗೆ ನೀಡಿದೆ. ಅವರ ದೂರ ದೃಷ್ಠಿಯ ಫಲವಾಗಿ ಇಂದು ನಾವೆಲ್ಲರೂ ಸುಖದಿಂದ ಬದುಕು ನಡೆಸುತ್ತಿದ್ದೇವೆ. ಹಿರಿಯ ನಾಗರೀಕರಲ್ಲಿ ವಿಶೇಷವಾಗಿ ಗ್ರಹಿಕಾ ಶಕ್ತಿ ಇದ್ದು, ಅವರು ತಮ್ಮ ಮಕ್ಕಳ, ಮೊಮ್ಮಕ್ಕಳ ಪಾಲನೆಗಾಗಿ ಇಂದಿಗೂ ಸಹ ಬೆಲೆ ಕಟ್ಟಲಾರದಂತಹ ಆಸ್ತಿಯನ್ನು ನಮಗೆ ನೀಡಿರುತ್ತಾರೆ. ಪ್ರತಿಯೊಬ್ಬ ನಾಗರೀಕನೂ ಸಹ ಹಿರಿಯರನ್ನು ಗೌರವಿಸುವ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.

       ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿ, ಮಕ್ಕಳು ಇದ್ದರೂ ಸಹ ಜನ್ಮ ನೀಡಿದ ತಂದೆ, ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟಲ್ಲಿ ಅವರು ಪ್ರತಿನಿತ್ಯ ನಮ್ಮ ಬಗ್ಗೆಯೇ ಚಿಂತಿಸಿ ಕೊರಗುತ್ತಾರೆ. ಸದಾಕಾಲ ಎಲ್ಲರೊಂದಿಗೆ ಬಾಳಿ ಬದುಕಿನ ಹಿರಿಯ ಜೀವಿಗಳನ್ನು ದೂರವಿಡುವುದು ಅನಾಗರೀಕ ವರ್ತನೆಯಾಗುತ್ತದೆ. ಕೇವಲ ಕಾನೂನಿಂದ ಮಾತ್ರ ಇಂತಹವುಗಳನ್ನು ಸರಿಪಡಿಸದೆ ಮಾನವೀಯ ಮೌಲ್ಯದಿಂದ ಹಿರಿಯರಿಗೆ ಸಲ್ಲಬೇಕಾದ ಗೌರವವನ್ನು ನಾವು ನೀಡಿದಾಗ ಮಾತ್ರ ನಮ್ಮ ಸಂಸ್ಕತಿಗೆ ಇನ್ನೂ ಹೆಚ್ಚಿನ ಬೆಲೆ ಬರುತ್ತದೆ ಎಂದರು.

       ಕಾರ್ಯಕ್ರಮವನ್ನು ಉದ್ದೇಶಿಸಿ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಬೋರಯ್ಯ,ವಕೀಲ ಎನ್.ತಿಪ್ಪೇಸ್ವಾಮಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ, ಕಂದಾಯ ಇಲಾಖೆಯಿಂದ ನೀಡಬೇಕಾದ ಸೌಲಭ್ಯಗಳನ್ನು ಹಿರಿಯರಿಗೆ ನೇರವಾಗಿ ತಲುಪಿಸುವ . ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷ ಯೋಜನೆ ಮುಂತಾದ ಕಾರ್ಯಕ್ರಮಗಳು ಹಿರಿಯರಿಗಾಗಿಯೇ ರೂಪಿಸಲಾಗಿದೆ. ಇದೇ ಸಂದರ್ಭದಲ್ಲಿ ತಾಲ್ಲೂಕಿನ ಸುಮಾರು 20ಕ್ಕೂ ಹೆಚ್ಚು ವೃದ್ದರಿಗೆ ವೃದ್ಧಾಪ್ಯ ವೇತನದ ಆದೇಶ ಪ್ರತಿಯನ್ನು ನ್ಯಾಯಾಧೀಶರು ನೀಡಿದರು.

    ವೃದ್ದರ ಪರವಾಗಿ ರೆಡ್ಡಿಹಳ್ಳಿ ತಿಪ್ಪೇಸ್ವಾಮಿ, ಕಸ್ತೂರಿ ತಿಮ್ಮನಹಳ್ಳಿ ಲಕ್ಷ್ಮಣ, ಸಮಸ್ಯೆಗಳ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಬಿ.ಪ್ರಭಾಕರ, ಮಾಜಿ ಕಾರ್ಯದರ್ಶಿ ಕುರುಡಿಹಳ್ಳಿ ಶ್ರೀನಿವಾಸ್, ಲಲಿತಮ್ಮ, ರಾಜೇಶ್ವರಿ, ಶಿರಸ್ತೇದಾರ್ ಚಂದ್ರಶೇಖರ್, ಕಂದಾಯಾಧಿಕಾರಿ ಶರಣಬಸಪ್ಪ, ಗ್ರಾಮ ಲೆಕ್ಕಾಧಿಕಾರಿಗಳಾ ರಾಜೇಶ್, ಲಿಂಗೇಗೌಡ, ಡಿ.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link