ಚಳ್ಳಕೆರೆ
ಇತ್ತೀಚೆಗೆ ನಡೆದ ನಗರಸಭಾ ಚುನಾವಣೆಯಲ್ಲಿ ನಗರಸಭೆ ಆಡಳಿತವನ್ನು ಸರಳ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಪಡೆದಿದ್ದು, ಪಕ್ಷದ ಗೆಲುವಿನ ರೂವಾರಿಯಾಗಿ ಶಾಸಕ ಟಿ.ರಘುಮೂರ್ತಿ ಹೊರಹೊಮ್ಮಿದ್ದು, ನಗರಸಭೆಯ ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರು ಶಾಸಕರ ಪರಿಶ್ರಮದಿಂದ ಗೆಲುವು ಸಾಧಿಸಲಾಗಿದೆ ಎಂಬ ಆತ್ಮವಿಶ್ವಾಸವನ್ನು ಹೊಂದಿದ್ಧಾರೆ.
ಇದಕ್ಕೆ ಪೂರಕವಾಗಿ ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ನಗರಸಭೆಯನ್ನು ನಂ.1 ನಗರಸಭೆಯಾಗಿ ಕಾಣುವಂತೆ ಮಾಡುವ ಉತ್ಸಾಹ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸೋಮಗುದ್ದು ರಸ್ತೆಯನ್ನು ಅಗಲೀಕರಣ ಮಾಡುವ ನಿಟ್ಟಿನಲ್ಲಿ ಭಾನುವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತೆರಳಿ ಸೋಮಗುದ್ದ ರಸ್ತೆ ವಿಸ್ತರಣೆಯ ಬಗ್ಗೆ ಹಲವಾರು ಸಲಹೆ ಸೂಚನೆಯನ್ನು ಅಧಿಕಾರಿ ವರ್ಗಕ್ಕೆ ನೀಡಿದರು.
ನಗರದ ಚಿತ್ರದುರ್ಗ ರಸ್ತೆಯ ಪ್ರವಾಸಿ ಮಂದಿರದಿಂದ ಸೋಮಗುದ್ದುಯ ಆಂಜನೇಯಸ್ವಾಮಿ ದೇವಸ್ಥಾನದ ತನಕ ಈಗಿರು ರಸ್ತೆಯನ್ನು ಅಗಲೀಕರಣಗೊಳಿಸುವಂತೆ ಸೂಚಿಸಿದರು. ಸದರಿ ರಸ್ತೆಯನ್ನು 50 ಅಡಿಗಳಿಗೆ ವಿಸ್ತರಿಸಿ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸುವಂತೆ ಸೂಚನೆ ನೀಡಿದರು.
ನಗರದ ಪದವಿ ಪೂರ್ವ ಕಾಲೇಜು, ನ್ಯಾಯಾಲಯ, ಕ್ರಿಡಾಂಗಣ, ಕೃಷಿ ಇಲಾಖೆ, ವಿವಿಧ ಇಲಾಖೆಯ ಹಾಸ್ಟಲ್‍ಗಳು, ಶಾಲೆಗಳು ಈ ರಸ್ತೆಯಲ್ಲಿದ್ದು ಹೆಚ್ಚಿನ ಸಂಚಾರವಿದ್ದು, ಅನೇಕ ಬಾರಿ ಇಕ್ಕಟ್ಟಾದ ರಸ್ತೆ ಹಿನ್ನೆಲೆಯಲ್ಲಿ ಅಪಘಾತಗಳು ಮೇಲಿಂದ ಮೇಲೆ ಸಂಭವಿಸುತ್ತಿವೆ. ಇದನ್ನು ನಿಯಂತ್ರಿಸಲು ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ಧಾರೆ.
ಈ ಸಂದರ್ಭದಲ್ಲಿ ಬೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್‍ಗೆ ಸೂಚನೆ ನೀಡಿದ ಅವರು, ಈ ರಸ್ತೆಯಲ್ಲಿ ಹಾಲಿ ಇರುವ ಎಲ್ಲಾ ವಿದ್ಯುತ್ ಕಂಬಗಳನ್ನು ಹಿಂದಕ್ಕೆ ಹಾಕಿಕೊಳ್ಳುವಂತೆ ಸೂಚನೆ ನೀಡಿದರು. ಅಗಲೀಕರಣ ಸಂದರ್ಭದಲ್ಲಿ ಕಾಂಪೌಂಡ್ ಹಾಗೂ ಇನ್ನಿತರೆ ಅನಧಿಕೃತ ಅಕ್ರಮ ಕಟ್ಟಡಗಳು ನಡೆದಿದ್ದಲ್ಲಿ ಅವುಗಳನ್ನು ತೆರವುಗೊಳಿಸಬೇಕು.
ಮನೆ ನಿರ್ಮಿಸಿದಲ್ಲಿ ಮಾತ್ರ ಕಾನೂನು ಪ್ರಕಾರ ನೋಟಿಸ್ ಜಾರಿ ಮಾಡುವಂತೆ ಅವರು ತಿಳಿಸಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಈ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು ಇಲ್ಲಿನ ಎಲ್ಲಾ ನಿವಾಸಿಗಳು ಹಾಗೂ ಪುಟ್‍ಬಾತ್ ವ್ಯಾಪಾರಸ್ಥರು ನಗರದ ಅಭಿವೃದ್ಧಿ ದೃಷ್ಠಿಯಿಂದ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಲಕ್ಷ್ಮಿನಾರಾಯಣ, ನಗರಸಭೆಯ ಜೂನಿಯರ್ ಇಂಜಿನಿಯರ್ ಲೋಕೇಶ್, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‍ಗೌಡ, ಎಂ.ಜೆ.ರಾಘವೇಂದ್ರ, ಕಾಂಗ್ರೆಸ್ ಮುಖಂಡರಾದ ಬಡಗಿಪಾಪಣ್ಣ, ಪಾಲಯ್ಯ, ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








