ಬೆಂಗಳೂರು
ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮಾಲೀಕನ ಮೇಲೆ ಲಾಂಗ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ರೌಡಿ ಮದನ್ ಮತ್ತವನ ಸಹಚರನನ್ನು ಬೇಗೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಲ್ಲೆಗೊಳಗಾಗಿರುವ ತಿರುಮಲ ವಾಟರ್ ಫ್ಯಾಕ್ಟರಿ ಮಾಲೀಕ ಆನಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹಲ್ಲೆ ನಡೆಸಿದ ಬೊಮ್ಮನಹಳ್ಳಿಯ ರೌಡಿ ಮದನ್ ಮತ್ತವನ ಸಹಚರ ಕಿರಣ್‍ನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ
ಆನಂದ್ ಮೇಲೆ ಹಲ್ಲೆ ಮಾಡಿದ ಬಳಿಕ ಮದನ್ ಹಾಗೂ ಕಿರಣ್ ಪಾಂಡಿಚೇರಿಗೆ ಪರಾರಿಯಾಗಿ ಅಡಗಿದ್ದ ಜಾಗವನ್ನು ಪತ್ತೆ ಹಚ್ಚಿದ ಪೊಲೀಸರು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಬೇಗೂರಿನ ಗಾರ್ವೆಬಾವಿಪಾಳ್ಯದಲ್ಲಿ ಆನಂದ್ ಕಳೆದ 15 ವರ್ಷಗಳಿಂದ ತಿರುಮಲ ವಾಟರ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಅವರ ಬಳಿ ಸುಮಾರು 40 ಮಂದಿ ಕೆಲಸ ಮಾಡುತ್ತಿದ್ದಾರೆ. ಮದನ್ ತಾನು ರೌಡಿ ಎನ್ನುವುದನ್ನು ಮರೆಮಾಚಿ ಆನಂದ್ ಬಳಿ ಕೆಲಸ ಕೇಳಿಕೊಂಡು ಬಂದಿದ್ದ.ಆತನ ಪರಿಸ್ಥಿತಿ ನೋಡಿ ಕಾರು ಚಾಲಕನಾಗಿ ಕೆಲಸ ಮಾಡುವಂತೆ ತಿಳಿಸಿದ್ದ.
ಗಾಂಜಾ ವ್ಯಸನಿ
ಮದನ್ ಕೆಲಸಕ್ಕೆ ಸೇರಿದ ಕೆಲವು ದಿನಗಳ ಬಳಿಕ ಹೆಣ್ಣಮಕ್ಕಳನ್ನು ಚುಡಾಯಿಸುವುದು, ಫ್ಯಾಕ್ಟರಿಯಲ್ಲೇ ಗಾಂಜಾ ಸೇದುತ್ತಿದ್ದ. ಈ ವಿಚಾರವಾಗಿ ಮಾಲೀಕ ಆನಂದ್‍ಗೆ ತಿಳಿದಿದ್ದರಿಂದ ವೇತನ ನೀಡಿ ಮದನ್‍ನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಕೋಪಗೊಂಡ ಮದನ್ ಸಹಚರರೊಂದಿಗೆ ಲಾಂಗ್ ಹಿಡಿದು ಫ್ಯಾಕ್ಟರಿಗೆ ನುಗ್ಗಿ ಆನಂದ್ ಮೇಲೆ ಜನವರಿ 30ರಂದು ಹಲ್ಲೆ ಮಾಡಿದ್ದ.
ಅಷ್ಟೇ ಅಲ್ಲದೆ ವಾಟರ್ ಫ್ಯಾಕ್ಟರಿಯಲ್ಲಿದ್ದ ವಸ್ತುಗಳನ್ನು ಒಡೆದು, ಆನಂದ್‍ಗೆ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದ. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮದನ್ ಹಾಗೂ ಆತನ ಸಹಚರರ ಕೃತ್ಯ ಸೆರೆಯಾಗಿತ್ತು.ಈ ಕುರಿತು ಆನಂದ್ ಬೇಗೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
