ಚಳ್ಳಕೆರೆ
ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದರೊಂದಿಗೆ ಸಾರ್ವಜನಿಕರಿಗೂ ಸಹ ನೆಮ್ಮದಿ ಬದುಕನ್ನು ಕಲ್ಪಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ. ಸಮಾಜದ ಘಾತುಕ ಶಕ್ತಿಗಳು ಸಮಾಜದ ನೈರ್ಮಲ್ಯವನ್ನು ಹಾಳು ಮಾಡಲು ಯತ್ನಿಸಿದಲ್ಲಿ ಇಲಾಖೆ ಸಹಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸ್ ಇಲಾಖೆಯ ದಾಖಲಾತಿಯರಲ್ಲಿರುವ ಎಲ್ಲಾ ರೌಡಿಶೀಟರ್ ತಮ್ಮ ಚಟುವಟಿಕೆಗಳನ್ನು ಕೂಡಲೇ ಬದಲಾಯಿಸಿಕೊಳ್ಳದೇ ಇದ್ದಲ್ಲಿ ಮತ್ತೆ ಎಲ್ಲರನ್ನೂ ಕಾರಗೃಹಕ್ಕೆ ಕಳುಹಿಸುವ ಗಂಭೀರ ಎಚ್ಚರಿಕೆಯನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕ ನೀಡಿದರು.
ಅವರು, ಇಲ್ಲಿನ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಚಳ್ಳಕೆರೆ ಉಪವಿಭಾಗ ವ್ಯಾಪ್ತಿಯ ರಾಂಪುರ, ಮೊಳಕಾಲ್ಮೂರು, ನಾಯಕನಹಟ್ಟಿ, ತಳಕು, ಪರಶುರಾಮಪುರ ಮತ್ತು ಚಳ್ಳಕೆರೆ ಠಾಣಾ ವ್ಯಾಪ್ತಿಯ ರೌಡಿಗಳನ್ನು ಕರೆಸಿ ಎಚ್ಚರಿಕೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಚಳ್ಳಕೆರೆ ನಗರದಲ್ಲಿ ಹಾಡುಹಗಲೇ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಈ ಪ್ರಕರಣ ಭೇದಿಸಲು ಪೊಲೀಸ್ ಇಲಾಖೆ ಜಾಗೃತವಾಗಿದ್ದು, ಇದರಲ್ಲಿ ಯಾರಾದರೂ ರೌಡಿಶೀಟರ್‍ಗಳ ಕೈವಾಡವಿದ್ದಲ್ಲಿ ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಾಜದಲ್ಲಿ ಗೌರವ ಮತ್ತು ಘನತೆಯನ್ನು ಪ್ರತಿಯೊಬ್ಬ ವ್ಯಕ್ತಿ ಹೊಂದಿರಬೇಕಾಗುತ್ತದೆ. ನಮ್ಮ ದೇಶದ ಕಾನೂನು ಎಲ್ಲರಿಗೂ ಉತ್ತಮ ಬದುಕು ರೂಪಿಸಲು ಶಕ್ತವಾಗಿದೆ. ಆದರೆ, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ವ್ಯಕ್ತಿ ಮತ್ತು ಶಕ್ತಿಯನ್ನು ಮಾತ್ರ ಸಹಿಸಲ್ಲ. ಯಾವುದೇ ಹಂತದಲ್ಲಾದರೂ ಪೊಲೀಸ್ ಇಲಾಖೆ ನಿಮ್ಮ ಬೆನ್ನಹಿಂದೆ ಬಿದ್ದು, ನಿಮ್ಮನ್ನು ಹಿಡಿದು ಕಾನೂನು ಕ್ರಮ ಕೈಗೊಳ್ಳುತ್ತದೆ. ಮತ್ತೊಮ್ಮೆ ಜೈಲಿನ ದರ್ಶನವನ್ನು ಮಾಡದೆ ಉತ್ತಮವಾದ ಬದುಕನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಉಪವಿಭಾಗದ ಡಿವೈಎಸ್ಪಿ ಎಸ್.ರೋಷನ್ ಜಮೀರ್ ಮಾತನಾಡಿ, ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳ ಆದೇಶದಂತೆ ನಿಮ್ಮೆಲ್ಲರನ್ನು ಕರೆಸಿ ಎಲ್ಲರೂ ಉತ್ತಮ ಹಾದಿಯತ್ತ ಮುನ್ನಡೆಯಲಿ ಎಂಬ ಸದುದ್ದೇಶದಿಂದ ನಿಮ್ಮನ್ನು ಕರೆಸಿ ಬುದ್ದಿವಾದ ಹೇಳಲಾಗಿದೆ. ನೀವು ನಿಮ್ಮ ಹಳೇ ಚಾಳಿಯನ್ನು ಮತ್ತೆ ಮುಂದುವರೆಸಬಾರದು. ಹಾಗೇನಾದರೂ ತಪ್ಪು ಹೆಜ್ಜೆ ಇಟ್ಟಲ್ಲಿ ಜೀವನಪರಿಯಂತ ನೀವು ತೊಂದರೆ ಅನುಭವಿಸುತ್ತೀರಿ ಎಂದರು. ವೃತ್ತ ನಿರೀಕ್ಷಕ ಈ.ಆನಂದ, ಮೊಳಕಾಲ್ಮೂರು ವೃತ್ತ ನಿರೀಕ್ಷಕ ಗೋಪಾಲನಾಯ್ಕ, ಪಿಎಸ್‍ಐಗಳಾದ ಎನ್.ಗುಡ್ಡಪ್ಪ, ಬಸವರಾಜು, ಕೆ.ಸತೀಶ್‍ನಾಯ್ಕ, ಶಿವಕುಮಾರ್, ರಘುನಾಥ, ನೂರ್ ಆಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
