ರಿಂಗ್ ರೋಡಲ್ಲಿ ಧೂಳು… ರಸ್ತೆ ತುಂಬ ಗುಂಡಿ…

ದಾವಣಗೆರೆ :

    ರಿಂಗ್ ರಸ್ತೆಯಿಂದ ಎಳುವ ಧೂಳು, ರಸ್ತೆ ತುಂಬ ಬಿದ್ದಿರುವ ಗುಂಡಿಗಳು, ಯುಜಿಡಿ ಸಂಪರ್ಕ ಇಲ್ಲದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜನಸ್ಪಂದನ ಸಭೆಯಲ್ಲಿ ಬೆಳಕಿಗೆ ಬಂದವು.

    ಇಲ್ಲಿನ ಎಸ್‍ಪಿಎಸ್ ನಗರದ ನಿವಾಸಿಹಗಳು ಮಹಾಲಕ್ಷ್ಮಿ ಎಂಬುವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಿ, ಎಸ್‍ಪಿಎಸ್ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಿಂಗ್ ರಸ್ತೆಯಲ್ಲಿ ಮಣ್ಣು ಹಾಕಲಾಗಿದ್ದು, ಇದರಿಂದ ಧೂಳು ಎಳುತ್ತಿದೆ. ಅಲ್ಲದೇ, ಚರಂಡಿಗಳ ಪಕ್ಕದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಿಲ್ಲ. ರಸ್ತೆಗಳ ತುಂಬ ಗುಂಡಿಗಳಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ.

    ಹಲವು ರಸ್ತೆಗಳಲ್ಲಿ ಡ್ರೈನೇಜ್ ವ್ಯವಸ್ಥೆ ಇಲ್ಲ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಈ ಭಾಗದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಈ ಮನವಿಯನ್ನು ಸ್ಮಾರ್ಟ್‍ಸಿಟಿ ವ್ಯವಸ್ಥಾಪಕರಿಗೆ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.

     ಮಾಗಾನಹಳ್ಳಿ ಪ್ರಕಾಶ್ ಹಾಗೂ ಅವರ ಸಹೋದರ ಅರ್ಜಿ ಸಲ್ಲಿಸಿ, ಹೈಸ್ಕೂಲ್ ಮೈದಾನದ ಹಿಂಭಾಗದಲ್ಲಿರುವ 5 ಎಕರೆ 14 ಗುಂಟೆ ಜಮೀನಿನ ಮೂಲ ಮಾಲೀಕರು ತಾವಾಗಿದ್ದು, ಪಹಣಿ ಕೂಡ ನಮ್ಮ ಹೆಸರಲ್ಲಿದೆ. ಆದರೂ ದಾವಣಗೆರೆ ಎಸಿ ಯವರು ನಮ್ಮ ಹೆಸರಿಗೆ ಖಾತೆ ಮಾಡಿಕೊಡದೆ, ಪ್ರಸ್ತುತ ಸ್ವಾಧೀನದಲ್ಲಿರುವವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ನಮ್ಮಿಂದ ಹಣ ನಿರೀಕ್ಷಿಸುತ್ತಿದ್ದು, ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ದೂರಿದರು.

      ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪ್ರಕರಣಕ್ಕೆ ಸಂಬಂಧಿಸಿದ ಅಷ್ಟೂ ದಾಖಲಾತಿಗಳನ್ನು ತೆಗೆದುಕೊಂಡು ಬಂದಲ್ಲಿ ತಾವು ಪರಿಶೀಲಿಸುವುದಾಗಿ ತಿಳಿಸಿದರು.

     ಚನ್ನಗಿರಿ ತಾಲ್ಲೂಕಿನ ತ್ಯಾವಣಿಗಿಯ ಟಿ.ಎನ್.ವೀರೇಂದ್ರಕುಮಾರ್, ದೊಡ್ಡಘಟ್ಟದ ಅಲ್ಲಾಭಕ್ಷ, ಕೆರೆಬಿಳಚಿಯ ಹೈದರ್ ಅಲಿ ಖಾನ್ ಎಂಬುವವರು ಅರ್ಜಿ ಸಲ್ಲಿಸಿ ದಾವಣಗೆರೆ-ಚನ್ನಗಿರಿ ಮಾರ್ಗದಲ್ಲಿ 2 ಸಾವಿರ ವಿದ್ಯಾರ್ಥಿಗಳು, 800 ಜನ ಅಂಗವಿಕಲರು, ಹಿರಿಯ ನಾಗರೀಕರು, ಅಧಿಕಾರಿಗಳು ಸೇರಿದಂತೆ ದಿನನಿತ್ಯ ಸಾರ್ವಜನಿಕರು ಪ್ರಯಾಣಿಸುತ್ತಿದ್ದು, ಈ ಗ್ರಾಮಗಳಿಗೆ ಹೆಚ್ಚುವರಿ ಬಸ್ ಸಂಚಾರದ ಅವಶ್ಯಕತೆ ಇದೆ. ಇದಕ್ಕಾಗಿ ಹೋರಾಟ ಮಾಡಿದರೂ ಕೇವಲ ಬೆಳಿಗ್ಗೆ ಮಾತ್ರ ಹೆಚ್ಚುವರಿ ಬಸ್ ಬಿಡಲಾಗಿದೆ. ಇನ್ನೂ ಮುಂದೆ ಸಂಜೆಗೂ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.

     ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಮಾತನಾಡಿ, ನಗರದಲ್ಲಿ ಪರವಾನಿಗಿ ಪಡೆಯದೇ ಅನಧಿಕೃತ ಕಟ್ಟಡಗಳ ನಿರ್ಮಾಣ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಈ ಕುರಿತು ಪರಿಶೀಲಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

      ಕನ್ನಡ ಜಾಗೃತಿ ಸಮಿತಿ ಕಾರ್ಯದರ್ಶಿ ರುದ್ರಮುನಿ, ಚನ್ನಗಿರಿ ತಾಲ್ಲೂಕಿಗೆ ಇದುವರೆಗೆ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಇಲ್ಲದ ಕಾರಣ ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ಬಸ್ ಸಂಪರ್ಕ ಇಲ್ಲದೇ ತೊಂದರೆಯಾಗುತ್ತಿದೆ. ಡಿಪೋ ಸ್ಥಾಪಿಸಲು ಒತ್ತಾಯದ ಮೇರೆಗೆ ಇತ್ತೀಚೆಗೆ ಕೆಎಸ್‍ಆರ್‍ಯವರು ಕಸಬಾ ಹೋಬಳಿ ಚಿಕ್ಕಲಿಕೆರೆ ಗ್ರಾಮದ ಸರ್ವೆ ನಂಬರ್ 103 ರಲ್ಲಿ ನಾಲ್ಕು ಎಕರೆ ಮೂವತ್ತೈದು ಗುಂಟೆ ಸರ್ಕಾರಿ ಜಮೀನನ್ನು ಪರಿಶೀಲಿಸಿ ಡಿಪೋ ನಿರ್ಮಿಸಲು ಸೂಕ್ತ ಸ್ಥಳವೆಂದು ಪರಿಗಣಿಸಿದ್ದು, ತಾವು ಈ ಜಮೀನನ್ನು ಕೆಎಸ್‍ಆರ್‍ಟಿಸಿ ಗೆ ವರ್ಗಾಯಿಸಿ ಮಂಜೂರಾತಿ ಆದೇಶ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಕೆ.ಎಸ್.ಚಂದ್ರಪ್ಪ ಎಂಬುವವರು ಚನ್ನಗಿರಿ ತಾಲ್ಲೂಕಿನ ಕಗತೂರು ಗ್ರಾಮಕ್ಕೆ ಹೆಚ್ಚುವರಿಯಾಗಿ ಕೆಎಸ್‍ಆರ್‍ಟಿಸಿ ಬಸ್ ಬಿಡಬೇಕೆಂದು ಅನೇಕ ಬಾರಿ ಕೆಎಸ್‍ಆರ್‍ಟಿಸಿ, ಆರ್‍ಟಿಓ ಕಚೇರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಗ್ರಾಮಕ್ಕೆ ಬಸ್ ಅವಶ್ಯಕತೆ ತುರ್ತಾಗಿದ್ದು, ಹೆಚ್ಚುವರಿ ಬಸ್ ಸಂಚಾರ ನೀಡಬೇಕೆಂದು ಮನವಿ ಮಾಡಿದರು.

    ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ ಮಾತನಾಡಿ, ನಗರದಲ್ಲಿ ಖಾಸಗಿ ಸಂಚಾರಿ ಬಸ್ಸುಗಳು ಮತ್ತು ಕೆಎಸ್‍ಆರ್‍ಟಿಸಿ ನಗರ ಸಂಚಾರಿ ಬಸ್ಸುಗಳು ಚಾಲನೆಯಲ್ಲಿದ್ದಾಗ ಚಾಲಕರು ಹಲವಾರು ಬಾರಿ ಹೇಳಿದರೂ ಬಾಗಿಲುಗಳನ್ನು ಹಾಕದೇ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದು, ಶಾಲಾ-ಕಾಲೇಜಿ ಮಕ್ಕಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು, ನಿರ್ಲಕ್ಷ್ಯ ಚಾಲನೆ ಕುರಿತು ಕೆಎಸ್‍ಆರ್‍ಟಿಸಿ ಡಿಸಿ ಹಾಗೂ ಖಾಸಗಿ ಬಸ್ ಸಂಸ್ಥೆಗೆ ಸೂಕ್ತ ನಿರ್ದೇಶನ ನೀಡುವುದಾಗಿ ತಿಳಿಸಿದರು.ಸಭೆಯಲ್ಲಿ ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ.ಜಿ, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಿಡಿಪಿಐ ಪರಮೇಶ್ವರಪ್ಪ, ಆರ್‍ಟಿಓ ಎನ್.ಜೆ.ಬಣಕಾರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap