ಹಿರಿಯೂರು:
ತಾಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಒಂದು ಕೋಟಿ ರೂ ವೆಚ್ಚದ ರೇವಣಸಿದ್ದೇಶ್ವರ ಭವನ ಏಳು ವರ್ಷಗಳು ಕಳೆದರೂ ಪೂರ್ಣ ಮಾಡದೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ನಾಪತ್ತೆಯಾಗಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.
ಕಾಗಿನೆಲೆ ಕನಕಗುರುಪೀಠದ ಜಗದ್ಗುರುಗಳಾದ ಶ್ರೀನಿರಂಜನಾನಂದಪುರಿ ಮಹಾಸ್ವಾಮೀಜಿಗಳೂ ಹುಟ್ಟೂರಿನ ಮೇಲೆ ಅಪಾರ ಪ್ರೀತಿ ಮತ್ತು ಆಸಕ್ತಿ ವಹಿಸಿ ಸಿದ್ದರಾಮಯ್ಯ ಅವರಿನ್ನೂ ಪ್ರತಿಪಕ್ಷನಾಯಕರಾಗಿದ್ದ ಸಮಯದಲ್ಲಿ ಒಂದು ಕೋಟಿ ರೂ ವೆಚ್ಚದ ಸುಸಜ್ಜಿತ ಶ್ರೀರೇವಣಸಿದ್ದೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಸಿದ್ದರಾಮಯ್ಯ ಅವರಿಂದಲೇ ಭೂಮಿಪೂಜೆ ನೆರವೇರಿಸಿ ಹರ್ತಿಕೋಟೆಯಲ್ಲಿ ಅದ್ದೂರಿ ಕನಕ ಜಯಂತೋತ್ಸವ ಆಚರಿಸಿದ್ದರು.
ಸಮುದಾಯ ಭವನದ ಗುತ್ತಿಗೆದಾರನಾದ ಹೆಚ್.ಟಿ.ಸತ್ಯೇಂದ್ರಬಾಬು ಅವರು ಈಗಾಗಲೇ 75 ಲಕ್ಷರೂಗಳನ್ನು ಸ್ವೀಕರಿಸಿದ್ದು ಹಣ ಪಡೆದ ನಂತರ ಕಾಮಗಾರಿ ಮಾಡದೆ ಪೋನ್ ಸ್ವಿಚ್ ಆಪ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಅಲ್ಲದೆ ಸೂಕ್ತ ಉತ್ತರ ನೀಡದೇ ತಲೆ ಮರೆಸಿಕೊಂಡಿದ್ದಾರೆ ಎಂದು ಸ್ಥಳೀಯರು ನೋವು ತೋಡಿಕೊಂಡಿದ್ದಾರೆ.
ಇತ್ತ ಶೇ30ರಷ್ಟು ಕಾಮಗಾರಿ ಮಾಡಿದ್ದು ಉಳಿದಂತೆ ಮಾಡದೆ ಅತ್ತ ಗುತ್ತಿಗೆದಾರರು ಬಾರದೆ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಿಂದ ಮುಖ್ಯಮಂತ್ರಿಗಳಾಗಿ ಸುಧೀರ್ಘ ಐದು ವರ್ಷಗಳ ಅಧಿಕಾರ ಮಾಡಿ ಈಗ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದರೂ ಇನ್ನೂ ಹರ್ತಿಕೋಟೆಯಲ್ಲಿ ಭವನ ಮಾತ್ರ ಪೂರ್ಣಗೊಂಡಿಲ್ಲದಿರುವುದು ದುರಂತ ಸಂಗತಿಯಾಗಿದೆ.
ಅರ್ಧಂಬರ್ಧ ಆಗಿರುವ ಕಟ್ಟಡ ಕಾಮಗಾರಿ ಆರು ವರ್ಷಗಳ ನಂತರ ಶಿಥೀಲಾವಸ್ಥೆ ತಲುಪುವ ಮುನ್ನ ಗ್ರಾಮಸ್ಥರು, ಮುಖಂಡರು, ಸಮಾಜದ ಬಂಧುಗಳು, ಯುವಕರು ಸಭೆ ಸೇರೆ ಶ್ರೀಗಳ ಮಾರ್ಗದರ್ಶನದಂತೆ ಎಲ್ಲರೂ ಒಗ್ಗೂಡಿ ಭವನವನ್ನು ಪೂರ್ಣ ಗೊಳಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಚಿತ್ರದುರ್ಗ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಶ್ರೀರಾಮ್ ಮನವಿ ಮಾಡಿದ್ದಾರೆ.ತಾಲೂಕಿನಲ್ಲಿ ಎಲ್ಲಾ ಕಡೆ ವಿವಿಧ ಸಮಾಜಗಳ ಸಮುದಾಯ ಭವನಗಳು ಪೂರ್ಣವಾಗಿ ಎಲ್ಲ ಬಳಕೆಯಲ್ಲಿದ್ದರೂ ಹರ್ತಿಕೋಟೆ ಭವನಕ್ಕೆ ಮಾತ್ರ ಗ್ರಹಣ ಹಿಡಿದಿದೆ ಎಂದು ಗ್ರಾಮಸ್ಥರು ಬೇಸರ ಹೊರಹಾಕಿದ್ದಾರೆ.
ತಾಲೂಕಿನಲ್ಲಿ ಎಲ್ಲಿಯೂ ಕುರುಬರಿಗೆ ಭವನಗಳಿಲ್ಲ. ಹರ್ತಿಕೋಟೆ ಗ್ರಾಮದಲ್ಲಿ ಹೆದ್ದಾರಿ ಪಕ್ಕದಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಹೀಗೆ ಅರೆಬರೆಯಾಗಿ ನಿಂತಿರುವ ಭವನ ಕಂಡರೆ ಕೇವಲ ಕುರುಬರಷ್ಠೇ ಅಲ್ಲದೆ ಎಲ್ಲರೂ ಬೇಸರ ಹೊರಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
