ಬೆಂಗಳೂರು
ಗ್ಯಾಂಗ್ ಕಟ್ಟಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಲ್ಲೆ ನಡೆಸಿ ಬೆದರಿಸಿ 50 ಲಕ್ಷ ರೂ.ಗಳ ದರೋಡೆ ಮಾಡಿ ಪರಾರಿಯಾಗಿದ್ದು ಕುಖ್ಯಾತ ರೌಡಿ ರಾಜೇಶ್ ಅಲಿಯಾಸ್ ಪ್ರತಾಪ್‍ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್‍ಆರ್ ಪುರ ರೌಡಿ ರಾಜೇಶ್ (35) ಪೊಲೀಸರ ಗುಂಡೇಟಿನಿಂದ ಬಲಗಾಲಿಗೆ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಬಂಧಿಸಲು ಬೆನ್ನಟ್ಟಿ ಹೋದಾಗ ಡ್ಯಾಗರ್‍ನಿಂದ ರಾಕೇಶ್ ಇರಿದಿದ್ದರಿಂದ ಗಾಯಗೊಂಡಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಸಿಬ್ಬಂದಿ ಮಹೇಶ್ ಕುಮಾರ್ ಸ್ಥಳೀಯ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾರೆ
ತೀರ್ಥಹಳ್ಳಿ, ಹುಬ್ಬಳ್ಳಿ, ಎನ್.ಆರ್. ಪುರ, ಇನ್ನಿತರ ಕಡೆಗಳಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ರಾಜೇಶ್ ಮೇಲೆ ಡಕಾಯಿತಿ, ಕೊಲೆಯತ್ನ, ಕಳವು, ಅತ್ಯಾಚಾರ ಸೇರಿದಂತೆ, 8 ಪ್ರಕರಣಗಳು ದಾಖಲಾಗಿವೆ.
ಅಪರಾಧ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎನ್.ಆರ್. ಪುರದ ರಾಜೇಶ್, ನ್ಯಾಯಾಲಯಕ್ಕೆ ಹಾಜರಾಗದೆ ಮೋಜಿನ ಜೀವನ ನಡೆಸಲು ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಡಿಸಿಪಿ ರವಿಚೆನ್ನಣ್ಣನವರ್ ತಿಳಿಸಿದ್ದಾರೆ..
ಸಂಚು ರೂಪಿಸಿ ಕೃತ್ಯ
ರೌಡಿ ರಾಜೇಶ್ ಗ್ಯಾಂಗ್ ಕಟ್ಟಿಕೊಂಡು ಕಳೆದ ಜು. 17 ರಂದು ಅನ್ನಪೂರ್ಣೇಶ್ವರಿ ನಗರದ ಶ್ರೀಗಂಧ ಕಾವಲ್‍ನ ಸಂಬಂಧಿಕರ ಮನೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಾಮಗೌಡ ಅವರು ರಾತ್ರಿ 8.50ರ ವೇಳೆ ಮಾತನಾಡುತ್ತಿದ್ದಾಗ ಕಾರಿನಲ್ಲಿ ಬಂದ ಐದಾರು ಮಂದಿ ದುಷ್ಕರ್ಮಿಗಳು ಏಕಾಏಕಿ ನುಗ್ಗಿ ಚಾಕು ತೋರಿಸಿ ಹಲ್ಲೆ ನಡೆಸಿ ಬೆದರಿಸಿ ಬೀರುವಿನಲ್ಲಿ 50 ಲಕ್ಷ ರೂ.ಗಳನ್ನು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ರಾಮಗೌಡ ಅವರು ನಗರದ ಹೊರ ವಲಯದ ರಾಮೋಹಳ್ಳಿ ಬಳಿ ದೇವೇಂದ್ರಪ್ಪ ಅವರ 2 ಎಕರೆ 5 ಕುಂಟೆಯಲ್ಲಿದ್ದ ರೆಸಾರ್ಟ್‍ನ್ನು ಖರೀದಿಸಲು ಮುಂದಾಗಿದ್ದರು.
ರೆಸಾರ್ಟ್ ಖರೀದಿಗೆ ಮೊದಲ ಹಂತವಾಗಿ ನೀಡಬೇಕಾಗಿದ್ದ ಹಣವನ್ನು ತಮ್ಮ ಭಾವ ಗಂಗಯ್ಯ ಅವರ ಕಾಮಾಕ್ಷಿಪಾಳ್ಯದ ಬ್ಯಾಂಕ್ ಆಫ್ ಬರೋಡಾ ಶಾಖೆಯಿಂದ 50 ಲಕ್ಷ ರೂ.ಗಳನ್ನು ಕೃತ್ಯ ನಡೆದ ಹಿಂದಿನ ದಿನ ಜು. 16 ರಂದು ಡ್ರಾ ಮಾಡಿಕೊಂಡು ಬಂದು ಗಂಗಯ್ಯನವರ ಮಗಳು ಭಾಗ್ಯಮ್ಮ ಮನೆಯಲ್ಲಿ ಇಟ್ಟಿರುವುದು ಪತ್ತೆಯಾಯಿತು.
ಈ ವಿಷಯ ತಿಳಿದಿದ್ದ ದುಷ್ಕರ್ಮಿಗಳು ದರೋಡೆಗೆ ಸಂಚು ರೂಪಿಸಿ ಹಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಮೋಹನ್ (27), ಶ್ರೀಶಾ ಕಾರಂತ್ (44), ಲಕ್ಷ್ಮಿ (35), ವಿನೋದ ಅಲಿಯಾಸ್ ವಿನಿ (21), ಗಂಗಾಧರ (21), ಯೋಗೇಶ (22), ಸಂದೀಪ (38), ದಿಲೀಪ್ (27), ಬಾಲಕೃಷ್ಣ (54), ಸವಿ (27), ಮಂಜುನಾಥ ಶೆಟ್ಟಿ (35), ಅಬ್ದುಲ್ ರೆಹ್ಮಾನ್ ಅಲಿಸಾಯ್ ಸಿದ್ಧಿಕಿ (21), ಶಿವಕುಮಾರ್ ಅಲಿಯಾಸ್ ಶಿವು (30)ನನ್ನು ಬಂಧಿಸಿ 12 ಲಕ್ಷ 30 ಸಾವಿರ ನಗದು, ಇನೋವಾ, ಮಹೀಂದ್ರ ಸೇರ 3 ಕಾರುಗಳನ್ನು ವಶಪಡಿಸಿಕೊಂಡು ಪ್ರಮುಖ ಆರೋಪಿ ರೌಡಿ ರಾಜೇಶನ ಪತ್ತೆಗೆ ಇನ್ಸ್‍ಪೆಕ್ಟರ್‍ಗಳಾದ ಗಿರಿರಾಜ್, ಲಿಂಗರಾಜ್ ಅವರ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು.
ನಸುಕಿನಲ್ಲಿ ಕಾರ್ಯಾಚರಣೆ
ತಂಡಗಳು ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿರುವಾಗ ವಿಶ್ವೇಶ್ವರ ಲೇಔಟ್‍ನ 8ನೇ ಬ್ಲಾಕ್‍ನಲ್ಲಿ ಭಾನುವಾರ ಮುಂಜಾನೆ ರಾಜೇಶ್ ಅಡಗಿರುವ ಮಾಹಿತಿ ಪತ್ತೆಯಾಯಿತು. ಕೂಡಲೇ ಅನ್ನಪೂರ್ಣೇಶ್ವರಿ ನಗರದ ಸಬ್‍ಇನ್ಸ್‍ಪೆಕ್ಟರ್ ರಾಜಶೇಖರಯ್ಯ, ಸಿಬ್ಬಂದಿಗಳಾದ ಮಹೇಶ್ ಕುಮಾರ್, ದೊರೈಸ್ವಾಮಿ ಅವರು ಬಂಧನಕ್ಕೆ ಮುಂದಾದರು.
ರಾಜೇಶ್‍ನನ್ನು ಬೆನ್ನಟ್ಟಿ ಹೋದ ಮಹೇಶ್ ಕುಮಾರ್‍ಗೆ ಆರೋಪಿಯು ಡ್ರಾಗರ್‍ನಿಂದ ಎಡಗೈಗೆ ಇರಿದು ತಪ್ಪಿಸಿಕೊಳ್ಳಲು ಮುಂದಾದಾಗ ರಾಜಶೇಖರಯ್ಯ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದರೂ ಮತ್ತೆ ಡ್ರಾಗರ್ ಹಿಡಿದು ಪೊಲೀಸರತ್ತ ಬಂದ ರಾಕೇಶ್‍ನತ್ತ ಮತ್ತೊಂದು ಗುಂಡು ಹಾರಿಸಿದ್ದಾರೆ. ಆ ಗುಂಡು ಬಲಗಾಲಿಗೆ ತಗುಲಿ ರಾಜೇಶ್ ಕುಸಿದು ಬಿದ್ದಿದ್ದು, ಆತನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ರವಿಚೆನ್ನಣ್ಣನವರ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








