ರೋಗಿಗಳ ನೋವು ಮರೆಸಲು ಸಂಗೀತ ಮದ್ದು: ಡಾ.ಟಿ.ಎ.ವೀರಭದ್ರಯ್ಯ

ತುಮಕೂರು:

       ಬದುಕಿನ ಜಂಜಾಟದ ನಡುವೆ ಎಲ್ಲಾ ಕೆಲಸದಲ್ಲೂ ಒತ್ತಡ ಹೆಚ್ಚುತ್ತಿದ್ದು, ಒತ್ತಡ ನಿವಾರಣೆಯಾಗಿ ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುವ ಶಕ್ತಿ ಸಂಗೀತಕ್ಕಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಟಿ.ಎ. ವೀರಭದ್ರಯ್ಯ ತಿಳಿಸಿದರು.

        ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಸ್ವರ ಸಿಂಚನ ಸುಗಮ ಸಂಗೀತ ಮತ್ತು ಜಾನಪದ ಕಲಾ ಸಂಸ್ಥೆ (ರಿ.) ತುಮಕೂರು, ಜಿಲ್ಲಾ ಆಸ್ಪತ್ರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಶುಶ್ರೂಷಕ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಗಾಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.

         ಸಂಗೀತಕ್ಕೆ ನೋವು ನಿವಾರಿಸುವ ಶಕ್ತಿ ಇದೆ ಎಂಬುದನ್ನು ಓರ್ವ ಅರವಳಿಕೆ ತಜ್ಞನಾಗಿ ಕಂಡುಕೊಂಡಿದ್ದೇನೆ. ಸಂಗೀತಕ್ಕೆ ನೋವನ್ನು ಮರೆಸುವ ಮಾಂತ್ರಿಕ ಶಕ್ತಿ ಇದೆ ಎಂಬುದನ್ನು ಹಲವು ಸಾಕ್ಷ್ಯಗಳ ಮೂಲಕ ನಿರೂಪಿಸಿವೆ. ಈ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿಯೂ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

        ರೋಗಿಗಳ ಸೇವೆಯಲ್ಲಿ ತಮ್ಮ ನೆಮ್ಮದಿ ಕಳೆದುಕೊಳ್ಳುವ ಶುಶ್ರೂಷ ವಿದ್ಯಾರ್ಥಿಗಳಿಗೆ ಮನರಂಜನೆ ಅಗತ್ಯವಿದೆ ಎಂಬುದನ್ನು ಮನಗಂಡು, ಸ್ವರ ಸಿಂಚನ ಸುಗಮ ಸಂಗೀತ ಮತ್ತು ಜಾನಪದ ಕಲಾಸಂಸ್ಥೆ ಆಯೋಜಿಸಿರುವ ಈ ಗಾಯನ ಶಿಬಿರ ತುಂಬಾ ಒಳ್ಳೆಯದು ಎಂದು ಹೇಳಿದರು.

         ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ನಿವೃತ್ತ ಉಪ ಪ್ರಾಂಶುಪಾಲರಾದ ಕೆ.ಎಸ್. ಉಮಾಮಹೇಶ್ ಮಾತನಾಡಿ, ದೇವರನ್ನು ಒಲಿಸಿಕೊಳ್ಳುವ ಶಕ್ತಿ ಸಂಗೀತ ಮತ್ತು ನೃತ್ಯದಂತಹ ಮಾಧ್ಯಮಗಳಿಗಿದೆ. ಹರಿದಾಸ ಪರಂಪರೆ, ವಚನ ಪರಂಪರೆಯಂತಹ ಅನೇಕ ಸಂಗೀತ ಪರಂಪರೆಗಳು ನಮ್ಮ ಶ್ರೇಷ್ಠತೆಯ ಪ್ರತಿಬಿಂಬವಾಗಿವೆ ಎಂದರು.

         ಕಳೆದ ಎರಡು ದಶಕಗಳಿಂದ ಸುಗಮ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ ತುಮಕೂರು ಜಿಲ್ಲೆಯ ಜನತೆಗೆ ಸಂಗೀತವನ್ನು ಉಣಬಡಿಸುತ್ತಾ ಜಿಲ್ಲೆಯ ಕೀರ್ತಿಯನ್ನು ಬೆಳಗಿಸುತ್ತಿರುವ ಮಲ್ಲಿಕಾರ್ಜುನ ಕೆಂಕೆರೆಯವರ ಕಾರ್ಯ ಶ್ಲಾಘನೀಯವಾದುದು ಎಂದು ನುಡಿದರು.

         ಯಾರಿಗೆ ಸಂಗೀತ, ಸಾಹಿತ್ಯದ ಬಗ್ಗೆ ಆಸಕ್ತಿ ಇರುವುದಿಲ್ಲವೋ ಅದು ರೆಕ್ಕೆ ಪುಕ್ಕೆಗಳಿಲ್ಲದ ಹಕ್ಕಿಗಳಿದ್ದ ಹಾಗೆ. ಇಂದು ಯುವ ಜನಾಂಗ ಸಂಗೀತ, ಸಾಹಿತ್ಯದ ಕಡೆ ಗಮನ ಹರಿಸದೆ ಪಾಚ್ಯಾತ್ಯ ಸಂಗೀತಕ್ಕೆ ಮಾರು ಹೋಗಿರುವುದು ವಿಷಾಧಕರ ಸಂಗತಿ ಎಂದು ಹೇಳಿದರು.

         ಜಿಲ್ಲಾಸ್ಪತ್ರೆ ಹಿರಿಯ ನೇತ್ರ ಚಿಕಿತ್ಸಾ ತಜ್ಞರಾದ ಡಾ.ಕೆ.ಆರ್.ಮಂಜುನಾಥ್ ಮಾತನಾಡಿ, ಮನುಷ್ಯನ ತಾಪವನ್ನು ತಣಿಸುವ ಹಾಗೂ ಮನಸ್ಸು ಅರಳಿಸುವ ಶಕ್ತಿ ಸಂಗೀತಕ್ಕಿದೆ. ಸಂಗೀತ ಒಂದು ದೈವಿಕ ಶಕ್ತಿ ಇದ್ದ ಹಾಗೆ, ಎಂತಹ ಕಠೋರ ಮನಸ್ಸನ್ನೂ ಸಂಗೀತ ಆಕರ್ಷಿಸುತ್ತದೆ ಎಂದು ತಿಳಿಸಿದರು.

        ಸ್ವರ ಸಿಂಚನ ಸುಗಮ ಸಂಗೀತ ಮತ್ತು ಜಾನಪದ ಕಲಾಸಂಸ್ಥೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ, ಕಳೆದ 15 ವರ್ಷಗಳಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಅದರಲ್ಲಿ ಬಹುಪಾಲು ಜಿಲ್ಲಾಸ್ಪತ್ರೆ ಸಭಾಂಗಣದಲ್ಲೇ ನಡೆದಿವೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈಧ್ಯರು ಉತ್ಕಷ್ಟ ಚಿಕಿತ್ಸೆ, ನುರಿತ ತಜ್ಞವೈದ್ಯರಿಂದ ನಡೆಯುತ್ತಿರುವ ರೋಗಿಗಳ ಸೇವಾ ಕಾರ್ಯಕ್ಕೆ ರಾಜ್ಯದಲ್ಲಿ ಜಿಲ್ಲಾಸ್ಪತ್ರೆಗೆ ಎರಡು ಪ್ರಶಸ್ತಿ ಪಡೆದುಕೊಂಡಿರುವುದು ಶ್ಲಾಘನೀಯ ಎಂದರು.

         ಜಿಲ್ಲಾ ಆಸ್ಪತ್ರೆ ಹಿರಿಯ ನೇತ್ರತಜ್ಞರಾದ ಡಾ.ದಿನೇಶ್‍ಕುಮಾರ್ ಮಾತನಾಡಿ, ಮನುಷ್ಯನ ಸಂಸ್ಕಾರಕ್ಕೆ ಹಾಗೂ ಉತ್ತಮ ವ್ಯಕ್ತಿತ್ವದ ಬೆಳವಣಿಗೆಗೆ ಸಂಗೀತ ಸಹಕಾರಿಯಾಗಿದೆ. ಸಂಗೀತವು ಮನಸ್ಸನ್ನು ವಿಕೃತಗೊಳಿಸಬಾರದು. ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸಂಗೀತ ನೃತ್ಯಗಳು ಮನಸ್ಸುಗಳನ್ನು ವಿಕೃತದ ಕಡೆಗೆ ಎಳೆದೊಯ್ಯುತ್ತಿವೆ. ನಮ್ಮ ಸಂಗೀತ ಪರಂಪರೆ ವ್ಯಕ್ತಿತ್ವದ ವಿಕಸನ ಹಾಗೂ ಮನಸ್ಸುಗಳನ್ನು ಅರಳಿಸಲು ಸಹಕಾರಿಯಾಗಿದೆ. ಯುವಕರ ವ್ಯಕ್ತಿತ್ವಕ್ಕೆ ಪೂರಕವಾಗಿ ಸಂಗೀತದ ಆಸಕ್ತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.

          ಪ್ರಸಿದ್ಧ ಸುಗಮ ಸಂಗೀತ ಗಾಯಕರಾದ ಬೆಂಗಳೂರಿನ ಲಕ್ಷ್ಮೀ ಪ್ರಸಾದ್ (ಗೊರವನಹಳ್ಳಿ) ಮಾತನಾಡಿ, ತುಮಕೂರಿನ ಸಿದ್ಧಗಂಗಾ ಮಠ ಮತ್ತು ಗೊರವನಹಳ್ಳಿಯ ಲಕ್ಷ್ಮೀ ದೇವಸ್ಥಾನ ಎರಡೂ ಸುಕ್ಷೇತ್ರಗಳಾಗಿವೆ ಎಂದ ಅವರು, ಪುರಾತನ ಕಾಲದ ಬೇಲೂರು, ಹಳೇಬೀಡು, ಹಂಪಿ ಶಿಲ್ಪ ಕಲೆಗಳ ಕೆತ್ತನೆ ಹಾಳಾಗಿರುವುದು ಒಂದು ದುರಂತ. ನಮ್ಮ ಕಲೆ, ಸಂಸ್ಕøತಿಯನ್ನು ಉಳಿಸುವಂತಹ ಕೆಲಸ ನಾವು ಮಾಡಬೇಕಿದೆ ಎಂದು ನುಡಿದರು.

          ಶಾಲಾ-ಕಾಲೇಜುಗಳಲ್ಲಿ ನಮ್ಮ ಪರಂಪರೆಯ ಸಂಗೀತ ಕಲೆಗಳ ಪರಿಚಯಿಸುವ ಪಾಠ ಶಾಲೆಗಳಾಗಬೇಕಾಗಿದೆ. ಶಾಲೆಗಳಿಂದಲೆ ನಮ್ಮ ಪರಂಪರೆಯ ಸಂಗೀತ ಪರಿಚಯಿಸುವ ಅಗತ್ಯವಿದೆ. ಇಂದಿನ ಯುವಕ ಯುವತಿಯರು ಅರ್ಥವಿಲ್ಲದ ಸಿನಿಮಾ ಹಾಡುಗಳಿಗೆ ಮಾರು ಹೋಗುತ್ತಿದ್ದಾರೆ. ಸಿನಿಮಾ ಹಾಡುಗಳ ಅಬ್ಬರದ ನಡುವೆ ದೇಶ ಭಕ್ತಿಗೀತೆಗಳು ಮರೆಯಾಗುತ್ತಿವೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಾತ್ರ ದೇಶ ಭಕ್ತಿಗೀತೆ ಕಂಠಪಾಠ ಮಾಡಿಸಿ ಹಾಡಿಸುವ ಪರಿಸ್ಥಿತಿ ಇದೆ’ ಎಂದು ವಿಷಾದಿಸಿದರು.

         ಗಾಯನ ಶಿಬಿರದಲ್ಲಿ ಭಾಗವಹಿಸಿದ್ದ ಸುಮಾರು 200ಕ್ಕೂ ಹೆಚ್ಚು ಶುಶ್ರೂಷಕ ವಿದ್ಯಾರ್ಥಿಗಳಿಗೆ ಲಕ್ಷ್ಮೀ ಪ್ರಸಾದ್ ಮತ್ತು ಮಲ್ಲಿಕಾರ್ಜುನ ಕೆಂಕೆರೆ ಹಾಗೂ ಅರುಣ್‍ಕುಮಾರ್ ತಂಡದವರು ನಾಡಗೀತೆ, ವಚನ ಗಾಯನ, ಭಕ್ತಿಗೀತೆ, ಭಾವಗೀತೆ, ದಾಸರಪದಗಳು, ತತ್ವಪದಗಳ ಗಾಯನ ತರಬೇತಿ ನಡೆಸಿಕೊಟ್ಟರು.

            ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆ ಶುಶ್ರೂಷ ಶಾಲೆ ಪ್ರಾಂಶುಪಾಲರಾದ ಜಯಲಕ್ಷ್ಮಿ, ಜಿಲ್ಲಾ ಆಸ್ಪತ್ರೆ ಅರೆವೈದ್ಯಕೀಯ ಶಿಕ್ಷಣ ಕೋರ್ಸ್ ಸಂಯೋಜಕ ಚಿಕ್ಕಹನುಮಂತಯ್ಯ, ಸ್ವರ ಸಿಂಚನ ಸುಗಮ ಸಂಗೀತ ಜಾನಪದ ಕಲಾಸಂಸ್ಥೆ ಉಪಾಧ್ಯಕ್ಷರಾದ ಕಲ್ಪನ ಗೋವಿಂದರಾಜು, ಜಿಲ್ಲಾಸ್ಪತ್ರೆಯ ರೇಣುಕಾ, ಗಂಗಮ್ಮ, ಭಾಗ್ಯಲತಾ ಮುಂತಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link