ಹುಳಿಯಾರು
ಹುಳಿಯಾರು ಪಟ್ಟಣ ಪಂಚಾಯ್ತಿಯ ಪಟ್ಟಣ ವ್ಯಾಪಾರ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ ಬೀದಿ ಬದಿ ವ್ಯಾಪಾರಿಗಳ ಪ್ರತಿನಿಧಿ ಚುನಾವಣೆಯನ್ನು ಡಿ.21 ರಂದು ನಡೆಸಲು ಸಹಕಾರಿ ಚುನಾವಣಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಪಟ್ಟಣ ವ್ಯಾಪಾರಿ ಸಮಿತಿಗೆ ತಲಾ 10 ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಅದರಲ್ಲಿ ಮೂರನೆ ಎರಡರಷ್ಟು (1/3) ರಷ್ಟು ಮಹಿಳಾ ಸದಸ್ಯರು, ಎಸ್ಸಿ, ಎಸ್ಟಿ, ಇತರೆ ಹಿಂದುಳಿದ ವರ್ಗ, ಅಂಗವಿಕಲರು, ಅಲ್ಪಸಂಖ್ಯಾತರಲ್ಲಿ ಕನಿಷ್ಠ ಒಬ್ಬ ಸದಸ್ಯರು ಇರಬೇಕು ಎಂದು ಚುನಾವಣಾ ಪ್ರಾಧಿಕಾರ ತಿಳಿಸಿದೆ ಎಂದು ವಿವರಿಸಿದ್ದಾರೆ.
ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಡಿ. 9 ರಿಂದ 13 ರ ವರೆಗೆ ನಾಮಪತ್ರ ಸಲ್ಲಿಕೆ ಮಾಡಬಹುದಾಗಿದೆ. ನಾಮಪತ್ರ ವಾಪಾಸ್ ಪಡೆಯುವುದಕ್ಕೆ ಡಿ .15 ಕೊನೆಯ ದಿನವಾಗಿದ್ದು, ಡಿ. 21 ರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಹುಳಿಯಾರು ಪಪಂ ಕಚೇರಿಯ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಅದೇ ದಿನ (ಡಿ.21) ಫಲಿತಾಂಶ ಪ್ರಕಟಿಸಲಾಗುವುದು ಎಂದು ಸಹಕಾರಿ ಚುನಾವಣಾ ಪ್ರಾಧಿಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಪಪಂ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣದಡಿ ಬೀದಿ ವ್ಯಾಪಾರಿಗಳನ್ನು ಗುರುತಿಸಿ ಗುರುತಿನ ಚೀಟಿ ನೀಡಲಾಗಿದೆ. ಈ ಗುರುತಿನ ಚೀಟಿ ಹೊಂದಿರುವ ಬೀದಿ ವ್ಯಾಪಾರಿಗಳಿಗೆ ಮಾತ್ರ ಪಟ್ಟಣ ವ್ಯಾಪಾರಿ ಸಮಿತಿ ಸದಸ್ಯರ ಆಯ್ಕೆಗೆ ಮತದಾನ ಮಾಡುವುದಕ್ಕೆ ಅವಕಾಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನರಗುಂದ ಪುರಸಭೆ ಕಾರ್ಯಾಲಯ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
