ಬೆಂಗಳೂರು
ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‍ನಿಂದ ಫುಲ್ ಅಪ್ಸೆಟ್ ಆಗಿರುವ ಹಿರಿಯ ಕಾಂಗ್ರೆಸ್ ನಾಯಕ,ಮಾಜಿ ಸಚಿವ ರೋಷನ್ ಬೇಗ್,ಪಕ್ಷ ಇಂತಹ ದು:ಸ್ಥಿತಿಗೆ ಜಾರಲು ಕಾರಣರಾದ ದುರಹಂಕಾರಿ ಸಿದ್ಧರಾಮಯ್ಯ,ಅದಕ್ಷ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಬಫೂನ್ ವೇಣುಗೋಪಾಲ್ ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ಕಡೆ ಲಿಂಗಾಯತರನ್ನು ಒಡೆಯಲು ಯತ್ನಿಸುತ್ತಾ,ಮತ್ತೊಂದು ಕಡೆ ಒಕ್ಕಲಿಗರನ್ನು ಬೈಯ್ಯುತ್ತಾ ತಿರುಗುವ ಕೆಲಸಕ್ಕೆ ಇವರೆಲ್ಲರೂ ಒಂದಲ್ಲ,ಒಂದು ರೀತಿ ಕಾರಣರಾದ್ದರಿಂದ ಮೈತ್ರಿಕೂಟ ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯವೇ ಇಲ್ಲ.ಹೀಗಿರುವಾಗ ಇಂತಹ ನಾಯಕರು ತಮ್ಮ ತಮ್ಮ ಸ್ಥಾನಗಳಲ್ಲಿ ಮುಂದುವರಿಯುವ ಅಗತ್ಯವೇ ಇಲ್ಲ ಎಂದಿದ್ದಾರೆ.
ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು,ಕರ್ನಾಟಕದಲ್ಲಿ ಪಕ್ಷ ಇಂತಹ ಸ್ಥಿತಿಗೆ ತಲುಪಲು ಸಿದ್ಧರಾಮಯ್ಯ ಮುಖ್ಯ ಕಾರಣ.ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದಾಗ ಜೆಡಿಎಸ್ ನಾಯಕರನ್ನು ಭೇಟಿ ಮಾಡಿ ಕುಮಾರಸ್ವಾಮಿ ಸಿಎಂ ಆಗಲಿ ಎಂದು ಒಪ್ಪಿಕೊಂಡು ಬಂದರು.
ಈಗ ನೋಡಿದರೆ ತಮ್ಮ ಬೆಂಬಲಿಗರ ಮೂಲಕ ಸಿದ್ಧರಾಮಯ್ಯ ಅವರೇ ಸಿಎಂ ಆಗಬೇಕು ಎಂದು ಹೇಳಿಸುತ್ತಿದ್ದಾರೆ.ಹೀಗೆ ಸಿದ್ಧರಾಮಯ್ಯ ಅವರ ಬೆಂಬಲಿಗರಾಡುತ್ತಿರುವ ಮಾತು ಮೈತ್ರಿಕೂಟದಲ್ಲಿ ಅಸಮಾಧಾನ ಸೃಷ್ಟಿಸಿದೆ.ಎಲ್ಲಕ್ಕಿಂತ ಮುಖ್ಯವಾಗಿ ಇದು ಹೇಗೆ ಸಾಧ್ಯ?ಎಂದು ಪ್ರಶ್ನಿಸಿದರು.
ಪಾರ್ಲಿಮೆಂಟ್ ಚುನಾವಣೆಗೆ ಸಂಬಂಧಿಸಿದಂತೆ ಟಿಕೆಟ್ ನೀಡುವ ಪ್ರಕ್ರಿಯೆ ಆರಂಭವಾದಾಗಲೇ ನಾನು ಹಲವು ಅಂಶಗಳನ್ನು ಹೇಳಿದ್ದೆ.ಆದರೆ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಒಬ್ಬೇ ಒಬ್ಬರಿಗೆ ಟಿಕೆಟ್ ಕೊಡಲಿಲ್ಲ.ಅದೇ ರೀತಿ ಈ ಹಿಂದೆ ಅಲ್ಪಸಂಖ್ಯಾತರಿಗೆ ಮೂರು ಟಿಕೆಟ್ ನೀಡುತ್ತಿದ್ದರು.ಇದನ್ನು ಹೇಳಿದರೆ ಅದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರನ್ನು ನಿರ್ಲಕ್ಷ್ಯ ಮಾಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಎಕ್ಸಿಟ್ ಪೋಲ್ ನೋಡಿದಾಗ ಬೇಸರವಾಯಿತು.ನಮ್ಮದು ಪ್ಲಾಪ್ ಷೋ ಅಂತ ಬೇಸರ ವ್ಯಕ್ತಪಡಿಸಿದೆ.ಎಕ್ಸಿಟ್ ಪೋಲ್‍ನಲ್ಲಿ ಏನು ವ್ಯತ್ಯಾಸಗಳಾಗುತ್ತವೋ ನೋಡೋಣ.ಆದರೆ ನಮ್ಮ ಪಕ್ಷದ ನಾಯಕರು ತಪ್ಪು ಮಾಡಿರುವುದು ನಿಜ ಎಂದರು.ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ದುರಹಂಕಾರದ ವರ್ತನೆಯಿಂದ ಇಂತಹ ಫಲಿತಾಂಶ ಬರುತ್ತಿದೆ.ಇವರು ಮೊದಲು ಕುಮಾರಸ್ವಾಮಿ ಮನೆ ಬಾಗಿಲಿಗೆ ಹೋಗಿ ಸಿಎಂ ಮಾಡಿದ್ರು.ಆನಂತರ ನಾನೇ ಸಿಎಂ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ.
ತಾವು ಮಾಡಿದ್ದನ್ನೆಲ್ಲ ಜನ ನೋಡುವುದಿಲ್ಲ ಎಂದು ಇವರಂದುಕೊಂಡಿದ್ದಾರೆ.ಸರ್ಕಾರ ರಚನೆಯ ಸಂದರ್ಭದಲ್ಲಿ ಪಕ್ಷ ಕಟ್ಟಿದ ನನ್ನನ್ನು,ರಾಮಲಿಂಗಾರೆಡ್ಡಿಯವರನ್ನು ಕೈ ಬಿಟ್ಟರು.ಅದೇ ರೀತಿ ಇನ್ನೂ ಹಲವು ನಾಯಕರನ್ನು ನಿರ್ಲಕ್ಷ್ಯ ಮಾಡಿದರು.ಈ ಮಧ್ಯೆ ಧರ್ಮ ಒಡೆಯುವ ಕೆಲಸ ಮಾಡಿದರು.ಒಕ್ಕಲಿಗ ನಾಯಕರನ್ನು ಬೈಯ್ಯತೊಡಗಿದರು.ಇದನ್ನೆಲ್ಲ ಗಮನದಲ್ಲಿಟ್ಟುಕೊಂಡ ಒಕ್ಕಲಿಗರು,ಲಿಂಗಾಯತರು ಈ ಬಾರಿ ಒಟ್ಟಾಗಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ವಿರುದ್ಧ ಮತ ಚಲಾಯಿಸಿದ್ದಾರೆ.
ಕಳೆದ ಚುನಾವಣೆಯ ಫಲಿತಾಂಶದಿಂದಲೇ ಇವರಿಗೆ ಬುದ್ದಿ ಬರಬೇಕಿತ್ತು.ಇವರು ಧರ್ಮ ಒಡೆಯುವ ಕೆಲಸ ಮಾಡಿದ್ದರಿಂದಲೇ ನಮಗೆ ಎಪ್ಪತ್ತೆಂಟು ಸೀಟುಗಳು ಬಂದವು.ಇದರ ಹೊಣೆಯನ್ನು ಸಿದ್ಧರಾಮಯ್ಯ ಅವರೇ ಹೊರಬೇಕು.ಹಾಗೆಯೇ ಯಾವಾಗ ನೋಡಿದರೂ ಒಕ್ಕಲಿಗರನ್ನು ಬೈಯ್ಯುತ್ತಾರೆ. ಕುಮಾರಸ್ವಾಮಿ, ದೇವೇಗೌಡರನ್ನು ಬಾಯಿಗೆ ಬಂದಂತೆ ಟೀಕಿಸುತ್ತಾರೆ.ಧರ್ಮ ಒಡೆಯಲು ಹೋಗಿ ಇಪ್ಪತ್ತೈದರಿಂದ ಮೂವತ್ತು ಸ್ಥಾನಗಳು ಕಡಿಮೆಯಾದಾಗಲೇ ಇವರಿಗೆ ಅರ್ಥವಾಗಬೇಕಿತ್ತು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊಣೆ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್ ಒಬ್ಬ ಬಫೂನ್.ಅವನಿಗೆ ಗ್ರೌಂಡ್ ರಿಯಾಲಿಟಿಯೇ ಗೊತ್ತಿಲ್ಲ. ವೇಣುಗೋಪಾಲ್ ಜಾಗದಲ್ಲಿ ನಾನೇನಾದರೂ ಇದ್ದಿದ್ದರೆ ಧರ್ಮ ಒಡೆಯುವ ಕೆಲಸ ಮಾಡಬೇಡಿ ಎಂದು ಸಿದ್ಧರಾಮಯ್ಯ ಅವರಿಗೆ ಹೇಳುತ್ತಿದ್ದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಎಪ್ಪತ್ತೆಂಟು ಸೀಟು ಗಳಿಸಿದಾಗಲೇ ಕೆ.ಸಿ.ವೇಣುಗೋಪಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು.ಆದರೆ ಅಂತಹ ಮನುಷ್ಯ ಇನ್ನೂ ಉಸ್ತುವಾರಿಯಾಗಿ ಮುಂದುವರಿದಿರುವುದು ದುರದೃಷ್ಟ ಎಂದರು.ಈಗಲೂ ಮಾನ,ಮರ್ಯಾದೆ ಇದ್ದರೆ ದುರಹಂಕಾರಿ ಸಿದ್ಧರಾಮಯ್ಯ,ಅದಕ್ಷ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತಿರುವ ಕೆ.ಸಿ.ವೇಣುಗೋಪಾಲ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಹೇಳಿದರು.
ಚಾಮುಂಡೇಶ್ವರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಡಿ ಎಂದು ನಾನು ಹಿಂದೆಯೇ ಸಿದ್ಧರಾಮಯ್ಯ ಅವರಿಗೆ ಹೇಳಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ.ಈಗಲೂ ಅವರದೇ ಮಾತು.ಪರಿಣಾಮ ಕಣ್ಣೆದುರಿಗಿದೆ ಎಂದು ಹೇಳಿದರು.ಈ ಮಧ್ಯೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ್ದಲ್ಲದೇ ಕಾಂಗ್ರೆಸ್‍ನ ಮುಸ್ಲಿಂ ನಾಯಕ ರೋಷನ್ ಬೇಗ್ ಅವರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ.ಪವಿತ್ರ ರಂಜಾನ್ ಮಾಸದಲ್ಲಿ,ಉಪವಾಸ ಮಾಡಿ ಸರ್ವಶಕ್ತ ಅಲ್ಲಾಹುವನ್ನು ಪ್ರಾರ್ಥಿಸುವ ಕಾಲದಲ್ಲಿ ಅವರು ಸತ್ಯ ಮಾತನಾಡಿದ್ದಾರೆ.ಅವರ ಹೇಳಿಕೆಯಲ್ಲಿ ಯಾವ ತಪ್ಪೂ ಇಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ ಬಳಿಕ ಸಿದ್ಧರಾಮಯ್ಯ ಅವರ ಬೆಂಬಲಿಗರು,ನಮಗೆ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿ ಎನ್ನತೊಡಗಿದರು.ಪ್ರಜಾಪ್ರಭುತ್ವದಲ್ಲಿ ಏನೇ ಮಾತನಾಡಬೇಕಾದರೂ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ.ಇಷ್ಟ ಬಂದಂತೆ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದರು.ಎಕ್ಸಿಟ್ ಪೋಲ್ ಬಗ್ಗೆ ಕೇಳಿದ ಪ್ರಶ್ನೆಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಅವರು,ಕ್ಷಣಿಕ ಸುಖಕ್ಕೂ,ಧೀರ್ಘ ಸುಖಕ್ಕೂ ವ್ಯತ್ಯಾಸವಿದೆ.ಹೀಗಾಗಿ ಲೋಕಸಭಾ ಚುನಾವಣೆಯ ಫಲಿತಾಂಶ ಬರುವವರೆಗೆ ಕಾದು ನೋಡೋಣ ಎಂದು ಹೇಳಿದರು.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಗೆದ್ದು ಅಧಿಕಾರ ಹಿಡಿದರೆ ರಾಜ್ಯ ಸರ್ಕಾರ ಪತನವಾಗುತ್ತದೆಯೇ?ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಫಲಿತಾಂಶ ಏನಾದರೆ ಮುಂದೇನಾಗುತ್ತದೆ?ಎಂಬ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ ಎಂದರು .ನಾವು ಕೂಡಾ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ.ಫಲಿತಾಂಶ ಬಂದ ನಂತರ ಏನು ಮಾಡಬೇಕು?ಅನ್ನುವ ಕುರಿತು ಪಕ್ಷದ ಹಿರಿಯ ನಾಯಕರು ಸಲಹೆ,ಸೂಚನೆ ನೀಡಲಿದ್ದಾರೆಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.








