ತಿಪಟೂರು :
ಒಂದು ಕಡೆ ಸರ್ಕಾರ ಕೊರೊನಾ ವಿರುದ್ದ ಹೋರಾಡುತ್ತಾ ಸರ್ಕಾರಿ ಆಸ್ಪತ್ರೆಗಳನ್ನು ಉನ್ನತೀಕರಿಸುತ್ತಿದೆ. ಆದರೆ ಇದಕ್ಕೆ ಅಪವಾದವೆಂಬಂತೆ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಸಾಗುತ್ತಿದ್ದರು ತೂತು ಮಡಕೆಗೆ ನೀರನ್ನು ತುಂಬಿದಂತಾಗುತ್ತಿದೆಯೇ ಎಂಬ ಭ್ರಮೆಯನ್ನು ಮೂಡಿಸುತ್ತಿದೆ.
ಕೊರೊನಾ ಸೋಂಕಿರನ್ನು ರಕ್ಷಿಸುವ ಸಲುವಾಗಿ ಮತ್ತು ಆಸ್ಪತ್ರೆಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳೂ ನಡೆಯುತ್ತಿವೆ. ಆದರೆ ಇಲ್ಲಿ 53 ನಂಬರ್‍ನ ತುರ್ತುಚಿಕಿತ್ಸಾವಾರ್ಡ್‍ನಲ್ಲಿ ರೋಗಿಗಳ ಬೆಡ್‍ಮೇಲೆ ಮತ್ತು ಕೊಠಡಿಯ ಬಳಗೆ ನೀರು ಸೋರುತ್ತಿದ್ದುನ್ನು ಕಂಡು ಮೇಲೆ ಹೋಗಿ ನೋಡಿದರೆ ವಾರ್ಡ್ ನಂಬರ್ 2 ಹೆರಿಗೆ ನಂತರದ ಪಿ.ಎನ್.ಸಿ 35 ವಾರ್ಡ್‍ಇದೆ. ಇದರ ಓಳಹೊಕ್ಕು ನೋಡಿದರೆ ಅಲ್ಲಿನ ಶೌಚಾಲಯದ ನೀರು ಹೊರಗಡೆ ಬಂದು ಕೆಳಗಿನ ಕೊಠಡಿಗೆ ಇಳಿಯುತ್ತಿದೆ.
ಇಲ್ಲಿನ ಕೊಠಡಿಯ ಪ್ಯಾನ್‍ನ ಹೋಲ್ಡರ್‍ನಲ್ಲಿ ನೀರು ಜಿನುಗುತ್ತಿದ್ದು ಸ್ವಲ್ಪ ಹೆಚ್ಚುಕಡಿಮೆಯಾದರು ವಿದ್ಯುತ್ ಶಾರ್ಟ್‍ಸಕ್ರ್ಯೂಟ್ ಆದರೆ ಆಸ್ಪತ್ರೆಯಲ್ಲಿರುವ ರೋಗಿಗಳ ಕಥೆ ಏನು ಎಂಬ ಪ್ರಶ್ನೆ ಕಾಡುತ್ತಿದೆ. ಇನ್ನು ಇಲ್ಲಿ ಚಿಕಿತ್ಸೆ ಪಡೆಯುವ ವ್ಯಕ್ತಿಗಳು ಹೇಳುವಂತೆ ರಾತ್ರಿಯೆಲ್ಲಾ ನೀರು ಸೋರುತ್ತಿದ್ದು ಮಲಗಿಕೊಳ್ಳಲು ಆಗುವುದಿಲ್ಲ ಇನ್ನು ಖಾಯಿಲೆಗಳು ವಾಸಿಯಾಗುವುದು ಹೇಗೆಂದು ತಿಳಿಸಿದರು.
ಮೇಲಿನ ಕೊಠಡಿಯ ಶೌಚಾಲಯದ ನೀರು ಪ್ಯಾನ್ ಮೇಲೆ ಸೋರುತ್ತಿರುವ ನೀರು ಕೊಠಡಿಯ ತುಂಬೆಲ್ಲಾ ಸ್ಯಾನಿಟೈಸರ್ ಸಿಂಪಡಿಸುವಂತೆ ಎಲ್ಲಾ ಕಡೆಯು ಬೀಳುತ್ತಿದ್ದು ಒಂದು ರೋಗವನ್ನು ಹೊತ್ತು ಬರುವ ರೋಗಿಗಳಿಗೆ ಇನ್ನಷ್ಟು ರೋಗಗಳೊಂದಿಗೆ ಮನೆಗೆ ಹೋಗುವುದರಲ್ಲಿ ಆಶ್ಚರ್ಯವಿಲ್ಲ.
ರೋಗಗ್ರಸ್ತ ಶುದ್ಧಕುಡಿಯುವ ನೀರಿನ ಘಟಕ : ಇನ್ನು ಮೊದಲನೇ ಮಹಡಿಯಲ್ಲಿರುವ ನಿರೀಕ್ಷಣಾ ಕೊಠಡಿಯ ಹತ್ತಿರವಿರುವ ಶುದ್ಧನೀರಿನ ಘಟಕವನ್ನು ನೋಡಿದರೆ ಇಲ್ಲದ ರೋಗಗಳನ್ನು ನಿರೀಕ್ಷೆಮಾಡಿದಂತಾಗಿದೆ. ಇಲ್ಲಿನ ಶುದ್ಧನೀರಿನ ಘಟಕದ ಟ್ಯಾಂಕ್‍ನ್ನು ಶುದ್ಧಗೊಳಿಸಿ ಎಷ್ಟು ದಿನಗಳಾಗಿವೆಯೋ ಗೊತ್ತಿಲ್ಲ. ಇನ್ನು ಹೇಗೋ ನೀರು ಯಂತ್ರದಿಂದ ಶುದ್ಧವಾಗುತ್ತದೆ ನಾವೇಕೆ ಟ್ಯಾಂಕ್ ಶುದ್ಧಗೊಳಿಸಬೇಕು ಎಂದೋ? ಇಲ್ಲ ನೀರು ಸ್ವಚ್ಛವಾಗಿದ್ದರೆ ಶುದ್ಧೀಕರಿಸುವ ಯಂತ್ರಗಳಿಗೆ ಏನು ಕೆಲಸವಿಲ್ಲದಂತಾಗುತ್ತದೆ ಎಂಬ ಅಭಿಪ್ರಾಯದಿಂದ ಅಧಿಕಾರಿಗಳು ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಿದ್ದಾರೋ ಎಂದು ತಿಳಿಯದಾಗಿದೆ.
ಶುದ್ದಕುಡಿಯುವ ನೀರಿನ ಪಕ್ಕದಲ್ಲೇ ಇರುವ ನಲ್ಲಿಯ ಹತ್ತಿರದ ವಾಷ್‍ಬೇಸನ್‍ನ ಹತ್ತಿರ ನೀರುಕುಡಿಯಲು ಹೋದರೆ ನೀರು ಕುಡಿಯುವುದಿರಲಿ ಅಲ್ಲಿನ ಸ್ವಚ್ಛತೆಯನ್ನು ಕಂಡು ತಲೆತಿರುಗಿ ಬೀಳುವುದರಲ್ಲಿ ಸಂಶಯವೇ ಇಲ್ಲ.ಶುದ್ದಕುಡಿಯುವ ನೀರಿನ ಹತ್ತಿರವೇ ಇಂತಹ ಅವಾಂತರಗಳನ್ನು ನೋಡಿದರೆ ಇನ್ನು ಶೌಚಾಲಯದ ಸ್ಥಿತಿಯನ್ನು ನೀವೇ ಯೋಚಿಸಬೇಕು, ಇಲ್ಲ ಎಷ್ಟು ಮಾಡಿದರು ಸರ್ಕಾರಿ ಆಸ್ಪತ್ರೆಯ ಸ್ಥಿತಿಯೇ ಹೀಗೆಯೇ ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
