ದಾವಣಗೆರೆ:
ರಾಮಾಯಣ, ಮಹಾಭಾರತದ ಕಾಲದಿಂದಲೂ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆದುಕೊಂಡು ಬಂದಿದ್ದು, ಈಗಲಾದರೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಅಂಬಾದಾಸ್ ಕುಲಕರ್ಣಿ ಕರೆ ನೀಡಿದರು.
ನಗರದ ಐಟಿಐ ಕಾಲೇಜು ಆವರಣದ ಚೌಡೇಶ್ವರಿ ದೇವಿ ಸಮುದಾಯ ಭವನದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ತಿಕ್ ಗೋಬಲ್ ಫೌಂಡೇಶನ್ ಟ್ರಸ್ಟ್, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ಕಾನೂನು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರೂ ಸಾವಿರಾರೂ ವರ್ಷಗಳಿಂದ ಅನೇಕ ದೌರ್ಜನ್ಯ, ತೊಂದರೆಗಳನ್ನು ಅನುಭವಿಸಿಕೊಂಡು ಬಂದಿದ್ದಾರೆ. ಭಾರತದ ಇತಿಹಾಸದಲ್ಲಿಯೂ ಮಹಾಭಾರತ, ರಾಮಾಯಣಗಳಲ್ಲೂ ಸಹ ಸೀತೆ ಮತ್ತು ದ್ರೌಪದಿ ಅನ್ಯಾಯಕ್ಕೊಳಗಾದ ಹಾಗೂ ಶೋಷಣೆಗೊಳಗಾದ ಚಿತ್ರಣಗಳಿವೆ. ಅಂದಿನಿಂದಲೂ ಇಂದಿನ ಕಾಲದವರೆಗೂ ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ ಎಂದು ಕಳವಳ ವ್ಯಕ್ತಪಡಿಸಿದರು
ಕಾಲಕಾಲಕ್ಕೆ ಮಹಿಳೆಯರ ಪರವಾಗಿ ಇರುವ ಕಾನೂನುಗಳ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಆ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ದಿಯನ್ನು ಸಾಧಿಸಬೇಕಿದೆ. ಅಲ್ಲದೇ ಲಿಂಗತಾರತಮ್ಯ ಒಡೆದು ಹಾಕುವ ನಿಟ್ಟಿನಲ್ಲಿ ಮಹಿಳೆಗೆ ಆಸ್ತಿ ಹಕ್ಕು ನೀಡಲಾಗಿದೆ ಎಂದರು.
2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಇ.ಚಂದ್ರಕಲಾ ಮಾತನಾಡಿ, ಮಹಿಳೆಯರು ಶೋಷಣೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾದರೆ ತಮಗಿರುವ ಎಲ್ಲಾ ಹಕ್ಕುಗಳ ಬಗ್ಗೆ ಜ್ಞಾನ ಇರಬೇಕಾಗಿರುವುದು ಅನಿವಾರ್ಯ. ಅನಾದಿಕಾಲದಲ್ಲಿ ಮಹಿಳೆಯರು ಹುಟ್ಟಿನಿಂದ ಸಾಯುವವರೆಗೂ ಪುರುಷರ ಆಶ್ರಯದಲ್ಲಿ ಜೀವನ ಸಾಗಿಸುತ್ತಿದ್ದರಿಂದ ದೌರ್ಜನ್ಯ ಒಳಗಾಗಬೇಕಾಗಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಮಹಿಳೆಯರು ಶಿಕ್ಷಿತ, ಸ್ವಾವಲಂಭಿಯಾಗಿ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಪ್ರತಿಭೆಯನ್ನು ಹೊರಹಾಕುತ್ತಿದ್ದಾರೆ ಎಂದ ಅವರು ಮಹಿಳೆ ಇಂದು ಎಲ್ಲಾ ವಿಧಧ ಆಸ್ತಿ ಹಕ್ಕನ್ನು ಹೊಂದಿದ್ದಾಳೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್ ಹೆಚ್.ಅರುಣ್ಕುಮಾರ್ ಮಾತನಾಡಿ, ಬಾಲ್ಯ ವಿವಾಹ ಮತ್ತು ದೇವದಾಸಿ, ವರದಕ್ಷಿಣೆಯಂತಹ ಪ್ರಕರಣಗಳು ಕಂಡು ಬಂದಲ್ಲಿ ಗ್ರಾಮಾಂತರ ಭಾಗದ ಮಹಿಳೆಯರು ತಕ್ಷಣ ಸಂಬಂಧಿಸಿ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡುವ ಮೂಲಕ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಬೇಕು. ವರದಕ್ಷಣೆ ಕೇಳುವುದು ತೆಗೆದುಕೊಳ್ಳುವುದು ಕೊಡುವುದು ಸಹ ಅಪರಾಧವಾಗಿದ್ದು, ಅಂತಹ ಪಿಡುಗು ನಿವಾರಣೆಗೆ ಮುಂದಾಗಬೇಕು ಎಂದು ಕರೆನೀಡಿದರು.
ಕಾರ್ತಿಕ್ ಗ್ಲೋಬಲ್ ಫೌಂಡೇಶನ್ ಟ್ರಸ್ಟ್ನ ಕೆ.ಆರ್.ಮಲ್ಲೇಶ್ನಾಯ್ಕ ಮಾತನಾಡಿ, ಕಳೆದ 4ವರ್ಷಗಳಿಂದ ಮಹಿಳೆ ಸಂಘಟನೆ ಮಾಡುತ್ತಾ ಗ್ರಾಮಾಂತರ ಪ್ರದೇಶದಲ್ಲಿ ಉಚಿತ ವೈದ್ಯಕೀಯ ಶಿಬಿರ, ಸಸಿ ನೆಡುವ ಕಾರ್ಯಕ್ರಮ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮ ಮಾಡುವ ಮೂಲಕ ಸೇವೆ ಸಲ್ಲಿಸುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ, ಸರ್ಕಾರಿ ಅಭಿಯೋಜಕಾರ ವಸಂತ, ವಕೀಲ ಟಿ.ಎಂ. ಅನ್ನಪೂರ್ಣ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾರ್ತಿಕ್ ಗ್ಲೋಬಲ್ ಫೌಂಡೇಶನ್ ಟ್ರಸ್ಟಿ ಗೀತಾ.ಎಂ.ನಾಯ್ಕ ವಹಿಸುವರು. ಕಾರ್ತಿಕ್ ಗ್ಲೋಬಲ್ ಫೌಂಡೇಶನ್ ಡಾ.ಕೆ.ತಿಪ್ಪೇಶ್ ಇತರರು ಇದ್ದರು.