ಮಧುಗಿರಿ
ತಾಲ್ಲೂಕಿನ ಎಲ್ಲಾ ಹಳ್ಳಿಗಳ ಬಹುತೇಕ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವುದು ಸರಿಯಷ್ಟೆ. ಆದರೆ ಅಬಕಾರಿ ಇಲಾಖೆ ಅಧಿಕಾರಿಗಳು ಈ ಕುರಿತಂತೆ ಪ್ರಕರಣ ದಾಖಲಿಸುವಲ್ಲಿ ತಾರತಮ್ಯ ತೋರಿ ರಾಜಕೀಯ ಮಾಡುತ್ತಿದ್ದಾರೆಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ 2019-20 ನೇ ಸಾಲಿನ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಬಕಾರಿ ಅಧಿಕಾರಿಗಳು ಪಾರದರ್ಶಕವಾಗಿ ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಜಿಲ್ಲಾ ಮಟ್ಟದ ಬಹುತೇಕ ಕಚೇರಿಗಳು ತಾಲ್ಲೂಕಿನಲ್ಲಿವೆ. ಈಗಾಗಲೇ ಮುಖ್ಯಮಂತ್ರಿ, ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದೇನೆ.
ಮಧುಗಿರಿ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಬಗ್ಗೆ 22 ಪುಟಗಳ ವರದಿಯನ್ನು ಸಲ್ಲಿಸಿರುತ್ತೇನೆ. ಈ ನಿಟ್ಟಿನಲ್ಲಿ ಇಲ್ಲಿಯವರೆಗೂ ಮಧುಗಿರಿ ತಾಲ್ಲೂಕಿನಲ್ಲಿ ಈ ಹಿಂದೆ ಇದ್ದ ಜನ ಪ್ರತಿನಿಧಿಗಳು ಬೆಂಬಲಿಸಿ ಮಧುಗಿರಿಯ ಋಣ ತೀರಿಸಿಬೇಕು ಎಂದರು.
ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಪೌಷ್ಟಿಕ ಆಹಾರ ನೀಡುವುದಲ್ಲದೆ, ಅವರ ವಿದ್ಯಾಭ್ಯಾಸದ ಗುಣಮಟ್ಟ ಹೆಚ್ಚಿಸಲು ಪ್ರತ್ಯೇಕ ತರಗತಿಗಳನ್ನು ವ್ಯವಸ್ಥೆ ಮಾಡುವಂತೆ ಹಿಂದುಳಿದ ವರ್ಗಗಳ ಇಲಾಖೆ ವಿಸ್ತರಣಾಧಿಕಾರಿ ಅನಂತರಾಜಯ್ಯನವರಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಮರ್ಪಕ ವೇಳೆಯಲ್ಲಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಅಧಿಕಾರಿಗೆ ಸೂಚಿಸಿದರು. ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ಇಒ ಗೆ ಸೂಚಿಸಿದರು.
ತಾಲ್ಲೂಕಿನಲ್ಲಿ ರುದ್ರ ಭೂಮಿಗಳಿಲ್ಲದಿರುವ ಕಡೆ ಸರ್ಕಾರಿ ಜಾಗವನ್ನು ಗುರುತಿಸುವಂತೆ ತಹಸೀಲ್ದಾರ್‍ಗೆ ಸೂಚಿಸಿದರು. ಕೆ.ಆರ್.ಐ.ಡಿ.ಎಲ್ ಮತ್ತು ನಿರ್ಮಿತಿ ಕೇಂದ್ರದವರು ನಿರ್ಲಕ್ಷ್ಯ ತೋರುತ್ತಿರುವುದರಿಂದ ಕ್ಷೇತ್ರದ ಅಭಿವೃದ್ದಿಗೆ ಕುಂಠಿತವಾಗಿದೆ. ಇದೊಂದು ದುರಂತ ಎಂದರು. ಮುಂಬರುವ ದಿನಗಳಲ್ಲಿ ಪ್ರತಿ ಪಂಚಾಯಿತಿಗಳಲ್ಲಿ ಪಂಚಾಯಿತಿ ಕಟ್ಟೆ ನಿರ್ಮಿಸಿ ರೈತರಿಗೆ ಅವರ ಸಾಲಮನ್ನಾವಾಗಿರುವ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಸರ್ಕಾರದ ಅಭಿವೃದ್ದಿಗಳ ಬಗ್ಗೆ ತಿಳಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೊಂಡವಾಡಿ ತಿಮ್ಮಯ್ಯ ಮಾತನಾಡಿ, ಪುರವರ ಕ್ಷೇತ್ರವನ್ನು ಎಲ್ಲಾ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಇದೇ ರೀತಿ ಮುಂದುವರೆದರೆ ಅಧಿಕಾರಿಗಳ ವಿರುದ್ದ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಸದಸ್ಯರಾದ ಚೌಡಪ್ಪ, ಮಂಜುಳಾ ಆದಿನಾರಾಯಣರೆಡ್ಡಿ, ಕೊಂಡವಾಡಿ ತಿಮ್ಮಯ್ಯ, ಜಿ.ಪಂ.ಸದಸ್ಯ ಎಚ್.ಕೆಂಚಮಾರಯ್ಯ ತಾ.ಪಂ.ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ಎ.ರಾಜು ತಹಸೀಲ್ದಾರ್ ನಂದೀಶ್, ಇಒ ಕೆ.ಆರ್.ನಂದಿನಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಿಕ್ಕಓಬಳರೆಡ್ಡಿ, ಲೋಕೋಪಯೋಗಿ ಇಲಾಖೆಯ ಎಇಇ ಹೊನ್ನೇಶಪ್ಪ, ಜಿ.ಪಂ.ಎಇಇ ಸುರೇಶ್‍ರೆಡ್ಡಿ, ಪಶು ಇಲಾಖೆಯ ಸಹಾಯಕ ನಿರ್ದೇಶಕ ರೆ.ಮಾ.ನಾಗಭೂಷಣ್, ಬಿಇಓ ರಂಗಪ್ಪ, ಸಮಾಜ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ, ಕೃಷಿ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ