ಚಿತ್ರದುರ್ಗ:
ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಚಿತ್ರದುರ್ಗ ವೆಲ್‍ಫೇರ್ ಅಸೋಸಿಯೇಷನ್‍ನಿಂದ ನೂರಾರು ಮುಸ್ಲಿಂರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹೊಳಲ್ಕೆರೆ ರಸ್ತೆಯಲ್ಲಿರುವ ಮುಸ್ಲಿಂ ಹಾಸ್ಟೆಲ್‍ನಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಮೆರವಣಿಗೆಯುದ್ದಕ್ಕೂ ಆರ್.ಎಸ್.ಎಸ್.ಗೆ ಧಿಕ್ಕಾರಗಳನ್ನು ಕೂಗಿ ದಯಾನತ್‍ಖಾನ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದರು.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ದಯಾನತ್‍ಖಾನ್ ಮತ್ತು ಜಾರ್ಖಂಡ್‍ನಲ್ಲಿ ತಬ್ರೇಜ್ ಅನ್ಸಾರಿಯನ್ನು ಹತ್ಯೆಗೈದಿರುವುದನ್ನು ನೋಡಿದರೆ ಕೇಂದ್ರ ಬಿಜೆಪಿ.ಸರ್ಕಾರ ಮುಸ್ಲಿಂರನ್ನು ಗುರಿಯಾಗಿಸಿಕೊಂಡಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಜೂ.9 ರಂದು ಹೊನ್ನಾಳಿ ತಾಲೂಕಿನ ಶಫಿಖಾನ್‍ರವರ ಪುತ್ರ ದಯಾನತ್‍ಖಾನ್‍ನನ್ನು ಆತನ ಸ್ನೇಹಿತರಾದ ಹೇಮಂತ, ಲೋಹಿತ, ಸಂಜು, ಲಕ್ಷ್ಮಣ, ಚೇತನ, ಯೋಗಿ, ಶಶಿ, ಪವನ ಇನ್ನು ಮುಂತಾದವರು ಸೇರಿಕೊಂಡು ವಾಟ್ಸ್‍ಪ್‍ನಲ್ಲಿ ಮಿಲಾದಿನ ಹಸಿರು ಧ್ವಜವನ್ನು ಹಾಕಿಕೊಂಡಿರುವ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿರುವುದನ್ನು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ್ದು, ಎನ್ನುವ ಕಥೆ ಕಟ್ಟಲಾಗುತ್ತಿದೆ.
ನೆಪ ಮಾತ್ರಕ್ಕೆ ಇಬ್ಬರು ಆರೋಪಿಗಳನ್ನು ಮಾತ್ರ ಬಂಧಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಇಲಾಖೆ ಯತ್ನಿಸುತ್ತಿದೆ. ಹತ್ಯೆಗೀಡಾಗಿರುವ ದಯಾನತ್‍ಖಾನ್ ತಾಯಿ ಹೇಳಿರುವ ಹೆಸರಿನ ಎಲ್ಲಾ ಆರೋಪಿಗಳನ್ನು ಬಂಧಿಸಿ ಕೃತ್ಯದ ಹಿಂದಿರುವ ಸಂಚನ್ನು ಬಯಲಿಗೆಳೆಯಬೇಕು. ಇಲ್ಲವಾದಲ್ಲಿ ಹೊನ್ನಾಳಿ ಚಲೋ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ದೇಶಾದ್ಯಂತ ಮುಸ್ಲಿಂರು ಮತ್ತು ದಲಿತರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಹಲ್ಲೆ, ಹತ್ಯೆಗಳು ನಡೆಯುತ್ತಿರುವುದರಿಂದ ಭಾರದಲ್ಲಿ ದಲಿತರು ಮತ್ತು ಮುಸ್ಲಿಂರಿಗೆ ರಕ್ಷಣೆ ಇಲ್ಲದಂತಾಗಿದೆ. ಜಾರ್ಖಂಡ್‍ನಲ್ಲಿ ತಬ್ರೇಜ್ ಅನ್ಸಾರಿ ಕೊಲೆ, ದಲಿತ ಕೋಮಿಗೆ ಸೇರಿದ ಚಾಮರಾಜ ನಗರ ಗುಂಡ್ಲುಪೇಟೆಯ ಎಸ್.ಪ್ರತಾಪ್ ಅರೆಬೆತ್ತಲೆ ಮೆರವಣಿಗೆ ನಾಗರೀಕ ಸಮಾಜ ಬೆಚ್ಚಿ ಬೀಳುವಂತೆ ಮಾಡಿದೆ.
ಭಜರಂಗದಳ ಕರ್ನಾಟಕ ಶೌರ್ಯ ಪ್ರಶಿಕ್ಷಣ ವರ್ಗ ಕಳೆದ ಮೇ ತಿಂಗಳಿನಲ್ಲಿ ರಾಕ್‍ಫೋರ್ಟ್ ಇಂಟರ್‍ನ್ಯಾಷನಲ್ ರೆಸಿಡೆನ್ಷಿಯಲ್ಲಿ ಸ್ಕೂಲ್‍ನಲ್ಲಿ ತ್ರಿಶೂಲ ಧಾರಣೆ ಹಮ್ಮಿಕೊಂಡಿದ್ದರ ಪ್ರೇರಣೆಯೇ ಹೊನ್ನಾಳಿಯಲ್ಲಿ ದಯಾನತ್‍ಖಾನ್ ಹತ್ಯೆಗೆ ಕಾರಣವಾಗಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಸ್ಲಿಂರು ಆಪಾದಿಸಿದರು.
ಬರ್ಬರವಾಗಿ ಹತ್ಯೆಗೀಡಾಗಿರುವ ದಯಾನತ್‍ಖಾನ್ ದೇಹದಲ್ಲಿ 30 ಕ್ಕೂ ಹೆಚ್ಚು ಇರಿತದ ಗಾಯಗಳಾಗಿದ್ದು, ಇದನ್ನು ನೋಡಿದರೆ ಒಬ್ಬಿಬ್ಬರಿಂದ ಹತ್ಯೆ ನಡೆದಿಲ್ಲ ಎನ್ನುವುದು ಖಾತ್ರಿಯಾಗಿದೆ, ಕೊಲೆಗೆ ಬಳಸಿರುವ ಮಾರಕ ಆಯುಧಗಳನ್ನು ತಕ್ಷಣವೇ ಪತ್ತೆ ಹಚ್ಚಿ ಹಿಂದಿರುವ ನಿಗೂಢ ಸಂಚನ್ನು ಬಯಲಿಗೆಳೆದು ರಾಜ್ಯದಲ್ಲಿ ಇನ್ನು ಮುಂದಾದರೂ ಇಂತಹ ಕೃತ್ಯಗಳು ಮರುಕಳಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಅಹಿಂದ ನಾಯಕ ಮುರುಘರಾಜೇಂದ್ರ ಒಡೆಯರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಕೊಲೆ ನಡೆದು ಹತ್ತೊಂಬತ್ತು ದಿನಗಳಾಗಿದ್ದರೂ ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಅಸಹಾಯಕರಾಗಿದ್ದಾರೆ. ಹತ್ಯೆಗೀಡಾಗಿರುವ ದಯಾನತ್‍ಖಾನ್ ಕುಟುಂಬಕ್ಕೆ ಶೀಘ್ರವೇ ಇಪ್ಪತ್ತೈದು ಲಕ್ಷ ರೂ.ಗಳ ಪರಿಹಾರ ನೀಡಬೇಕು.
ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೊಲೆ ಆರೋಪಿಗಳನ್ನು ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ದುಃಖತಪ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಹೊನ್ನಾಳಿ ಚಲೋ ಸತ್ಯಾಗ್ರಹ ನಡೆಸಬೇಕಾದೀತೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಚಿತ್ರದುರ್ಗ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷ ಶೇಖ್‍ನಾಯಜ್, ಕಾರ್ಯದರ್ಶಿ ಮೊಹಮದ್ ಅಶ್ರಫ್, ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ಶ್ರೀನಿವಾಸ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ಎ.ಜಾಕೀರ್‍ಹುಸೇನ್ ಸೇರಿದಂತೆ ನೂರಾರು ಮುಸ್ಲಿಂ ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
