ತುಮಕೂರು
ತುಮಕೂರು ನಗರವು ಸ್ಮಾರ್ಟ್ ಸಿಟಿ ಆಗುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಶರವೇಗದಲ್ಲಿ ಕೈಗೊಳ್ಳಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಹಲವಾರು ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಆದರೆ ನಗರದ ಹೊರಭಾಗದಲ್ಲಿರುವ ರಿಂಗ್ ರಸ್ತೆಯನ್ನು ಕೈಬಿಟ್ಟಿದ್ದಾರೆ ಎಂಬಂತೆ ಈ ರಸ್ತೆಯು ಅಭಿವೃದ್ಧಿಯಿಂದ ಮರೀಚಿಕೆಯಾಗಿತ್ತು.
ನಗರದ ಹೊರಭಾಗದಲ್ಲಿ ಹಾದು ಹೋಗಿರುವ ರಿಂಗ್ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಬೃಹತ್ ಗಾತ್ರದ ವಾಹನಗಳಿಗೆ ನಗರದೊಳಗೆ ಪ್ರವೇಶ ಇಲ್ಲವಾದ್ದರಿಂದ ರಿಂಗ್ ರಸ್ತೆ ಮೂಲಕವೆ ಓಡಾಡಬೇಕು. ಈ ರಸ್ತೆಯುದ್ದಕ್ಕೂ ಹಲವು ಸಮಸ್ಯೆಗಳು ಕಂಡುಬರುತ್ತಿವೆ. ಧೂಳು, ಕಸ, ಅಲ್ಲಲ್ಲಿ ದುರ್ವಾಸನೆ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ.
ಗುಬ್ಬಿ ಗೇಟ್‍ನ ಬಳಿ ಪ್ರಾರಂಭವಾಗುವ ರಿಂಗ್ ರಸ್ತೆಯು ಕ್ಯಾತ್ಸಂದ್ರ ಬಳಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ. ರಿಂಗ್ ರಸ್ತೆಯ ಪ್ರಾರಂಭದಲ್ಲಿ ಕಬ್ಬಿಣದ ಮಾರುಕಟ್ಟೆ ಇದ್ದು ನಿತ್ಯ ನೂರಾರು ವಾಹನಗಳು ನಿಲ್ಲುತ್ತವೆ. ದಾನಃ ಪ್ಯಾಲೆಸ್‍ನಿಂದ ಮುಂದೆ ಬಂದರೆ ವಿವಿಧ ಕಾಲೇಜುಗಳಿಗೆ ಕಿರಿದಾದ ರಸ್ತೆಗಳು ಹಾದು ಹೋಗಿವೆ. ಕುಣಿಗಲ್ ವೃತ್ತದಿಂದ ಬೆಂಗಳೂರು ಕಡೆಗೆ ಬಂದರೆ ಎರಡ್ಮೂರು ಶಾಲಾ ಕಾಲೇಜುಗಳಿವೆ ಹಾಗೂ ಎರಡು ಆಸ್ಪತ್ರೆಗಳು ಇವೆ. ಇದರಿಂದ ಈ ಮಾರ್ಗದಲ್ಲಿ ಜನಸಂದಣಿ ಹೆಚ್ಚಾಗಿರುವುದು ಸರ್ವೇ ಸಾಮಾನ್ಯ. ಆದರೆ ಈ ರಸ್ತೆಯಲ್ಲಿ ಸಮಸ್ಯೆಗಳೇ ಸಂಖ್ಯೆಯೂ ಹೆಚ್ಚಾಗುತ್ತಿದೆ.
ರಸ್ತೆ ಮಧ್ಯೆ ಹಳ್ಳಕೊಳ್ಳಗಳು
ರಸ್ತೆಮೇಲೆ ಗುಂಡಿ ಗುದ್ದರಗಳು ಬಿದ್ದಿರುವುದನ್ನು ಕಾಣಬಹುದು. ಆದರೆ ಈ ರಸ್ತೆಯಲ್ಲಿ ಹಳ್ಳಕೊಳ್ಳಗಳೇ ಹೆಚ್ಚಾಗಿ ಕಂಡು ಬರುತ್ತವೆ. ಮಳೆ ಬಂದರೆ ಸುಮಾರು 2 ಅಡಿಯಷ್ಟು ಆಳ ನೀರು ನಿಂತುಕೊಳ್ಳುತ್ತದೆ. ದ್ವಿಚಕ್ರವಾಹನಗಳು ಓಡಾಡುವುದು ಕಷ್ಟಸಾಧ್ಯವಾಗಿದೆ. ನಾಲ್ಕುಚಕ್ರದ ವಾಹನಗಳು ಕೂಡ ಒಮ್ಮೆ ಈ ರಸ್ತೆಯಲ್ಲಿ ಚಲಿಸಿದರೆ ವಾಹನದ ಭಾಗಗಳು ಒಂದು ಕೂಡ ಸರಿಯಾದ ಸ್ಥಳದಲ್ಲಿ ಇರುವುದಿಲ್ಲ.
ಗುಬ್ಬಿ ರಸ್ತೆಯಿಂದ ಕುಣಿಗಲ್ ವೃತ್ತದವರೆಗೆ ದೊಡ್ಡ ಗುಂಡಿಗಳು ಕಂಡು ಬಂದರೆ, ಕುಣಿಗಲ್ ವೃತ್ತದಿಂದ ಮುಂದಕ್ಕೆ ಸಣ್ಣಪುಟ್ಟ ಗುಂಡಿಗಳು ವಾಹನಗಳಿಗೆ ಕಿರಿಕಿರಿ ನೀಡುತ್ತಿವೆ. ರಸ್ತೆಗೆ ಟಾರ್ ಹಾಕುವಾಗ ತಾರತಮ್ಯ ಮಾಡಿ, ಒಂದು ಭಾಗದಲ್ಲಿ ಎತ್ತರವಾಗಿ ಟಾರ್ ಹಾಕಿದರೆ ಇನ್ನೊಂದು ಭಾಗದಲ್ಲಿ ಟಾರ್ ಹಾಕುವುದು ಬಿಟ್ಟಂತೆ ಕಾಣುತ್ತದೆ. ಇದರಿಂದ ವಾಹನಗಳು ಯಾವ ವೇಳೆಯಲ್ಲಿ ಜಾರಿ ಬೀಳುತ್ತವೆ ಎಂಬುದು ತಿಳಿಯುದೇ ಇಲ್ಲ.
ಕುಣಿಗಲ್ ವೃತ್ತದಲ್ಲಿ ಮಾತ್ರ ರಸ್ತೆ ಅಭಿವೃದ್ಧಿ
ನಗರದಿಂದ ಕುಣಿಗಲ್‍ಗೆ ಹೋಗುವಾಗ ರಿಂಗ್ ರಸ್ತೆಯನ್ನು ದಾಟಿಕೊಂಡೆ ಹೋಗಬೇಕು. ಕಳೆದ ವರ್ಷದಲ್ಲಿ ರಸ್ತೆ ಅಗಲೀಕರಣ ಮಾಡಿ ಅಭಿವೃದ್ಧಿ ಪಡಿಸಿದ ಅಧಿಕಾರಿಗಳು ನಂತರ ಅದರ ಬಗ್ಗೆ ಗಮನವೇ ಹರಿಸಿಲ್ಲ ಎಂಬಂತೆ ಕಾಣುತ್ತಿದೆ. ಕುಣಿಗಲ್ ರಸ್ತೆಯು ಅಭಿವೃದ್ಧಿಗೊಂಡಿದ್ದು ನಗರದ ರಿಂಗ್ ರಸ್ತೆ ಮಾತ್ರ ಹದೆಗಟ್ಟುಹೋಗಿದೆ. ಈ ರಸ್ತೆಯಲ್ಲಿ ವಾಲ್ಮೀಕಿ ಭಾವಚಿತ್ರವನ್ನಿಟ್ಟು ವಾಲ್ಮೀಕಿ ವೃತ್ತವೆಂದು ಹೆಸರಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾದರೂ ಮುಂದೆ ರಸ್ತೆಯ ಅಭಿವೃದ್ಧಿ ಮಾಡದೇ ಇರುವುದು ಶೋಚನೀಯ.
ರಸ್ತೆ ಅಗಲೀಕರಣ
ರಿಂಗ್ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಎರಡು ಬಸ್‍ಗಳು ಮುಖಾಮುಖಿ ಬಂದರೆ ಅದರಲ್ಲಿ ಯಾವುದಾದರೂ ಒಂದು ರಸ್ತೆಯ ಕೆಳಕ್ಕೆ ಇಳಿದು ಚಲಿಸಬೇಕು. ಈ ರಸ್ತೆಯಲ್ಲಿ ಜೋಡಿಯಾಗಿ ಒಮ್ಮೆಲೆ ಎರಡು ವಾಹನಗಳು ಚಲಾಯಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ರಸ್ತೆಯಲ್ಲಿ ಹೆಚ್ಚಾಗಿ ಗುಂಡಿಗಳು ಬಿದ್ದಿರುವುದರಿಂದ ವಾಹನಗಳ ಚಾಲನೆ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ರಸ್ತೆ ಅಗಲೀಕರಣ ಮಾಡುವುದು ಅತ್ಯವಶ್ಯಕವಾಗಿತ್ತು. ಈ ನಿಟ್ಟಿನಲ್ಲಿ ಈಗಾಗಲೇ ರಸ್ತೆ ಅಗಲೀಕರಣ ಕಾರ್ಯ ಪ್ರಾರಂಭಗೊಂಡಿದ್ದು, ವಾಲ್ಮೀಕಿ ವೃತ್ತದಿಂದ ಕ್ಯಾತ್ಸಂದ್ರಕಡೆಗೆ ರಸ್ತೆಯ ಅಗಲೀಕರಣ ನಡೆದಿರುವುದು ಉತ್ತಮ ಬೆಳವಣಿಗೆಯಾಗಿದೆ.
ರಸ್ತೆ ಪಕ್ಕದಲ್ಲಿಯೆ ರಾರಾಜಿಸುತ್ತಿದೆ ಕಸ
ರಸ್ತೆಯುದ್ದಕ್ಕೂ ಕಂಡು ಬರುವ ಖಾಲಿ ಜಾಗದಲ್ಲಿ ಕಸದ ರಾಶಿಗಳು ಕಾಣುವುದು ಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿ ಕಸದ ವಾಹನಗಳು ಬಂದರೂ ನಿತ್ಯ ಕಸವನ್ನು ತೆಗೆದುಕೊಂಡು ಹೋದರೂ ರಸ್ತೆಪಕ್ಕದಲ್ಲಿ ಕಸ ಹಾಕುವ ಚಾಳಿಯನ್ನು ಮಾತ್ರ ಸಾರ್ವಜನಿಕರು ಬಿಟ್ಟಿಲ್ಲ. ಇದಕ್ಕೆ ಉದಾಹರಣೆ ಆರ್ಖಾಂಟೌನ್ ಬಡಾವಣೆಯ ಮುಂಭಾಗದಲ್ಲಿ ನಿತ್ಯ ಕಸವು ದರ್ಶನ ನೀಡುತ್ತದೆ. ಒಂದು ದಿನವಾದರೂ ಕಸ ಇಲ್ಲ ಎನ್ನುವಂತಿಲ್ಲ. ಪ್ರತಿನಿತ್ಯ ಕಸದ ರಾಶಿಗಳು ಇದ್ದೇ ಇರುತ್ತವೆ. ಗಾಳಿ ಬಂದಾಗ ರಸ್ತೆ ಮೇಲೆಲ್ಲಾ ಹರಡಿ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಪಾದಾಚಾರಿಗಳು ಹೇಗೊ ಮೂಗು ಮುಚ್ಚಿಕೊಂಡು ಹೋಗುತ್ತಾರೆ. ಆದರೆ ದ್ವಿಚಕ್ರ ವಾಹನ ಸವಾರರು ಧೂಳಿನಲ್ಲೇ ಸವಾರಿ ಮಾಡಬೇಕಾಗಿದೆ. ಇದೀಗ ರಸ್ತೆ ಅಗಲೀಕರಣ ವಿಷಯವಾಗಿ ಕಸವನ್ನು ಸ್ವಚ್ಛಗೊಳಿಸಿದರೂ ಮತ್ತೆ ಕಸದ ರಾಶಿಗಳು ದರ್ಶನ ನೀಡುತ್ತಲೇ ಇವೆ.
ಕೋಳಿ ತ್ಯಾಜ್ಯಗಳ ಸಾಮ್ರಾಜ್ಯ
ಕೋಳಿ ಮಾಂಸದ ಅಂಗಡಿಯವರು ಕೋಳಿ ತ್ಯಾಜ್ಯವನ್ನು ತೆಗೆದುಕೊಂಡು ಬಂದು ಅರ್ಖಾಂಟೌನ್ ಮುಂಭಾಗದಲ್ಲಿನ ಖಾಲಿ ಸೈಟಿನಲ್ಲಿ ಸುರಿಯುತ್ತಾರೆ. ಅದರಲ್ಲಿ ಕೋಳಿ ಮಾಂಸದ ತುಂಡುಗಳು ಇರುವುದರಿಂದ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ರಸ್ತೆಯಲ್ಲಿ ಓಡಾಡುವ ಜನರ ಮೇಲೆ ನಾಯಿಗಳು ದಾಳಿ ಮಾಡಿದ ಸಂದರ್ಭಗಳು ಸಾಕಷ್ಟಿವೆ. ಮಾಂಸದ ರುಚಿ ಕಂಡ ನಾಯಿಗಳು ಆಹಾರ ಸಿಗದಿದ್ದಾಗ ಮಕ್ಕಳ ಮೇಲೆ, ಪಾದಾಚಾರಿಗಳ ಮೇಲೆ ದಾಳಿ ಮಾಡುತ್ತವೆ. ಇದರಿಂದ ಸಂಜೆ ವೇಳೆಯಲ್ಲಿ ಜನ ಓಡಾಡಲೂ ಹೆದರುವ ಸ್ಥಿತಿ ನಿರ್ಮಾಣವಾಗಿದೆ.
ರಾಜಾರೋಷವಾಗಿ ಓಡಾಡುವ ಹಂದಿಗಳು
ಎಸ್‍ಎಸ್‍ಐಟಿ ಹಿಂಭಾಗದಲ್ಲಿ ಹೆಚ್ಚು ಖಾಲಿ ಸೈಟುಗಳು ಇದ್ದು, ಹಂದಿಗಳು ಗಿಡಗೆಂಟೆಗಳಲ್ಲಿ ಗೂಡುಗಳನ್ನು ನಿರ್ಮಿಸಿಕೊಂಡಿವೆ. ಈಗಾಗಲೇ ಮಹಾನಗರ ಪಾಲಿಕೆಯವರು ಹಂದಿಗಳನ್ನು ಹಿಡಿಸಿದ್ದರೂ ಇನ್ನೂ ಸಾಕಷ್ಟು ಕಡೆಗಳಲ್ಲಿ ಹಂದಿಗಳು ರಾಜಾರೋಷವಾಗಿ ಓಡಾಡುತ್ತಿವೆ. ಕೊಚ್ಚೆ ನೀರಿನಿಂದ ಎದ್ದು ಬರುವ ಹಂದಿಗಳಿಂದ ಅನೇಕ ರೋಗ ರುಜಿನಗಳು ಬರುವುದರಲ್ಲಿ ಸಂಶಯವೇ ಇಲ್ಲ. ಎರಡು ಮೂರು ಕಡೆಗಳಲ್ಲಿ ಹಂದಿಗಳ ಕಾರ್ಯಾಚರಣೆ ಮಾಡಿದ ಮಹಾನಗರ ಪಾಲಿಕೆಯವರು ನಗರದಾದ್ಯಂತ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ಮಾಡಿ ಹಂದಿಗಳನ್ನು ಹಿಡಿಯಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಶೆಟ್ಟಿಹಳ್ಳಿ ನಂತರ ಕಂಡುಬರುವ ನಯಾಗರ ಫಾಲ್ಸ್
ಶೆಟ್ಟಿಹಳ್ಳಿಯಿಂದ ಕ್ಯಾತ್ಸಂದ್ರದ ಕಡೆಗೆ ರಿಂಗ್ ರಸ್ತೆ ಮೂಲಕ ತೆರಳುವಾಗ ಪೆಟ್ರೋಲ್ ಬಂಕ್ ನಂತರ ಹೋಟೆಲ್ ಒಂದರ ಪಕ್ಕದಲ್ಲಿ ಕೊಚ್ಚೆ ನೀರಿನ ನಯಾಗರ ಫಾಲ್ಸ್ ಕಂಡು ಬರುತ್ತದೆ. ಇಲ್ಲಿ ನಿರ್ಮಿಸಲಾದ ಯುಜಿಡಿ ಚೇಂಬರ್‍ನಿಂದ ನೀರು ಉಕ್ಕಿ ಮೇಲೆ ಹರಿಯುತ್ತದೆ. ಗಿಡಗೆಂಟೆಗಳ ನಡುವೆ ಇರುವ ಯುಜಿಡಿ ಚೇಂಬರ್‍ನಿಂದ ಹೊರ ಬರುವ ನೀರು ಅಲ್ಲಿಯೇ ನಿಂತುಕೊಂಡು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಾಟಾಗಿದೆ. ಸೊಳ್ಳೆಗಳಿಂದಳೂ ವಿವಿಧ ಕಾಯಿಲೆಗಳು ಬರುತ್ತಿದ್ದು, ಅಲ್ಲಿ ವಾಸ ಮಾಡುವ ಅಲೆಮಾರಿ ಜನಾಂಗದವರು ರೋಗಗ್ರಸ್ಥರಾಗಿಯೇ ಜೀವನ ಮಾಡುತ್ತಿದ್ದಾರೆ.
ಕಳ್ಳಕಾಕರ ಕಾಟ
ಸೂರ್ಯ ಮುಳುಗುತ್ತಲೇ ರಿಂಗ್ ರಸ್ತೆಯ ಮೇಲೆ ಮದ್ಯಪಾನಿಗಳು, ಕಳ್ಳರು ಬಿಟ್ಟರೆ ಇನ್ನೊಬ್ಬರು ಕಣ್ಣಿಗೆ ಕಾಣುವುದಿಲ್ಲ. ಕೇವಲ ಊರಿಂದ ಊರಿಗೆ ತೆರಳುವವರು ಹಾಗೂ ಜಯನಗರ, ಅಶ್ವಿನಿ ಆಸ್ಪತ್ರೆ ಹಿಂಭಾಗದಲ್ಲಿ ವಾಸ ಮಾಡುವವರು ಮಾತ್ರ ಓಡಾಡುತ್ತಾರೆ. ರಾತ್ರಿ 10 ಗಂಟೆಯಾಗುತ್ತಲೇ ಜನರ ಓಡಾಟ ಸಂಪೂರ್ಣ ಕಡಿಮೆಯಾಗುತ್ತದೆ. ಆ ವೇಳೆಯಲ್ಲಿ ಯಾರಾದ್ರೂ ಕಂಡು ಬಂದರೆ ಕಳ್ಳರಿಗೆ ತಮ್ಮ ಕೈಚಳಕ ತೋರಲು ಸುಲಭವಾಗುತ್ತಿದೆ. ರಾತ್ರಿ ವೇಳೆಯಲ್ಲಿ ಬೆಳಕಿನ ಸೌಲಭ್ಯವೂ ಕಡಿಮೆ ಇರುವುದರಿಂದ ಕಳ್ಳರಿಗೆ ಇನ್ನಷ್ಟು ಸುಲಭವಾಗುತ್ತಿದೆ .
ಈ ಹಿಂದೆ ಹಾಡಹಗಲಲ್ಲೇ ವಿಳಾಸ ಕೇಳುವ ನೆಪದಲ್ಲಿ ಓರ್ವ ಮಹಿಳೆಯನ್ನು ಕಾರಿನೊಳಕ್ಕೆ ಎಳೆದುಕೊಂಡು ತನ್ನಲ್ಲಿದ್ದ ಒಡವೆಗಳನ್ನು ಕದ್ದು, ದೂರದಲ್ಲಿ ಮಹಿಳೆಯನ್ನು ಬಿಸಾಡಿದ್ದ ಘಟನೆಯೂ ನೆನಪಿಸಿಕೊಳ್ಳಬಹುದು. ಅಂತಹ ಘಟನೆಗಳು ಎಷ್ಟೋ ನಡೆದಿವೆ ಎಂಬುದಾಗಿ ಸ್ಥಳೀಯ ನಿವಾಸಿಗಳಿಂದ ತಿಳಿದು ಬಂದಿದೆ.
ಕುಣಿಗಲ್ ವೃತ್ತದಲ್ಲಿ ಬೇಕಿದೆ ಸಿಗ್ನಲ್ ಲೈಟ್‍ಗಳು
ನಗರದಿಂದ ಕುಣಿಗಲ್‍ಗೆ ತೆರಳುವಾಗ ರಿಂಗ್ ರಸ್ತೆಯ ವೃತ್ತದಲ್ಲಿ ಅವಶ್ಯಕವಾಗಿ ಸಿಗ್ನಲ್ ದೀಪಗಳು ಬೇಕಾಗಿವೆ. ನಾಲ್ಕು ದಿಕ್ಕುಗಳಿಂದ ಬರುವ ವಾಹನಗಳು ವೇಗವಾಗಿ ಬರುವುದರಿಂದ ಅಪಘಾತಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಎರಡು ಮೂರು ಅಪಘಾತಗಳು ನಡೆದು ಪ್ರಯಾಣಿಕರು ಪ್ರಾಣ ಬಿಟ್ಟ ಉದಾಹರಣೆಗಳು ಕೂಡ ಇವೆ.
ಸ್ಮಾರ್ಟ್ ಸಿಟಿಯಲ್ಲಿ ರಸ್ತೆ ಅಭಿವೃದ್ಧಿಗೆ ಯೋಜನೆ ಸಿದ್ಧ
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 10.524 ಕಿಮೀ ಉದ್ದವಿರುವ ರಿಂಗ್ ರಸ್ತೆಯ ಜೀರ್ಣೋದ್ಧಾರ ಮತ್ತು ಪುನರಾಭಿವೃದ್ಧಿ ಕಾರ್ಯಕ್ಕೆ ಒಟ್ಟು 52.47 ಲಕ್ಷ ವೆಚ್ಚದಲ್ಲಿ ಯೋಜನೆ ಸಿದ್ದಮಾಡಲಾಗಿದೆ. ಈ ಯೋಜನೆ ಪ್ರಕಾರ ದ್ವಿಪಥ ರಸ್ತೆ ಅಭಿವೃದ್ಧಿ, ಸರ್ವೀಸ್ ರಸ್ತೆ ಸೌಲಭ್ಯ, ಮಳೆ ನೀರಿನ ಅಂತರ್ಜಲ ಮಟ್ಟ ಹೆಚ್ಚಿಸುವುದು, ನೀರು ಸುಲಭವಾಗಿ ಹರಿಯಲು ಒಳ ಚರಂಡಿ ವ್ಯವಸ್ಥೆ ಹಾಗೂ ಮಳೆ ನೀರಿಗೆ ಪ್ರತ್ಯೇಕವಾಗಿ ಚರಂಡಿ ವ್ಯವಸ್ಥೆ ಮಾಡಲಿದ್ದಾರೆ. ಈ ರಸ್ತೆಯ ಅಭಿವೃದ್ಧಿಯಿಂದ ಬಿಎಚ್ ರಸ್ತೆಯ ಮುಖಾಂತರ ಹೊನ್ನಾವರ ಮತ್ತು ಕುಣಿಗಲ್‍ಗೆ ಚಲಿಸುವ ವಾಹನಗಳ ದಟ್ಟಣೆ ಕಡಿಮೆ ಮಾಡಬಹುದಾಗಿದೆ. ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಸಾಧಿಸುವ ಮೂಲಕ ಪ್ರಯಾಣವನ್ನು ಸುಗಮಗೊಳಿಸಬಹುದಾಗಿದೆ. ಈ ರಸ್ತೆಯ ಮೂಲಕ ಹತ್ತಿರದ ಸ್ಥಳಗಳಿಗೆ, ವಾರ್ಡ್‍ಗಳಿಗೆ, ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆಯನ್ನು ಮಾಡಬಹುದಾಗಿದೆ ಎಂದು ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಸ್ವಚ್ಛತೆಯಲ್ಲಿ ಜನರ ಪಾತ್ರವೂ ಮುಖ್ಯ
ನಗರದಲ್ಲಿ ಕಸದ ಸಮಸ್ಯೆ ಯಥೇಚ್ಛವಾಗಿದೆ. ಇದರ ನಿರ್ವಹಣೆ ಮಾಡುವ ಜವಾಬ್ದಾರಿ ಮಹಾನಗರ ಪಾಲಿಕೆಯದ್ದು. ಇದರ ಭಾಗವಾಗಿ ಕಸವನ್ನು ಶೇಖರಣೆ ಮಾಡಿ ಪಾಲಿಕೆಯ ಕಸದ ವಾಹನಕ್ಕೆ ನೀಡುವ ಜವಾಬ್ದಾರಿ ಜನಸಾಮಾನ್ಯರದ್ದಾಗಿದೆ. ಕಸವನ್ನು ತಂದು ರಸ್ತೆಯ ಪಕ್ಕದಲ್ಲಿ ಅಥವಾ ಎಲ್ಲೆಂದರಲ್ಲಿ ಬಿಸಾಡುವುದರ ಬದಲಾಗಿ ಮನೆಯಲ್ಲಿಯೇ ವಿಂಗಡಣೆ ಮಾಡಿ, ಹಸಿ ಕಸ ಹಾಗೂ ಒಣ ಕಸ ಬೇರ್ಪಡಿಸಿ ಕಸದ ವಾಹನಗಳಿಗೆ ನೀಡಿದರೆ ಕಸದ ಸಮಸ್ಯೆ ನಿವಾರಣೆಯಾಗುವಲ್ಲಿ ಸಂದೇಹವೇ ಇಲ್ಲ. ಕೇವಲ ಪಾಲಿಕೆ ಅಧಿಕಾರಿಗಳ ವಿರುದ್ಧ ಆರೋಪ ಮಾಡುವ ಬದಲು ನಾವು ಬದಲಾದರೆ, ಕಸದ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ.