ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ದಾವಣಗೆರೆ:

      ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ನೇಕಾರರ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಜಿಲ್ಲಾ ನೇಕಾರ ಸಮುದಾಯ ಒಕ್ಕೂಟದ ಅಧ್ಯಕ್ಷ ಡಿ.ಬಸವರಾಜ್ ಗುಬ್ಬಿ ಒತ್ತಾಯಿಸಿದರು.

        ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕೆಂಬುದಾಗಿ ಒತ್ತಾಯಿಸಿ ಮನವಿ ಸಲ್ಲಿಸಲಾಗಿತ್ತು. ಆದರೆ, ಆ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಈಗಲಾದರೂ ನೂತನವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪಿಸುವತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

    ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ಪವರ್‍ಲೂಮ್ ಡೆವಲಪ್‍ಮೆಂಟ್ ಕಾರ್ಪೊರೇಷನ್ ಅಧ್ಯಕ್ಷ ಸ್ಥಾನಕ್ಕೆ ನೇಕಾರ ಸಮುದಾಯದ ಯುವಕರನ್ನು ನೇಮಿಸುವ ಮೂಲಕ ಸರ್ಕಾರ ನಮ್ಮ ಯುವಕರಲ್ಲಿರುವ ನೇಕಾರಿಕೆಯ ನೈಪುಣ್ಯತೆಯನ್ನು ನೇಕಾರಿಕೆ ಕ್ಷೇತ್ರದಲ್ಲಿ ಅಳವಡಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.

    ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ನೇಕಾರರ 100 ಕೋಟಿ ರೂ. ಸಾಲ ಮನ್ನಾ ಮಾಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹವಾಗಿದೆ ಎಂದ ಅವರು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಅಂದಾಜು 241 ಕೋಟಿ ರೂ.ಗಳ ಯಾವುದೇ ರೂಪದ ಸಾಲವಿದ್ದರೂ ಮನ್ನಾ ಮಾಡುವುದರಿಂದ ಸಮಾಜಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಸಚಿವ ಸ್ಥಾನಕ್ಕೆ ಒತ್ತಾಯ:

      ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯರು, ಮಾಜಿ ಸಚಿವರು, ಹಾಲಿ ಶಾಸಕರಾದ ಎಸ್.ಎ.ರವೀಂದ್ರನಾಥ್ ಅವರಿಗೆ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಬಿಜೆಪಿ ನೇಕಾರ ಪ್ರಕೋಷ್ಠದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ಪವರ್‍ಲೂಮ್ ಡೆವಲಪ್‍ಮೆಂಟ್ ಕಾರ್ಪೊರೇಷನ್‍ನಲ್ಲಿ ಸ್ಥಾನಮಾನ ಕಲ್ಪಿಸಬೇಕೆಂದು ಆಗ್ರಹಿಸಿದರು .ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ಉತ್ತರ ಬಿಜೆಪಿ ಅಧ್ಯಕ್ಷ ಮುಕುಂದಪ್ಪ, ಮುಖಂಡರಾದ ಶ್ರೀನಿವಾಸ, ಎನ್.ಹನುಮಂತಪ್ಪ, ಟಿ.ಅಜ್ಜೇಶ, ಡಿಶ್ ನಾಗರಾಜ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link