ಬೆಂಗಳೂರು
ದೇಶದಲ್ಲಿ ಬಲಪಂಥೀಯ ಚಿಂತನೆ ಬಲಗೊಳ್ಳುತ್ತಿದ್ದು, ಜನರನ್ನು ದಾರಿತಪ್ಪಿಸುವ ಕೆಲಸ ನಡೆಯುತ್ತಿದೆ. ಕೇಂದ್ರ ಬಿಜೆಪಿ ನಾಯಕರು ಪಾಕಿಸ್ತಾನ ಮಾದರಿಯಲ್ಲಿಯೇ ಭಾರತವನ್ನು ಮೂಲಭೂತವಾದಿ ರಾಷ್ಟ್ರವನ್ನಾಗಿ ಪರಿವರ್ತಿಸುತ್ತಿದ್ದಾರೆ. ಸರ್ಕಾರವೇ ತಪ್ಪನ್ನು ಎಸಗಿದರೆ ದೇಶದ ಮುಂದಿನ ಭವಿಷ್ಯ ಏನಾಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿಂದು ಕೆಪಿಸಿಸಿ ಕಾನೂನು ಘಟಕದಿಂದ ಆಯೋಜಿಸಲಾಗಿದ್ದ ಕಾಂಗ್ರೆಸ್ ಲೋಕಸಭಾ ಚುನಾವಣಾ ಚಿಂತನಾ ಸಭೆ?ಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಕೋಮುವಾದಿ ಸರ್ಕಾರ ಅಧಿಕಾರದಲ್ಲಿದ್ದು, ಮಾಧ್ಯಮಗಳು ಕೋಮುವಾದಿ ಸರ್ಕಾರದ ವಿರುದ್ಧ ಮಾತನಾಡದಂತೆ ಭಯಭೀತಿ ಸೃಷ್ಟಿಸಲಾಗಿದೆ.
ಹಿಂದುತ್ವ ರಾಷ್ಟ್ರ ನಿರ್ಮಾಣಕ್ಕಾಗಿ ಜೈ ಶ್ರೀರಾಮ್ ಹೆಸರಿನಲ್ಲಿ ಜನರನ್ನು ಹತ್ಯೆಗೈಯ್ಯಲಾಗುತ್ತಿದೆ. ಸುಳ್ಳನ್ನು ಸತ್ಯ ಎಂದು ಬಿಂಬಿಸುವ ಪ್ರಯತ್ನ ಬಿಜೆಪಿಯಿಂದ ನಡೆಯುತ್ತಿದೆ. ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ದೇಶ ಸರ್ವನಾಶವಾಗಲಿದೆ ಎಂದು ಅವರು ಎಚ್ಚರಿಕೆಯ ಮಾತುಗಳನ್ನಾಡಿದರು.
ಜನರು ಇದನ್ನೇ ತಿನ್ನಬೇಕು. ಇಂತಹದ್ದನ್ನೇ ಆಚರಿಸಬೇಕು ಎಂದು ಒತ್ತಡ ಹೇರಲಾಗುತ್ತಿದ್ದು, ಸರ್ವಾಧಿಕಾರಿ ಅಡಿಯಲ್ಲಿ ದೇಶ ನಲುಗುತ್ತಿದೆ. ದೇಶದಲ್ಲಿ ಸೃಷ್ಟಿಯಾಗಿರುವ ಕೆಟ್ಟ ಚಿಂತನೆಯುಳ್ಳ ಕೆಟ್ಟ ಸರ್ಕಾರ ತೊಲಗಬೇಕಿದೆ. ಕೇಂದ್ರ ಬಿಜೆಪಿ, ಆದಾಯ ತೆರಿಗೆ, ಸಿಬಿಐ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದರ ವಿರುದ್ಧ ಧ್ವನಿಯೆತ್ತುವವರ ಮೇಲೆ ಬೆದರಿಕೆ ಒಡ್ಡಲಾಗುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಪ್ರಗತಿಪರ ಚಿಂತಕರಾದ ಕಲ್ಬುರ್ಗಿ, ಪನ್ಸಾರೆ, ದಾಬೋಲ್ಕರ್, ಗೌರಿ ಲಂಕೇಶ್ ಅವರನ್ನು ಹತ್ಯೆಗೈದವರು ಯಾರು ? ಎಂದು ಅವರು ಪ್ರಶ್ನಿನಿಸಿದರು.
ಪ್ರಜಾಪ್ರಭುತ್ವ ಬಗ್ಗೆ ಮಾತನಾಡುವವರಿಗೆ ಕೇಂದ್ರ ಬಿಜೆಪಿ ನಾಯಕರು ದೇಶದ್ರೋಹದ ಪಟ್ಟಿಕಟ್ಟುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿ ಪಕ್ಷಕ್ಕೆ ತಕ್ಕಪಾಠ ಕಲಿಸಬೇಕಿದೆ. ಕಾಂಗ್ರೆಸ್ ಪಕ್ಷದವರೇ ಪ್ರಧಾನಿಯಾಗಬೇಕು ಎನ್ನುವುದಕ್ಕಿಂತ ಕೋಮುವಾದಿ ಸರ್ಕಾರ ತೊಲಗುವುದು ಮುಖ್ಯ. ಈ ಬಗ್ಗೆ ದೇಶದ ಜನರು ಅರಿತುಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಕರೆ ನೀಡಿದರು.ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಮಧುಯಸ್ಕಿಗೌಡ, ಶಾಸಕಿ ಸೌಮ್ಯಾರೆಡ್ಡಿ, ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಧನಂಜಯ, ವಕೀಲರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.