ದಾವಣಗೆರೆ:
ಹರಪನಹಳ್ಳಿ ಉಪವಿಭಾಗಾಧಿಕಾರಿ ಕಛೇರಿಯನ್ನು ಮರುವಿನ್ಯಾಸಗೊಳಿಸುವ ತೀರ್ಮಾನವನ್ನು ಪುನರ್‍ಪರಿಶೀಲಿಸಿ, ಹರಪನಹಳ್ಳಿಯಲ್ಲಿಯೇ ಉಪವಿಭಾಗಾಧಿಕಾರಿ ಕಛೇರಿಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗೂ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರುಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಪತ್ರ ಬರೆದಿದ್ದಾರೆ.
ಪ್ರಸ್ತುತ ದಾವಣಗೆರೆ ಜಿಲ್ಲೆ ಹರಪನಹಳ್ಳಿಯಲ್ಲಿರುವ ಉಪವಿಭಾಗಾಧಿಕಾರಿ ಕಛೇರಿಯನ್ನು 2018ರ ಅಕ್ಟೋಬರ್ 15ರಂದು ಕಂದಾಯ ಇಲಾಖೆಯ ಪ್ರಧಾನಕಾರ್ಯದರ್ಶಿಗಳ ಆದೇಶದಂತೆ ಮರುವಿನ್ಯಾಸಗೊಳಿಸಿ ಹರಪನಹಳ್ಳಿ ಉಪವಿಭಾಗದಲ್ಲಿದ್ದ ಹರಪನಹಳ್ಳಿಯನ್ನು ಹೊಸಪೇಟೆ ಉಪವಿಭಾಗಕ್ಕೆ ಹಾಗೂ ಜಗಳೂರನ್ನು ದಾವಣಗೆರೆ ಉಪವಿಭಾಗಕ್ಕೆ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ. ಆದರೆ, ಮುತ್ಸದ್ದಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್.ಪಟೇಲರ ಆಶಯ ಮತ್ತು ದೂರದೃಷ್ಟಿಯ ಕಾರಣದಿಂದ 1997ರಂದು ದಾವಣಗೆರೆ ಜಿಲ್ಲೆಯಾಗಿ ರಚನೆಯಾದಾಗಿನಿಂದ ಹರಪನಹಳ್ಳಿ ದಾವಣಗೆರೆ ಜಿಲ್ಲೆಯ ಉಪವಿಭಾಗವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.
ನಾಲ್ಕು ಹೋಬಳಿ ಕೇಂದ್ರಗಳನ್ನು ಹೊಂದಿರುವ ಹರಪನಹಳ್ಳಿ ನಂಜುಂಡಪ್ಪ ವರದಿಯನ್ವಯ ಅತ್ಯಂತ ಹಿಂದುಳಿದ ತಾಲ್ಲೂಕು ಎಂದು ಗುರುತಿಸಲ್ಪಟ್ಟಿದೆ. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನೋಡಿದರೆ ಅತ್ಯಂತ ಹಿಂದುಳಿದ ತಾಲ್ಲೂಕಿನಲ್ಲಿರುವ ಯಾವುದೇ ಸರ್ಕಾರಿ ಕಛೇರಿಗಳನ್ನು ಸ್ಥಳಾಂತರಗೊಳಿಸುವುದು ಅವೈಜ್ಞಾನಿಕ ಕ್ರಮವಾಗಿದೆ. ಹಿಂದುಳಿದ ತಾಲ್ಲೂಕುಗಳಲ್ಲಿರುವ ಸರ್ಕಾರಿ ಕಛೇರಿಗಳನ್ನು ಸಬಲೀಕರಣಮಾಡುವತ್ತ ಸರ್ಕಾರಗಳು ಗಮನಹರಿಸಬೇಕೆ ವಿನಾ ಸ್ಥಳಾಂತರ ಮಾಡುವುದು ಸರಿಯಲ್ಲ.
ಹರಪನಹಳ್ಳಿಯಿಂದ ಹೊಸಪೇಟೆ ಸುಮಾರು 80 ಕಿ.ಮೀ ದೂರವಿದೆ. ಹರಪನಹಳ್ಳಿ ತಾಲ್ಲೂಕು ಕೇಂದ್ರದಿಂದ 40 ರಿಂದ 50 ಕಿ.ಮೀ ದೂರವಿರುವ ಗ್ರಾಮಗಳ ಜನರು ಹೊಸಪೇಟೆಗೆ ಹೋಗಲು ನೂರಕ್ಕೂ ಹೆಚ್ಚು ಕಿ.ಮೀ. ಕ್ರಮಿಸಬೇಕು ಇದು ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿರುವ ತಾಲ್ಲೂಕಿನ ಜನರಿಗೆ ಆರ್ಥಿಕವಾಗಿ ಹೊರೆಯಾಗಲಿದೆ ಎಂದು ಸಂಸದರು ಪತ್ರದಲ್ಲಿ ಹರಪನಹಳ್ಳಿ ತಾಲೂಕಿನ ಜನರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಒಂದೆಡೆ 371 ಜೆ ಕಲಂ ಅನ್ವಯ ಸವಲತ್ತು ನೀಡುವ ನಿರ್ಧಾರ ಕೈಗೊಂಡು. ಇನ್ನೊಂದೆಡೆ ಸರ್ಕಾರಿ ಕಛೇರಿಗಳನ್ನು ಸ್ಥಳಾಂತರ ಮಾಡಿ ಸಾರ್ವಜನಿಕರ ಆರ್ಥಿಕ ಹೊರೆ ಹೆಚ್ಚಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿರುವ ಸಿದ್ದೇಶ್ವರ್, ಹರಪನಹಳ್ಳಿ ತಾಲ್ಲೂಕಿನಾದ್ಯಂತ ಸಾರ್ವತ್ರಿಕವಾಗಿ ಈ ಮರುವಿನ್ಯಾಸದ ತಿರ್ಮಾನಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ 371 ಜೆ ಕಲಂ ಸೌಲಭ್ಯ ಪಡೆಯಲು ಇಡೀ ತಾಲ್ಲೂಕಿನ ಸಾರ್ವಜನಿಕರು ನಿರಂತರ ಹೋರಾಟ ಮಾಡಿದ್ದಾರೆ, ಈಗ ಪುನ: ಉಪವಿಭಾಗವನ್ನು ಹರಪನಹಳ್ಳಿಯಲ್ಲಿಯೇ
ಉಳಿಸಿಕೊಳ್ಳಲು ಮತ್ತೊಂದು ಸುತ್ತಿನ ಹೋರಾಟ ಮಾಡಲು ಸಾರ್ವಜನಿಕರು, ಸಂಘ-ಸಂಸ್ಥೆಗಳು, ಧಾರ್ಮಿಕ ಮಠಾಧೀಶರುಗಳ ಕೈಯಿಗೆ ಸರ್ಕಾರವೇ ಶಸ್ತ್ರ ನೀಡಿದಂತಾಗಿದೆ. ಆದ್ದರಿಂದ ಹರಪನಹಳ್ಳಿ ಉಪವಿಭಾಗವನ್ನು ಹೊಸಪೇಟೆಗೆ ಉಪವಿಭಾಗಕ್ಕೆ ಸೇರಿಸಿ ಮರುವಿನ್ಯಾಸಗೊಳಿಸುವ ತೀರ್ಮಾನವನ್ನು ಪುನರ್‍ಪರಿಶೀಲಿಸಿ ಹರಪನಹಳ್ಳ ಉಪವಿಭಾಗವನ್ನು ಮುಂದುವರೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಸಂಸದರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ