ಬಿ.ಎಚ್.ರಸ್ತೆಯಲ್ಲಿ ಮತ್ತೆ ರೋಡ್ ಹಂಪ್ಸ್ ನಿರ್ಮಾಣ

ತುಮಕೂರು

    ತುಮಕೂರು ನಗರದ ಬಿ.ಎಚ್.ರಸ್ತೆಯ (ರಾಷ್ಟ್ರೀಯ ಹೆದ್ದಾರಿ-206) ಪ್ರಮುಖ ಸ್ಥಳಗಳಲ್ಲಿ ಪುನಃ ವೈಜ್ಞಾನಿಕವಾಗಿ ರೋಡ್ ಹಂಪ್ಸ್ ನಿರ್ಮಿಸುವ ಕಾಮಗಾರಿ ಆರಂಭವಾಗಿದ್ದು, ಶುಕ್ರವಾರ ನಗರದ ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗದ ಒಂದು ಬದಿಯಲ್ಲಿ ಭರದಿಂದ ರೋಡ್‍ಹಂಪ್ಸ್ ನಿರ್ಮಿಸಲಾಯಿತು.

   ಇತ್ತೀಚೆಗೆ ಪ್ರಧಾನಿ ನರೇಂದ್ರಮೋದಿ ಅವರು ತುಮಕೂರು ನಗರಕ್ಕೆ ಆಗಮಿಸಿದ್ದಾಗ, ಬಿ.ಎಚ್. ರಸ್ತೆಯಲ್ಲಿ ಅವರು ಸಂಚರಿಸುವ ಮಾರ್ಗದಲ್ಲಿ ಭದ್ರತಾ ಕಾರಣಗಳಿಂದ ರೋಡ್ ಹಂಪ್ಸ್‍ಗಳನ್ನು ತೆರವುಗೊಳಿಸಿ ಸರಾಗ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆ ಕಾರ್ಯಕ್ರಮದ ಬಳಿಕ ರೋಡ್ ಹಂಪ್ಸ್ ಇಲ್ಲದೆ ಬಿ.ಎಚ್. ರಸ್ತೆಯಲ್ಲಿ ಸಮಸ್ಯೆ ತಲೆಯೆತ್ತಿತ್ತು.

    ವಾಹನಗಳ ಅತಿವೇಗದ ಹಾಗೂ ಅನಿಯಂತ್ರಿತ ಸಂಚಾರ ಸಾರ್ವಜನಿಕರಿಗೆ ಆತಂಕ ತಂದೊಡ್ಡಿತ್ತು. ಅನೇಕ ಅಪಘಾತಗಳಿಗೂ ಎಡೆಮಾಡಿಕೊಟ್ಟಿತು. ಪಾದಚಾರಿಗಳು ರಸ್ತೆ ದಾಟುವುದು ಅಪಾಯಕಾರಿ ಎನಿಸಿತು. ಕೂಡಲೇ ಪುನಃ ರೋಡ್ ಹಂಪ್ಸ್ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸತೊಡಗಿದರು. ಮಾಧ್ಯಮಗಳಲ್ಲೂ ಈ ವಿಚಾರ ಪ್ರಕಟವಾಗಿ, ಚರ್ಚೆಯಾಯಿತು.

   ಇವೆಲ್ಲದರ ಪರಿಣಾಮವಾಗಿ ಇದೀಗ ಮತ್ತೊಮ್ಮೆ ವೈಜ್ಞಾನಿಕವಾಗಿ ರೋಡ್ ಹಂಪ್ಸ್ ನಿರ್ಮಿಸುವ ಕಾಮಗಾರಿ ಆರಂಭವಾಗಿದೆ. ಇಲಾಖೆಯ ಈ ಕ್ರಮಕ್ಕೆ ಸಾರ್ವಜನಿಕರು ಸ್ವಾಗತಿಸುತ್ತಿದ್ದಾರೆ. ಈ ಹಿಂದೆ ಇದ್ದ ಎಲ್ಲ ಸ್ಥಳಗಳಲ್ಲೂ ಆದಷ್ಟೂ ಶೀಘ್ರವಾಗಿ ರೋಡ್ ಹಂಪ್ಸ್ ನಿರ್ಮಿಸುವಂತೆ ಆಗ್ರಹಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link