ಬೈಕ್ ಸವಾರರಿಗೆ ಸವಾಲಾದ ರಸ್ತೆ ಬದಿಯ ಜಂಗಲ್..!

ಗುಬ್ಬಿ

    ರಾಜ್ಯ ಹೆದ್ದಾರಿ ರಸ್ತೆಯ ಎರಡೂ ಬದಿಯಲ್ಲಿ ಬೆಳದು ನಿಂತ ಜಂಗಲ್‍ನಿಂದ ಬೈಕ್ ಸವಾರರು ನಿತ್ಯ ಸರ್ಕಸ್ ನಡೆಸಿ ಸಾಗುವಂತಾಗಿದೆ ಎಂದು ಸಿ.ಎಸ್.ಪುರ ರಸ್ತೆಯಲ್ಲಿ ಸಂಚರಿಸುವ ವಾಹನ ಸಂಚಾರರ ಆರೋಪವಾಗಿದೆ.

    ಕೇಶಿಪ್ ರಾಜ್ಯ ಹೆದ್ದಾರಿ ಗುಬ್ಬಿ ಮೂಲಕ ಯಡಿಯೂರು ತಲುಪುವ ಮಾರ್ಗ ಮಧ್ಯೆ ಸಿ.ಎಸ್.ಪುರ ಗ್ರಾಮದವರೆಗೆ ಸುಮಾರು 20 ಕಿಮೀ ರಸ್ತೆ ಇಕ್ಕೆಲಗಳಲ್ಲಿ ಬೆಳದು ನಿಂತ ಗಿಡಮರಗಳು ತೀವ್ರ ಸಮಸ್ಯೆ ತರುತ್ತಿದೆ. ಡಾಂಬರ್ ರಸ್ತೆಯನ್ನೇ ಆವರಿಸಿರುವ ಜಂಗಲ್ ಈಚೆಗೆ ಬಿದ್ದ ಮಳೆಯಿಂದ ಸಮೃದ್ದಿಯಾಗಿ ಬೆಳದು ರಸ್ತೆಗೂ ಹರಡಿಕೊಂಡಿದೆ. ಬೈಕ್ ಸವಾರರು ರಸ್ತೆಯ ಎಡಬದಿಯಲ್ಲಿ ಸಂಚರಿಸುವ ವೇಳೆ ಜಂಗಲ್‍ನಿಂದ ಉರುಳಿ ಬಿದ್ದ ಘಟನೆ ನಡೆದಿವೆ. ಸಣ್ಣ ಗಿಡಗಳ ಹಾವಳಿಗೆ ರಸ್ತೆ ಮಧ್ಯೆ ಸಂಚರಿಸಿ ಅಪಘಾತಕ್ಕೆ ತುತ್ತಾದ ನಿದರ್ಶನ ಕೂಡ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟ ಕೇಶಿಪ್ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರುತ್ತಿದ್ದಾರೆ.
ವಿಶಾಲವಾಗಿದ್ದ ರಸ್ತೆಯ ಎರಡೂ ಬದಿಯಲ್ಲಿ ಬೆಳೆದ ಸಸಿಗಳು, ಬೇಲಿ ಗಿಡಗಳು ಡಾಂಬರ್ ರಸ್ತೆಯನ್ನು ಆಕ್ರಮಿಸಿಕೊಂಡಿದೆ. ಇದರಿಂದ ರಸ್ತೆ ಕಿರಿದಾಗಿ ಕಾಣತೊಡಗಿದೆ.

     ಬಾರಿ ವಾಹನಗಳು ಆರಾಮಾವಾಗಿ ಸಂಚರಿಸಿದರೆ ಬೈಕ್ ಸವಾರರು ಮಾತ್ರ ಪರದಾಡುತ್ತಾರೆ. ಸಣ್ಣ ವಾಹನಗಳಾದ ಆಟೋಗಳು, ಟೆಂಪೋಗಳು, ಕಾರುಗಳು ಸಹ ಮುಖಾಮುಖಿ ಸಂಚರಿಸುವ ವೇಳೆ ಭಯದಲ್ಲಿ ಚಾಲಕ ಇರಬೇಕಿದೆ. ಏಕಕಾಲದಲ್ಲಿ ಎರಡು ವಾಹನಗಳು ಓಡಾಡಲು ಅಸಾಧ್ಯ ಎನ್ನುವ ಮಟ್ಟಕ್ಕೆ ಜಂಗಲ್ ಬೆಳೆದು ಕೆಲ ಗ್ರಾಮಗಳ ಬಳಿ ಪರದಾಡುವಂತಾಗಿದೆ. ಮೂರ್ನಾಲ್ಕು ಅಪಾಯಕಾರಿ ತಿರುವುಗಳಲ್ಲಿ ಜಂಗಲ್ ಮೃತ್ಯುಕೂಪವಾಗಿ ಕಾದಿದೆ ಎಂದು ವಿಜಯ್‍ಕುಮಾರ್ ಆರೋಪ ಮಾಡುತ್ತಾರೆ.

    ಕಳೆದೆರಡು ವರ್ಷದಿಂದ ಈ ರಾಜ್ಯ ಹೆದ್ದಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಾಣಬರುತ್ತಿದೆ. ಜಂಗಲ್ ಈ ಬಾರಿಯ ಮಳೆಗೆ ಸೊಂಪಾಗಿ ಬೆಳೆದಿದೆ. ಇದು ಸಂಪೂರ್ಣ ಮಾರಕ ಎನ್ನುವ ವಿಚಾರ ಸಂಬಂಧಪಟ್ಟ ಇಂಜಿನಿಯರ್‍ಗೆ ತಿಳಿಸಿದ್ದರೂ ಜಂಗಲ್ ತೆರೆವು ಕಾರ್ಯಕ್ಕೆ ಮುಂದಾಗಿಲ್ಲ. ಈಗಾಗಲೇ ಸಣ್ಣಪುಟ್ಟ ಅಪಘಾತಗಳು ಕೈಕಾಲು ಮೂಳೆ ಮುರಿಸಿವೆ. ಜಂಗಲ್ ಇನ್ನೂ ಸ್ಪಲ್ಪ ಬೆಳೆದಲ್ಲಿ ಜೀವಗಳ ಬಲಿಗೆ ಕಾದಿರುತ್ತವೆ. ಈ ರಸ್ತೆಯ ಬಳಕೆಯಲ್ಲಿ ಸಾವಿರಾರು ಮಂದಿ ಗ್ರಾಮೀಣ ಭಾಗದವರು. ಈ ಪೈಕಿ ಅತಿ ಹೆಚ್ಚು ಬೈಕ್ ಬಳಕೆದಾರರು ರಸ್ತೆಗಿಳಿಯುತ್ತಾರೆ. ಈ ಕೂಡಲೇ ಜಂಗಲ್ ತೆರವು ಮಾಡಬೇಕು ಎಂದು ಹೊಸಹಳ್ಳಿ, ಗೋಪಾಲಪುರ, ಸುರುಗೇನಹಳ್ಳಿ, ಕೊಪ್ಪ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap