ದಾವಣಗೆರೆ:
ಗ್ರಹಣದ ದಿನದಂದು ಮನೆಯಿಂದ ಹೊರಗಡೆ ಬರಬಾರದು, ಸೂರ್ಯನನ್ನು ನೋಡಬಾರದು, ಉಪಹಾರ ಸೇವಿಸಬಾರದೆಂಬ ಕಪೋಲಕಲ್ಪಿತ ಭಯದಿಂದ ಇಂದಿಷ್ಟು ಜನರು ಮನೆಯಿಂದ ಹೊರ ಬಂದು ದೇವನಗರಿಯಲ್ಲಿ ಗುರುವಾರ ಸೌರಮಂಡಲದಲ್ಲಿ ಸಂಭವಿಸಿದ ಅಪರೂಪದ ಕಂಕಣ ಸೂರ್ಯ ಗ್ರಹಣವನ್ನು ವೀಕ್ಷಿಸಿ ಪುಳಕಿತಗೊಂಡರು.
ಹೌದು… ಗ್ರಹಣದ ಭಯದಿಂದ ನಗರದಲ್ಲಿ ಬಹುತೇಕರು ಮನೆಯಿಂದ ಹೊರ ಬಾರದ ಕಾರಣ ರಸ್ತೆ, ಬೀದಿ ಬಿಕೋ ಎನ್ನುತ್ತಿದ್ದರೆ, ಇಂದಿಷ್ಟು ಜನರು ಗ್ರಹಣದ ಬಗ್ಗೆ ಮನೆ ಮಾಡಿರುವ ಮೌಢ್ಯದಿಂದ ಹೊರ ಬಂದು ಎಕ್ಷರೇ, ಟೆಲಿಸ್ಕೋಪ್, ವೆಂಡಲ್ರ್ಸ್ ಗ್ಲಾಸ್, ಕನ್ನಡಕಗಳ ನೆರವಿನಿಂದ ಗುರುವಾರ ಬೆಳಿಗ್ಗೆ 8.05ರಿಂದ 11.04ರ ವರೆಗೆ ಸೌರ ಮಂಡಲದಲ್ಲಿ ಸೂರ್ಯ, ಚಂದ್ರ ಮತ್ತು ಭೂಮಿಯ ನಡುವೆ ಸಂಭವಿಸಿದ ವಿಸ್ಮಯಕಾರಿ, ಕೌತುಕದ ಕಂಕಣ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.
ನಗರದ ಪ್ರೌಢಶಾಲಾ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಮನೆ ಮನೆ ವಿಜ್ಞಾನ ದಾಸೋಹ ಕಾರ್ಯಕ್ರಮ ಬಳಗದ ಸಂಯುಕ್ತಾಶ್ರಯದಲ್ಲಿ ಸುರ್ಯೋತ್ಸವ-2019 ಘೋಷಣೆ ಅಡಿಯಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಯುವಜನರು, ನೌಕರರು, ಹಿರಿಯ ನಾಗರೀಕರು, ಸಾರ್ವಜನಿಕರು ಕನ್ನಡಕ, ಟೆಲಿಸ್ಕೋಪ್, ಎಕ್ಸರೇ ಕಾರ್ಡ್ ಮೂಲಕ ಕಂಕಣ ಸೂರ್ಯ ಗ್ರಹಣ ವೀಕ್ಷಿಸಿ, ಕಾರ ಮಂಡಕ್ಕಿ ಸವಿದು ಗ್ರಹಣದ ಬಗ್ಗೆ ಮನೆ ಮಾಡಿದ್ದ ಮೌಢ್ಯವನ್ನು ಹೊಡೆದು ಹಾಕಿದರು.
ಈ ಸಂದರ್ಭದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಕನ್ನಡಕ ವಿತರಿಸಿ ಮಾತನಾಡಿದ ಡಯಟ್ ಪ್ರಾಂಶುಪಾಲ ಎಚ್.ಕೆ.ಲಿಂಗರಾಜ್, ಗ್ರಹಣವೆಂಬ ಭಯದಿಂದ ಜನರು ಹೊರ ಬಂದು, ಬಾಹ್ಯಾಕಾಶದ ವಿಸ್ಮಯಕಾರಿ ಘಟನೆಗಳನ್ನು ಕಣ್ಣಾರೆ ಕಾಣಬೇಕು. ಗ್ರಹಣವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಆಸಕ್ತಿ ಎಲ್ಲರಲ್ಲೂ ಮೂಡಬೇಕು ಎಂದು ಸಲಹೆ ನೀಡಿದರು.
ಆಧುನಿಕ ಯುಗದಲ್ಲೂ ಜನರು ಮೂಢನಂಬಿಕೆಯಲ್ಲಿ ಬದುಕುತ್ತಿದ್ದಾರೆ. ಗ್ರಹಣದಂದು ತಾವೂ ಹೊರಗೆ ಬರದೆ, ಮಕ್ಕಳೂ ಸೇರಿದಂತೆ ಕುಟುಂಬ ಸದಸ್ಯರನ್ನೂ ಹೊರಗೆ ಬಿಡದೇ ಮನೆಯಲ್ಲೇ ಕಾಲ ಕಳೆಯುತ್ತಾರೆ. ಗ್ರಹಣ ಕಾಲದಲ್ಲಿ ಅಡುಗೆ ಮಾಡುವುದಿಲ್ಲ, ಪೂಜೆ ಮಾಡುವುದಿಲ್ಲ, ವ್ಯವಹಾರ ನಡೆಸುವುದಿಲ್ಲ. ಗ್ರಹಣ ಮುಗಿದ ನಂತರ ಸ್ನಾನ, ಪೂಜೆ, ತಿಂಡಿ, ಊಟ ಎಂಬ ಧೋರಣೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ಗ್ರಹಣದಿಂದ ಎಲ್ಲರೂ ಭಯಭೀತರಾಗಿದ್ದಾರೆ. ಗ್ರಹಣ ನೋಡಿದರೆ ನನಗೆ, ನನ್ನ ಕುಟುಂಬಕ್ಕೆ ಏನೋ ತೊಂದರೆಯಾಗುತ್ತದೆಂಬ ಭಯ, ಯೋಚನೆಯಲ್ಲಿದ್ದಾರೆ. ಮಕ್ಕಳಿಗೆ, ವಿದ್ಯಾರ್ಥಿ, ಯುವ ಜನರು, ಸಾರ್ವಜನಿಕರಿಗೆ ಪ್ರಾಯೋಗಿಕ ಜ್ಞಾನ ಅತೀ ಮುಖ್ಯ ಎಂದರು.
ಪರಿಷತ್ ಜಿಲ್ಲಾಧ್ಯಕ್ಷ ಡಾ.ಬಿ.ಇ.ರಂಗಸ್ವಾಮಿ ಮಾತನಾಡಿ, ಮುಂದುವರಿದ ವಿಜ್ಞಾನ ಯುಗದಲ್ಲಿ ಇಂದಿನ ಮಕ್ಕಳಲ್ಲಿ ಸೂರ್ಯ, ಚಂದ್ರಗ್ರಹಣದ ಬಗ್ಗೆ ಅರಿವು ಮೂಡಿಸುವುದು ಅತೀ ಮುಖ್ಯವಾಗಿದೆ. ಬರೀ ಓದಿ, ಪುಸ್ತಕದಲ್ಲಿ ಚಿತ್ರ ನೋಡಿ ತಿಳಿದರಷ್ಟೇ ಸಾಲದು. ಸೌರವ್ಯೂಹದ ಇಂತಹ ಕುತೂಹಲಗಳನ್ನು ಕಣ್ಣಾರೆ ಕಾಣಬೇಕು. ಮೂಢನಂಬಿಕೆಯಿಂದ ಜನರು ಹೊರ ಬರಬೇಕಿದೆ. ಚಿಕ್ಕಮಕ್ಕಳೂ ಸಹ ಯಾವುದೇ ಭಯವಿಲ್ಲದೇ ಅದಕ್ಕೆ ನೀಡುವ ಕನ್ನಡಕದ ಸಹಾಯದಿಂದ ಗ್ರಹಣ ವೀಕ್ಷಿಸಬಹುದು. ತಿಂಡಿ, ಊಟ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಿಷತ್ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ, ಬಳಗದ ಎಂ.ಟಿ.ಶರಣಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಾಲಾಕ್ಷಿ, ಸಂಪನ್ಮೂಲ ವ್ಯಕ್ತಿ ಎ.ಜಿ.ವೀರೇಶ, ಕೆ.ಸಿ.ಬಸವರಾಜ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಸಿದ್ದೇಶ್, ಹೈಸ್ಕೂಲ್ ಶಿಕ್ಷಕರ ಸಂಘದ ಅಧ್ಯಕ್ಷ ಹಾಲೇಶಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುಬಾರಕ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ