ತುಮಕೂರು
ಕಳೆದ ವಾರ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆದಾಗ ತುಮಕೂರು ನಗರದ ನಾಗರಿಕರಲ್ಲಿ ಕುತೂಹಲ ಕೆರಳಿಸಿತ್ತು. ಆ ಸ‘ೆಯಲ್ಲಿ ಸ್ವತಃ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ದಿವ್ಯಾ ವಿ.ಗೋಪಿನಾಥ್ ಅವರು ತೋರಿದ ಕಳಕಳಿ, ಕ್ರಿಯಾಶೀಲತೆ ಎಲ್ಲರ ಗಮನಸೆಳೆದಿತ್ತು. ಇದೀಗ ಆ ಸಭೆ ನಡೆದು ಒಂದು ವಾರ ಕಳೆದಿದ್ದು, ‘‘ಆ ಸಭೆಯ ಪರಿಣಾಮ, ಫಲಿತಾಂಶ ಏನು?’’ ಎಂಬ ಪ್ರಶ್ನೆ ತುಮಕೂರು ನಗರದ ನಾಗರಿಕ ವಲಯದಲ್ಲಿ ಚರ್ಚೆಗೊಳ್ಳುತ್ತಿದೆ.
ತುಮಕೂರು ನಗರದ ಆರ್.ಟಿ.ಒ. ಕಚೇರಿಯಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆ ಅ.6 ರಂದು ಏರ್ಪಟ್ಟಿತ್ತು. ಸಮಿತಿ ಅದ್ಯಕ್ಷರಾದ ಜಿಲ್ಲಾಧಿಕಾರಿಗಳೇ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಮತ್ತು ಆರ್.ಟಿ.ಒ. ಭಾಗವಹಿಸಿದ್ದರು. ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ನಗರದ ಸಂಘಟನೆಗಳ ಪ್ರತಿನಿಧಿಗಳು, ಹೋರಾಟಗಾರರು, ಆಟೋ ಚಾಲಕರು, ನಾಗರಿಕರು ಉತ್ಸಾಹದಿಂದ ಭಾಗವಹಿಸಿದ್ದರು.
ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ಸಭೆಯಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಡಿಸಿ ಡಾ.ರಾಕೇಶ್ ಕುಮಾರ್ ಮತ್ತು ಎಸ್ಪಿ ಡಾ.ದಿವ್ಯಾ ವಿ.ಗೋಪಿನಾಥ್ ಅವರ ಕಳಕಳಿ ಎದ್ದು ಕಾಣಿಸಿತು. ನಗರವು ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ಈ ಈರ್ವರೂ ಹಿರಿಯ ಅಧಿಕಾರಿಗಳು ಖುದ್ದು ಗಮನಿಸಿರುವುದು ಹಾಗೂ ಈರ್ವರೂ ನಗರಾದ್ಯಂತ ಸಂಚರಿಸುತ್ತ ಪರಿಸ್ಥಿತಿಗಳನ್ನು ಪ್ರಾಮಾಣಿಕವಾಗಿ ಅವಲೋಕಿಸಿರುವುದು ಅವರ ಮಾತುಗಳಲ್ಲೇ ವ್ಯಕ್ತಗೊಂಡಿತು.
ಸಭೆಯಲ್ಲಿದ್ದವರಿಗಿಂತ ಈ ಇಬ್ಬರು ಹಿರಿಯ ಅಧಿಕಾರಿಗಳೇ ನಗರದ ಸಮಸ್ಯೆಗಳನ್ನು ಪಟ್ಟಿ ಮಾಡಿದರೆಂಬುದು ಈ ಸಭೆಯಲ್ಲಿ ವಿಶೇಷವಾಗಿ ಕಾಣಿಸಿದ ಸಂಗತಿ.
ಸಮಸ್ಯೆ ಪಟ್ಟಿ ಮಾಡಿದ ಡಿಸಿ
‘‘ನಗರದ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳು ಬಂದಾಗ ಅದಕ್ಕೆ ತಕ್ಷಣವೇ ದಾರಿ ಬಿಡುವ ಪ್ರವೃತ್ತಿಯೇ ಕಂಡುಬರುತ್ತಿಲ್ಲ. ಮೊಬೈಲ್‌ನಲ್ಲಿ ಮಾತನಾಡುತ್ತಲೇ ದ್ವಿಚಕ್ರ ವಾಹನಗಳವರು ಮತ್ತು ಇತರೆ ವಾಹನಗಳವರು ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುತ್ತಾರೆ.
ಮೂವರು ಕುಳಿತು ನಿರ್ಲಕ್ಷೃದಿಂದ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿರುತ್ತಾರೆ. ಪುಟ್‌ಪಾತ್‌ಗಳಲ್ಲಿ ಪಾದಚಾರಿಗಳು ಸಂಚರಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇದ್ದು, ುಟ್‌ಪಾತ್ ಒತ್ತುವರಿ ತೆರವುಗೊಳಿಸಲು ಆಂದೋಲನವನ್ನೇ ಹಮ್ಮಿಕೊಳ್ಳಬೇಕು. ಅಪಘಾತ ಸಂಭವಿಸಿದಾಗ ಕೂಡಲೇ ನೆರವಾಗುವಂತಹ ವ್ಯಕ್ತಿಗಳನ್ನು (ಗುಡ್ ಸಮಾರಿಟನ್) ಗುರುತಿಸಿ ಇಂಥ ಸಭೆಗೆ ಆಹ್ವಾನಿಸಿ, ಅಭಿನಂದಿಸಬೇಕು. ರ್ಲಿೆಕ್ಟರ್‌ಗಳಿಲ್ಲದೆ ಸಂಚರಿಸುವ ಟ್ರಾೃಕ್ಟರ್‌ಗಳ ವಿರುದ್ಧ ಕ್ರಮ ಜರುಗಿಸಬೇಕು. ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿಸಬೇಕು.
ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು (ರೋಡ್ ಹಂಪ್ಸ್) ತಕ್ಷಣ ತೆರವುಗೊಳಿಸಿ, ವೈಜ್ಞಾನಿಕವಾಗಿ ರೂಪಿಸಬೇಕು. ಹೆದ್ದಾರಿ, ಪ್ರಮುಖ ರಸ್ತೆ ಬದಿಯಲ್ಲಿ ಯದ್ವಾತದ್ವಾ ವಾಹನ ನಿಲುಗಡೆ (ಪಾರ್ಕಿಂಗ್) ಮಾಡದಂತೆ ನೋಡಿಕೊಳ್ಳಬೇಕು’’- ಈ ರೀತಿ ನಗರದ ಸಂಚಾರ ಸಮಸ್ಯೆಗಳನ್ನು ಒಂದೇ ಸಮನೆ ಪಟ್ಟಿ ಮಾಡಿದವರು ಸ್ವತಃ ಜಿಲ್ಲಾಧಿಕಾರಿಗಳು ಎಂಬುದನ್ನು ಗಮನಿಸಬೇಕು.
ಎಸ್ಪಿ ಹೇಳಿದ ಸಮಸ್ಯೆಗಳು
ಇದೇ ರೀತಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳೂ ನಗರ ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ‘‘ನಗರದ ಗುಬ್ಬಿಗೇಟ್ ಬಳಿ ದಿಬ್ಬೂರು ಕಡೆಗೆ ತೆರಳುವ ರಸ್ತೆ ಬಂದ್ ಆಗಿ 6 ತಿಂಗಳುಗಳಾಗಿವೆ. ಒಳಚರಂಡಿಗೆಂದು ದೊಡ್ಡ ಗುಂಡಿ ತೆಗೆದು ಹಾಗೆಯೇ ಬಿಡಲಾಗಿದೆ.
ಇದರಿಂದ ಲಾರಿ ಮತ್ತಿತರ ಭಾರಿ ವಾಹನಗಳು ನಗರದೊಳಗೇ ಟೌನ್‌ಹಾಲ್ ವೃತ್ತದ ಮೂಲಕ ಸಂಚರಿಸುವಂತಾಗಿದ್ದು, ನಗರದೊಳಗೆ ವಿಪರೀತ ಟ್ರಾಫಿಕ್ ಸಮಸ್ಯೆ ಉದ್ಭವಿಸುತ್ತಿದೆ. ಈ ಬಗ್ಗೆ ಪಾಲಿಕೆ ಗಮನಿಸುತ್ತಿಲ್ಲ. ಈ ರೀತಿ ಅಗೆಯುವುದಾದರೆ ಮೊದಲೇ ರಸ್ತೆ ಸುರಕ್ಷತಾ ಸಮಿತಿಯ ಗಮನಕ್ಕೆ ತಂದಿದ್ದರೆ, ಪರ್ಯಾಯ ಕ್ರಮಗಳ ಬಗ್ಗೆ ಕ್ರಮ ಜರುಗಿಸಲು ಸುಲಭವಾಗುತ್ತಿತ್ತು. ಆದರೆ ಈ ರೀತಿ ಸುಮ್ಮನೆ ಅಗೆದು ತಿಂಗಳುಗಟ್ಟಲೇ ಹಾಗೆಯೇ ಬಿಟ್ಟರೆ ಪರಿಣಾಮ ಏನಾದೀತು?’’ ಎಂದು ಎಸ್ಪಿ ಅವರು ಪ್ರಶ್ನಿಸಿದಾಗ ಸಭೆಯಲ್ಲಿದ್ದ ಪಾಲಿಕೆಯ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಕೊಡಲು ಆಗಲೇಇಲ್ಲವೆಂಬುದು ಅಲ್ಲಿದ್ದವರಿಗೆ ‘‘ಇದು ನಗರದ ದುರಂತ’’ ಎನಿಸಿತು.
ನಗರದ ಬಿ.ಎಚ್.ರಸ್ತೆಯಲ್ಲಿ ಸರ್ವಿಸ್ ರಸ್ತೆಯ ಭಾಗದಲ್ಲಿ ಅಗೆಯುವಾಗಲೂ ರಸ್ತೆ ಸುರಕ್ಷತಾ ಸಮಿತಿ ಗಮನಕ್ಕೆ ತಾರದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎಸ್ಪಿ ಅವರು, ಈ ರೀತಿ ಅಗೆದು ಹಾಗೆಯೇ ಬಿಟ್ಟಿರುವುದರಿಂದ ಆಗುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ತ್ವರಿತವಾಗಿ ಸರಿಪಡಿಸುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ರೀತಿ ಎಸ್ಪಿ ಅವರೂ ಹಲವು ಸಮಸ್ಯೆಗಳನ್ನು ಸಭೆಯಲ್ಲಿದ್ದ ಅಧಿಕಾರಿಗಳ ಗಮನಕ್ಕೆ ತರುವಂತಾಯಿತೆಂದರೆ, ಈ ನಗರದ ಪರಿಸ್ಥಿತಿ ಊಹಾತೀತವೇನಲ್ಲ.
ತುಮಕೂರು ನಗರ ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆ ಹಾಗೂ ಜನತೆ ಅನುಭವಿಸುತ್ತಿರುವ ತೊಂದರೆಗಳು ಏನೆಂಬುದು ಈ ಇಬ್ಬರು ಹಿರಿಯ ಅಧಿಕಾರಿಗಳಿಗೆ ಸ್ಪಷ್ಟವಾಗಿ ಗೊತ್ತಿದೆಯೆಂಬುದು ಅವರೀರ್ವರ ಕಳಕಳಿಯ ಮಾತುಗಳಿಂದಲೇ ವ್ಯಕ್ತವಾಯಿತು. ‘‘ದೊರೆತನಕ ದೂರು’’ ಎಂಬುದು ಒಂದು ಆಡು ಮಾತು. ಆದರೆ ಈ ಸ‘ೆಯಲ್ಲಿ ‘‘ದೊರೆಗಳೇ’’ ಸಮಸ್ಯೆಗಳನ್ನು ಪಟ್ಟಿಮಾಡಿದ್ದು ವಿಶೇಷ. ಈರ್ವರೂ ಅಧಿಕಾರಿಗಳು ಸಭಿಕರಲ್ಲೊಂದು ‘ರವಸೆ ಮೂಡಿಸಿದರು.
ಅದೇ ಹೊತ್ತಿಗೆ ತುಮಕೂರು ನಗರದಲ್ಲಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಬೆಸ್ಕಾಂ, ನೀರು ಪೂರೈಕೆ ಮತ್ತು ಒಳಚರಂಡಿ ಮಂಡಲಿ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ದೂರವಾಣಿ ಇಲಾಖೆ -ಹೀಗೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಇಲಾಖೆಗಳ ನಡುವೆ ಸಮನ್ವಯತೆಯೇ ಇಲ್ಲವೆಂಬುದೂ ಬಯಲಿಗೆ ಬಂತು. ಯಾವ ಇಲಾಖೆ, ಎಲ್ಲಿ , ಎಷ್ಟು ದಿನಗಳಿಂದ, ಏನು ಕಾಮಗಾರಿ ಮಾಡುತ್ತಿದೆ ಎಂಬುದೇ ಯಾರಿಗೂ ಗೊತ್ತಿಲ್ಲದಂತಹ ದುಸ್ಥಿತಿ ಇರುವುದೂ ಬಹಿರಂಗವಾಯಿತು. ಪೊಲೀಸ್ ಹಾಗೂ ಆರ್.ಟಿ.ಒ. ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿ, ದಂಡ ವಿಧಿಸಬಹುದು. ಪೊಲೀಸ್ ಇಲಾಖೆ ಟ್ರಾಫಿಕ್ ನಿರ್ವಹಣೆ ಮಾಡಬಹುದು. ಆದರೆ ಮಿಕ್ಕ ಇಲಾಖೆಗಳ ಜವಾಬ್ದಾರಿ ಹಾಗೂ ಕರ್ತವ್ಯ ನಿರ್ವಹಣೆ ಏನೆಂಬುದು ಈಗ ಚರ್ಚೆಯಾಗುವಂತಾಗಿದೆ.
ಬೆಳೆಯುತ್ತಿರುವ ತುಮಕೂರು ನಗರದಲ್ಲಿ ರಸ್ತೆ ಸುರಕ್ಷತೆ ಎಂಬುದು ಮರೀಚಿಕೆಯಾಗಿದೆ. ಟ್ರಾಫಿಕ್ ಸಮಸ್ಯೆ ಬೃಹದಾಕಾರವಾಗಿ ಕಾಡತೊಡಗಿದೆ. ಯಾವ ಇಲಾಖೆ ರಸ್ತೆಯನ್ನು ಅಗೆಯುತ್ತಿದೆಯೆಂಬುದೇ ಯಾರಿಗೂ ಗೊತ್ತಿರದ ದುರವಸ್ಥೆ ಇದೆ. ರಸ್ತೆಯನ್ನು ಅಗೆದರೆ, ಅದನ್ನು ತ್ವರಿತವಾಗಿ ಯೋಗ್ಯರೀತಿಯಲ್ಲಿ ಸರಿಪಡಿಸುವ ಬಗ್ಗೆ ಇಲ್ಲಿ ‘‘ಹೇಳುವವರು- ಕೇಳುವವರೇ ಇಲ್ಲ’’ದಂತಾಗಿದೆ. ನಗರದೊಳಗೇ ಬೀದಿ ದೀಪಗಳು ಬೆಳಗದೆ ಕಗ್ಗತ್ತಲಿನ ಸ್ಥಿತಿ ಉಂಟಾಗುತ್ತಿದೆ. ಹಳ್ಳ-ಗುಂಡಿಗಳಿಗಂತೂ ಕೊರತೆಯೇ ಇಲ್ಲ. ಹೀಗೆ ತುಮಕೂರು ನಗರದಲ್ಲಿ ಅಪಘಾತಗಳಿಗೆ ನೂರೆಂಟು ಕಾರಣಗಳು ಕಣ್ಣಿಗೆ ರಾಚುತ್ತಿವೆ. ಇಂತಹುದೊಂದು ಸನ್ನಿವೇಶದಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆದಿದೆ. ಈಗ ಸಭೆಯಿಂದಾದ ಪರಿಣಾಮದತ್ತ ಎಲ್ಲರ ನೋಟ ಹರಿದಿದೆ. ಡಿಸಿ ಮತ್ತು ಎಸ್ಪಿ ಅವರು ಇತರ ಇಲಾಖೆಗಳ ಮೇಲೆ ಹೇಗೆ ಚಾಟಿ ಬೀಸುತ್ತಾರೆಂಬ ಕುತೂಹಲ ಮೂಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ