ಚಿತ್ರದುರ್ಗ
ಖಾಸಗಿ ಕಾನೂನು ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ವೇಳೆ ನಿಯಮಾವಳಿಗಳ ಉಲ್ಲಂಘನೆ ಹಾಗೂ ಬಾರೀ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಮುಖಂಡ ಜಿತೇಂದ್ರ ಎನ್.ಹುಲಿಕುಂಟೆ ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ
ಚಿತ್ರದುರ್ಗಕ್ಕೆ ಆಗಮಿಸಿದ್ದ ಸಚಿವರಿಗೆ ಕೆಲವು ದಾಖಲೆಗಳ ಸಮೇತ ಮನವಿ ಪತ್ರಸಲ್ಲಿಸಿದ ಜಿತೇಂದ್ರ ಅವರು, ಖಾಸಗಿ ಕಾನೂನು ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಸಂದರ್ಭದಲ್ಲಿ ಪ್ರೋ.ಮಾಲಿ ಮುದ್ದಣ್ಣ ವರದಿಯನ್ನು ಗಣನೆಗೆ ತೆಗೆದುಕೊಳ್ಳದೆ ಕಾನೂನು ಉಲ್ಲಂಘನೆ ಮಾಡಲಾಗಿದೆ. ಇಲ್ಲಿ ಅವ್ಯವಹಾರ ನಡೆದಿದ್ದು, ಕೂಡಲೇ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಲು ಅದೇಶ ನೀಡುವಂತೆ ಮನವಿ ಮಾಡಿದರು
ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಈ ಹಗರಣ ನಡೆದಿದೆ. ಮಾಹಿತಿ ಹಕ್ಕಿನಲ್ಲಿ ಪಡೆದ ಮಾಹಿತಿಗಳನ್ನು ಕ್ರೂಡೀಕರಿಸಿ ರಾಜ್ಯಪಾಲರಿಗೆ ತನಿಖೆ ನಡೆಸಲು ಸರ್ಕಾರಕ್ಕೆ ಆದೇಶ ನೀಡಲು ಮನವಿ ಸಲ್ಲಿಸಿದ್ದೆ. ಜೊತೆಗೆ ಇದಕ್ಕೆ ಸಂಬಂಧಿಸಿದ ಇಲಾಖೆಗಳಿಗೂ ಸಹ ದಾಖಲೆ ಸಹಿತ ಇರುವ ದೂರಿನ ಪ್ರತಿಯನ್ನು ಸಲ್ಲಿಸಿದ್ದೆ. ಆದರೆ ಇವರೆಗೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತವಾದ ಕ್ರಮ ಜರುಗಿಸಲ್ಲಿವೆಂದು ಅವರು ಮನವಿ ಪತ್ರದಲ್ಲಿ ವಿವರಿಸಿದ್ದಾರೆ
ಇದೇ ವಿಚಾರವಾಗಿ ಪ್ರಧಾನ ಮಂತ್ರಿಗಳ ಗಮನಕ್ಕೂ ತರಲಾಗಿದ್ದು, ಪ್ರಧಾನ ಮಂತ್ರಿಯವರ ಕಛೇರಿಯಿಂದ ರಾಜ್ಯ ಸರ್ಕಾರಕ್ಕೆ ಈ ದೂರಿನ ಬಗ್ಗೆ ವರದಿ ನೀಡುವಂತೆ ಪತ್ರವನ್ನು ಕಳುಹಿಸಲಾಗಿತ್ತು. ಆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದ್ದಾರೆ
ಈ ಹಗರಣದ ಸ್ವರೂಪ ದೊಡ್ಡದಿದೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಮತ್ತು ಕಾನೂನು ಶಿಕ್ಷಣಕ್ಕೆ ಸಂಬಂಧಿಸಿದ ವಿಶ್ವವಿದ್ಯಾನಿಲಯಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಲೋಪವಾಗಿದೆ.
ಪ್ರೋ. ಮಾಲಿ ಮುದ್ದಣ್ಣರವರ ವರದಿಯನ್ನು ಆಧಾರವಾಗಿಟ್ಟುಕೊಂಡು ವೇತನಾನುದಾನಕ್ಕೆ ಒಳಪಡಿಸುವ ಪ್ರಕ್ರಿಯೆಯನ್ನು ಮಾಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿದೆ ಆದರೆ ಈ ಪ್ರಕ್ರಿಯೆಯಲ್ಲಿ ಪ್ರೋ.ಮಾಲಿ ಮುದ್ದಣ್ಣರವರ ವರದಿಯ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮ ಅನುಕೂಲಕ್ಕೆ ತಕ್ಕಂತೆ ಆದೇಶವನ್ನು ಮಾಡಿಕೊಂಡಿದ್ದಾರೆಂದು ಜಿತೇಂದ್ರ ಎನ್.ಹುಲಿಕುಂಟೆ ಆರೋಪಿಸಿದ್ದಾರೆಈ ಹಗರಣದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕು. ತಪ್ಪು ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅವರು ಸಚಿವರಲ್ಲಿ ಮನವಿ ಮಾಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
