ಹಾಳಾದ ರಸ್ತೆಗಳು : ಪುರಸಭೆ ನಿರ್ಲಕ್ಷ್ಯ

ಕುಣಿಗಲ್
ವಿಶೇಷ ವರದಿ: ಎಂ.ಡಿ. ಮೋಹನ್ 
      ಅಯ್ಯೋ ರೀ.,., ಏನಪ್ಪಾ ನಿಂಗೆ ಕಣ್ ಕಾಣಲ್ವಾ.,.,ರೆಡಿಯಾಗಿ ಪಂಕ್ಷನ್ಗೆ ಹೋಗ್ತಾ ಇದ್ದೇ ಬಟ್ಟೆಯೆಲ್ಲಾ ಹಾಳ್ಮಾಡ್ಬುಟ್ಟಲ್ಲಾ ಏ.. ಥೂ.,.,.,. ಅಯ್ಯೋ ಅಣ್ಣಾ ನಾನೇನ್ ಏನ್‍ಮಾಡ್ಲಿ ರಸ್ತೆಯಲ್ಲಾ ಕಟ್ಟೆ-ಕೆರೆಯಾಗಿದೆ. ನಾನು ಗಾಡಿ ಓಡ್ಸೋದಾದ್ರು ಹೆಂಗೆ,.., ನಾನೇನು ಬೇಕು ಅಂತಾ ನಿಮ್ಮ ಬಟ್ಟೆ ಮೇಲೆ ಕೆಸರೆರಚಿದ್ನಾ ಅಯ್ಯೋ ಮೊನ್ನೆ ನನ್ನಮೇಲೂ ಹಿಂಗೆ ಆಯ್ತು ಏನ್ ಮಾಡ್ಲೀ ಆ ಪುರಸಭೆಯವರಿಗೆ ಮಾನ ಮರಿಯಾದಿ ಇಲ್ವಾ.,.., ಹೋಳೋರ್ ಕೇಳೋರ್ ಇದ್ದಿದ್ರೆ ಈ ರಸ್ತೆ ಸರಿಯೋಗ್ತಿತ್ತು..,.,  ಎಂದು ನಿತ್ಯ ನಾಗರಿಕರು ಹಿಡಿ ಶಾಪ ಹಾಕುತ್ತಲೇ ಈ ಹಾಳಾದ ರಸ್ತೆಯಲ್ಲಿ ಸಂಚರಿಸುತ್ತಿರುವುದು ಮಾಮೂಲಿಯಾಗಿದೆ. 
     ತುಂತುರು ಮಳೆ ಬಂದರೆ ಸಾಕು ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪಟ್ಟಣದ ರಾಜ ಬೀದಿ ಪಟ್ಟಣ ಹುಟ್ಟಿದಾಗಲೇ ಈ ಬೀದಿ ಹುಟ್ಟುವ ಮೂಲಕ ಊರಿನ ಕೀರ್ತಿಗೆ ಹೆಸರಿಗೆ ಪಾತ್ರವಾದ ಈ ಬೀದಿಯನ್ನ ಇಂದು ಸಹ ದೊಡ್ಡಪೇಟೆಯ ರಸ್ತೆ ತುಪ್ಪ ಮಾರುವ ಬೀದಿ ಹಾಗೂ ಚಿನ್ನ ಬೆಳ್ಳಿ ಮಾರುವವರೇ ಹೆಚ್ಚು ಇರುವುದರಿಂದ ಗೋಲ್ಡನ್ ಸ್ಟ್ರೀಟ್ ಎಂಬ ಇತ್ಯಾದಿ ಹೆಸರಿನಲ್ಲಿ ಕರೆಸಿಕೊಳ್ಳುವ ಈ ರಸ್ತೆ, ಇಂದು ಯಾವುದೋ ಕುಗ್ರಾಮದ ರಸ್ತೆನೋ, ಕಾಡು ಕೊಂಪೆಯ ರಸ್ತೆನೋ.,. ಎಂಬಂತೆ ಕಾಣುತ್ತಿರುವುದು ಕುಣಿಗಲ್ ಪಟ್ಟಣದ ನಾಗರಿಕರ ವಿಪರ್ಯಾಸವೇ ಸರಿ. 
     ಪಟ್ಟಣದ ಹಲವು ಬಡಾವಣೆಗಳ ಪೈಕಿ ಈ ದೊಡ್ಡಪೇಟೆಯೆ ಈ ನಗರದ ಮುಖ್ಯ ನಗರ. ಮದ್ದೂರು-ಮಂಡ್ಯ ಕಡೆಗೆ ಶತಮಾನಗಳ ಹಿಂದೆ ಸಂಚರಿಸುವ ರಸ್ತೆ ಇದಾಗಿತ್ತು. ಈ ರಸ್ತೆಯ ಇಕ್ಕೆಲಗಳಲ್ಲಿ ಅಂದಿನ ದಿನಮಾನದಲ್ಲಿಯೆ ಮನೆಗೊಂದು ಅಂಗಡಿಯಂತೆ ನಿರ್ಮಾಣವಾಗಿತ್ತು. ಇದೇ ಬೀದಿಯಲ್ಲಿ ಎಲ್ಲಾ ತರಹದ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು. ಇಂತಹ ಒಂದು ಇತಿಹಾಸ ಉಳ್ಳ ಕುಣಿಗಲ್ ಪಟ್ಟಣದ ಪ್ರಮುಖ ಬೀದಿ ಇದು. ಆದರೆ ಇಂದು ಕ್ಯಾಕರಿಸಿ ಉಗಿಯಲೂ ಮನಸ್ಸು ಬರುತ್ತಿಲ್ಲಾ. ಇದೊಂದು ರಸ್ತೆ ನಾ .,. ನೋಡಿ.,., ಸ್ವಾಮೀ.,., ಎಂದು ಹಿರಿಯ ನಾಗರಿಕರು ನಿತ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಛೀಮಾರಿ ಹಾಕುತ್ತ ಹಿಡಿ ಶಾಪ ಹಾಕುತ್ತಿದ್ದಾರೆ. 
      ಈ ರಸ್ತೆ ಇಂದಿಗೂ ಊರಿಗೆ ಕಳಶ ಪ್ರಾಯವಾಗಿದೆ. ಐತಿಹಾಸಿಕ ಪ್ರಸಿದ್ಧ ದೇವಾಲಯಗಳಾದ ಶ್ರೀ ರೇಣುಕಾ ಎಲ್ಲಮ್ಮ ದೇವಾಲಯ, ಶ್ರೀ ತುಪ್ಪದ ಆಂಜನೇಯಸ್ವಾಮಿ ದೇವಾಲಯ, ಶ್ರೀ ಪಾಂಡುರಂಗದೇವಾಲಯ, ಶ್ರೀ ಕೊಲ್ಲಾಪುರದಮ್ಮ ದೇವಾಲಯ, ಶ್ರೀ ಚಾವಡಿ ಗಣಪತಿ ದೇವಾಲಯ, ಶ್ರೀ ಪಂಚಮುಖಿ ಆಂಜನೇಯ ದೇವಾಲಯ, ಮಸೀದಿ, ಶ್ರೀ ಶನೇಶ್ವರದೇವಾಲಯಗಳು ಸೇರಿದಂತೆ ಮಹಿಳಾ ಸರ್ಕಾರಿ ಕಾಲೇಜು, ಸೇರಿದಂತೆ ಹೆಸರಾಂತ ವೈದ್ಯರಾದ ಚಿಕ್ಕಯಾಲಕ್ಕಯ್ಯಾ ಕ್ಲಿನಿಕ್, ಹೆಸರಾಂತ ಹನುಮಂತರಾಯಪ್ಪ ಸ್ವೀಟ್ಸ್ ಅಂಗಡಿಗಳು, ಚಿನ್ನ-ಬೆಳ್ಳಿ ವ್ಯಾಪಾರಿಗಳು ಇನ್ನೂ ಹಲವು ಬಗೆ ಬಗೆಯ ವ್ಯಾಪಾರದ ರಸ್ತೆಯಾಗಿ ಇಂದಿಗೂ ಮುಂದುವರೆದಿದ್ದು ನಿತ್ಯ ಸಾವಿರಾರು ಜನ ಸಂಚರಿಸುವ ಪ್ರಮುಖ ರಸ್ತೆಯೇ ಇಂದಿನ ಪುರಸಭೆಯ ಅಧಿಕಾರಿಗಳಿಗಾಗಲಿ ಸ್ಥಳೀಯ ಜನಪ್ರತಿನಿಧಿಗಳಿಗಾಗಲಿ- ಶಾಸಕರಿಗಾಗಲಿ ಕಾಣದಿರುವುದು ಒಂದು ದುರಂತವೇ ಸರಿ.  
 
       ಇಲ್ಲಿನ ಪುರಸಭಾ ಮುಖ್ಯಾಧಿಕಾರಿ ಯಾರೆಂಬುದೆ ಗೊತ್ತಿಲ್ಲಾ. ಹಲವು ಬಾರಿ ಇಂತಹ ಸಮಸ್ಯೆ ಹೇಳಿಕೊಳ್ಳಲು ಹೋದರೆ ಕಚೇರಿಯಲ್ಲಿ ಇರುವುದೇ ಅಪರೂಪ. ಅದರಲ್ಲೂ ಇದ್ದರೆ  ಗುಮಸ್ತರು ಕೂರುವ  ರೀತಿಯಲ್ಲಿ ಮೇಲೆ ಎಲ್ಲೋ ಕೂರುತ್ತಾರಂತೆ.,. ಅಲ್ಲಿಯೇ ಅವರನಕೂಲ ಕ್ಕಾಗುವಂತಹ ಕೆಲಸ ಮಾಡಿ ಹೋಗುತ್ತಾರಂತೆ. ಇನ್ನಾವುದೋ ಒಂದು ಸಣ್ಣ ಪುಟ್ಟ ಕೆಲಸ ಮಾಡ್ಸಿ ಎಂದ್ರೂ ಸಹ ಬರೀ ಸಬೂಬು ಹೇಳುತ್ತ ಕಾಲಹರಣ ಮಾಡುವ ಇವರು ಬರೀ ರಾಜಕಾರಣಿಗಳ ಕೈ ಬೊಂಬೆಯಂತಾಗಿದ್ದಾರೆ ಎಂದು ಈ ರಸ್ತೆಯ ಸಮಸ್ಯೆಯನ್ನ ಹೇಳಿಕೊಂಡ ಹಿರಿಯ ನಾಗರಿಕನೊಬ್ಬ ಎಳೆಎಳೆಯಾಗಿ ಮುಖ್ಯಾಧಿಕಾರಿಗೆ ಛೀಮಾರಿ ಹಾಕುವ ಮೂಲಕ ಇಡೀ ವ್ಯವಸ್ಥೆಗೆ ಹಿಡಿಶಾಪ ಹಾಕಿ ಇದು ನಮ್ಮೂರ ರಸ್ತೆಯಂತೆ ಎಂದು ವ್ಯಂಗ್ಯವಾಡಿದ ಪ್ರಸಂಗ ನಾಚಿಗೆಯಾಗುವಂತಿತ್ತು.   
        ಈ ರಸ್ತೆ ಇಕ್ಕೆಲಗಳಲ್ಲಿ ಚರಂಡಿಯೇ ಇಲ್ಲಾ ! ಇತ್ತೀಚೆಗಷ್ಟೆ ಹಾಕಿದ ಟಾರ್ ಮಳೆ ನೀರಿಗೆ ಕೊಚ್ಚಿ ಹೋಗಿ ಮಳದುದ್ದ ಗುಂಡಿಗಳು ಬಿದ್ದಿವೆ. ಆದ್ರೂ ಈ ರಸ್ತೆಯನ್ನ ಈ ಬಾರಿ ಚುನಾವಣೆ ಮುಗಿದಾದ ಮೇಲೆ ಅಭಿವೃದ್ಧಿ ಮಾಡಿಸುವ ಮಾತನಾಡಿದ ಪುರಸಭಾ ಸದಸ್ಯರುಗಳಿಗೆ ಇನ್ನೂ ಅಧಿಕಾರ ಸಿಕ್ಕಲ್ಲಾ., ಅಯ್ಯೋ ಸ್ವಾಮಿ ಈ ರಸ್ತೆಗೆ ದಾತ್ರು ಅಪಾರ 3-4-5-6-7-8-9ನೇ ವಾರ್ಡ್ ಸದಸ್ಯರುಗಳಿಗೆ ಸೇರುತ್ತದೆ.
 
         ಅದ್ಯಾವ ಪುಣ್ಯಾತ್ಮರು ಮನಸ್ಸು ಮಾಡಿ ಚೆನ್ನಾಗಿ ಮಾಡುಸ್ತಾನೋ ನೋಡಬೇಕು ಎಂದು ಪತ್ರಿಕೆಯೊಂದಿಗೆ ಹೇಳಿಕೊಂಡ ಹಿರಿಯ ನಾಗರಿಕರಾದ ನಂಜುಂಡಪ್ಪ, ಕೆಂಪಣ್ಣ, ರಾಮಣ್ಣ, ಜಯರಾಮಣ್ಣ ಇನ್ನೂ ಮುಂತಾದ ನಾಗರಿಕರು ಹಿಡಿ ಶಾಪ ಹಾಕುತ್ತ ನಾವು ನೋಡ್ತಿವಿ..,. ಈ ರಸ್ತೆ ಶೀಘ್ರವಾಗಿ ಸರಿಯಾಗದೆ ಹೋದ್ರೆ ವಯಸ್ಸಾದೋರೆಲ್ಲಾ ಸೇರಿಕೊಂಡು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ನ್ಯಾಯಾಲಯಕ್ಕೆ ದೂರುಕೊಡುವುದು ಸೇರಿದಂತೆ ರಸ್ತೆಯಲ್ಲಿ ಕೂತು ಪ್ರತಿಭಟನೆಯನ್ನ ಮಾಡುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ.  ಇನ್ನಾದರೂ ಪುರಸಭೆ ಎಚ್ಚೆತ್ತು ತನ್ನ ಕಾರ್ಯವೈಖರಿಯನ್ನ ಚುರುಕುಗೊಳಿಸಿ ಕೊಂಡು ನಾಗರಿಕರ ನೋವಿಗೆ ಸ್ಪಂದಿಸುವುದೇ ? 

Recent Articles

spot_img

Related Stories

Share via
Copy link
Powered by Social Snap