ದಾವಣಗೆರೆ
ರಾಜ್ಯ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‍ಟಿಇ) ಕಾಯ್ದೆಗೆ ತಿದ್ದುಪಡಿ ತಂದಿರುವ ಪರಿಣಾಮ, ಬಡ ಮತ್ತು ಮಧ್ಯಮ ವರ್ಗಗಳ ಮಕ್ಕಳ ಪೋಷಕರಿಗೆ ದಿಗಲು ಬಡಿಯುವಂತಾಗಿದ್ದು, ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಲ್ಲಿ ಓದಿಸುವ ಕನಸಿಗೆ ಎಳ್ಳುನೀರು ಬಿಟ್ಟಂತಾಗಿದೆ.
ಹೌದು… ಬಡ ಮತ್ತು ಮಧ್ಯಮ ವರ್ಗಗಳ ಮಕ್ಕಳು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಪಡೆಯುವಂತಾಗಬೇಕೆಂಬ ಸದುದ್ದೇಶದಿಂದ 2009ರಲ್ಲಿ ಯುಪಿಎ ನೇತೃತ್ವದ ಕೇಂದ್ರ ಸರ್ಕಾರವು ಸರ್ವ ಶಿಕ್ಷಣ ಅಭಿಯಾನ ಅಡಿಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು (ಆರ್‍ಟಿಇ) ಕಾಯ್ದೆಯನ್ನು ಜಾರಿಗೆ ತಂದು, ಪ್ರತಿ ಖಾಸಗಿ ಶಾಲೆಗಳು ಶೇ.25 ರಷ್ಟು ಸೀಟುಗಳನ್ನು ಬಡ ಮಕ್ಕಳಿಗೆ ಮೀಸಲಿಡಬೇಕೆಂಬ ನಿಯಮ ರೂಪಿಸಿತ್ತು.
ಹೀಗಾಗಿ ದೇಶದಾದ್ಯಂತ ಈ ವರೆಗೂ ಕೋಟ್ಯಂತರ ಬಡ ಮತ್ತು ಮಧ್ಯಮ ವರ್ಗಗಳ ಮಕ್ಕಳು ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದು, ಈ ಮಕ್ಕಳ ಶುಲ್ಕವನ್ನು ಆಯಾ ರಾಜ್ಯ ಸರ್ಕಾರಗಳು ಅಕ್ಟೋಬರ್ ಮತ್ತು ಜನವರಿ ತಿಂಗಳಿನಲ್ಲಿ ಎರಡು ಕಂತುಗಳ ಮುಖಾಂತರ ಆಯಾ ಶಾಲಾ ಆಡಳಿತ ಮಂಡಳಿಗಳಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶುಲ್ಕ ಪಾವತಿಸಿಕೊಂಡು ಬಂದಿವೆ.
ಆದರೆ, ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವು 2018-19ನೇ ಶೈಕ್ಷಣಿಕ ವರ್ಷದ ಆರ್‍ಟಿಇ ಶುಲ್ಕವನ್ನು ಶಾಲೆಗಳಿಗೆ ಬಿಡುಗಡೆ ಮಾಡಿಯೇ ಇಲ್ಲ. ದಾವಣಗೆರೆ ಜಿಲ್ಲೆಯೊಂದರ ಖಾಸಗಿ ಶಾಲೆಗಳಿಗೆ ಸುಮಾರು 9 ಕೋಟಿ ರೂ.ಗಳಷ್ಟು ಆರ್‍ಟಿಇ ಶುಲ್ಕ ಸರ್ಕಾರದಿಂದ ಬರಬೇಕಿದೆ. ರಾಜ್ಯ ಸರ್ಕಾರ ಆರ್‍ಟಿಇ ಶುಲ್ಕವನ್ನು ಮಾತ್ರ ತಡೆ ಹಿಡಿದಿಲ್ಲ. ಇದರ ಜೊತೆಗೆ ಆರ್‍ಟಿಇ ಕಾಯ್ದೆಯ ಕೆಲ ಅಂಶಗಳಿಗೆ ತಿದ್ದುಪಡಿ ತಂದಿರುವ ಕಾರಣ ಬಡ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದಬೇಕೆಂಬ ಆರ್‍ಟಿಇ ಕಾಯ್ದೆಯ ಮೂಲ ಆಶಯಕ್ಕೆ ಧಕ್ಕೆ ತಂದಂತಾಗಿದೆ.
ಆರ್‍ಟಿಇ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರವು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿರುವ ವಾರ್ಡ್‍ಗೆ ಸಂಬಂಧಿಸಿದ ಮಕ್ಕಳಿಗೆ ಆರ್‍ಟಿಇ ಕಾಯ್ದೆಯ ಅಡಿಯಲ್ಲಿ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಉಚಿತ ಶಿಕ್ಷಣ ನೀಡುವುದಿಲ್ಲ ಎಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಹೀಗಾಗಿ 2019-20ನೇ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಆರ್‍ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ಸೇರಿಸಬೇಕೆಂಬ ವಿದ್ಯಾರ್ಥಿ ಪೋಷಕರ ಕನಸಿಗೆ ತಣ್ಣೀರು ಎರಚಿದಂತಾಗಿದೆ.
ದಾವಣಗೆರೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನತೆ ಎಸ್‍ಪಿಎಸ್ ನಗರ, ಎಸ್.ಎಂ.ಕೃಷ್ಣ ನಗರ, ಜಾಲಿ ನಗರ, ಶೇಖರಪ್ಪ ನಗರ, ಶಿವ ನಗರ, ಭಾಷಾ ನಗರ, ಆಜಾದ್ ನಗರ, ಅಹಮದ್ ನಗರ, ಬಂಬೂ ಬಜಾರ್, ಬೇತೂರು ರಸ್ತೆ, ವೆಂಕಾ ಭೋವಿ ಕಾಲೋನಿ, ದುಗ್ಗಮ್ಮ ಪೇಟೆ, ಎಸ್‍ಒಜಿ ಕಾಲೋನಿ, ಶ್ರೀರಾಮ ನಗರ, ರಾಮ ನಗರ, ನಿಟುವಳ್ಳಿ, ಕೆಟಿಜೆ ನಗರ, ಮೌನೇಶ್ವರ ಬಡಾವಣೆ, ವಿನೋಬ ನಗರ, ಯಲ್ಲಮ್ಮ ನಗರ, ಶಾಂತಿ ನಗರ, ಬೆಂಕಿ ನಗರ, ಭಾರತ್ ಕಾಲೋನಿ, ಲೆನಿನ್ ನಗರ, ಅಶೋಕ ನಗರ, ಗೋಶಾಲೆ, ಆವರೆಗೆರೆ, ಯರಗುಂಟೆ, ಶಾಮನೂರು, ಕುಂದುವಾಡ, ಬಸಾಪುರ ಸೇರಿದಂತರೆ ಇತರೆ ಹಿಂದುಳಿದ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಆದರೆ, ಈ ಎಲ್ಲಾ ವಾರ್ಡುಗಳಲ್ಲಿ ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳಿವೆ. ಆದ್ದರಿಂದ ಈ ಭಾಗಗಳ ಮಕ್ಕಳು ಸರ್ಕಾರದ ಹೊಸ ನಿಯಮಗಳ ಪ್ರಕಾರ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಆರ್‍ಟಿಇ ಅಡಿಯಲ್ಲಿ ಪ್ರವೇಶ ಪಡೆಯಲು ಬರುವುದಿಲ್ಲ.
ಇನ್ನೂ ಶ್ರೀಮಂತರೇ ಹೆಚ್ಚು ವಾಸವಾಗಿರುವ ಬೃಹತ್ ಬಡಾವಣೆಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಇರುವುದು ಬಹಳ ವಿರಳ. ಆದರೆ, ಸರ್ಕಾರ ಆರ್‍ಟಿಇ ಕಾಯ್ದೆಗೆ ತಿದ್ದುಪಡಿ ತಂದಿರುವುದರ ಅನ್ವಯ, ಬೃಹತ್ ಬಡಾವಣೆಗಳಿರುವ ವಾರ್ಡ್‍ಗಳ ಖಾಸಗಿ ಶಾಲೆಗಳಿಗೆ ಈ ಬಾರಿ ಆರ್‍ಟಿಇ ಅಡಿಯಲ್ಲಿ ಪ್ರವೇಶ ದೊರೆಯಲಿದೆ. ಆದರೆ, ಬಡಾವಣೆಗಳಲ್ಲಿ ವಾಸಿಸುತ್ತಿರುವ ಪೋಷಕರಿಗೆ ಆರ್‍ಟಿಇ ಕಾಯ್ದೆಯ ಅವಶ್ಯಕತೆಯೇ ಇರುವುದಿಲ್ಲ.
ಹಾಗೂ ಈ ಭಾಗದ ಪೋಷಕರು ಆರ್‍ಟಿಇ ಅಡಿಯಲ್ಲಿ ಅರ್ಜಿ ಸಲ್ಲಿಸಲು ಸಹ ಮುಜುಗರ ಪಡುತ್ತಾರೆ. ಸರ್ಕಾರ ಅವೈಜ್ಞಾನಿಕವಾಗಿ ಆರ್‍ಟಿಇ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಒಂದು ಕೈಯಿಂದ ಉಚಿತ ಶಿಕ್ಷಣ ಕೊಡುವ ನಾಟಕವಾಗಿ, ಇನ್ನೊಂದು ಕೈಯಿಂದ ಕಸಿಯುವ ಹುನ್ನಾರ ನಡೆಸಿರುವುದಂತು ಮೇಲ್ನೋಟಕ್ಕೆ ಸಾಬೀತಾಗಿದ್ದು, ಸರ್ಕಾರದ ಈ ಹೊಸ ನಿಯಮದ ಪ್ರಕಾರ ರಾಜ್ಯದ ಐದು ನೂರು ಶಾಲೆಗಳಲ್ಲೂ ಸಹ ಆರ್‍ಟಿಇ ಪ್ರವೇಶ ದೊರೆಯುವುದಿಲ್ಲ ಎಂಬುದಾಗಿ ಬಲ್ಲ ಮೂಲಗಳು ತಿಳಿಸಿವೆ.
ಈ ಬಾರಿ ಆರ್‍ಟಿಇಯ ಬಗ್ಗೆ ಹಲವು ಗೊಂದಲಗಳು ಇರುವ ಕಾರಣಕ್ಕೆ ಮಕ್ಕಳ ಪೋಷಕರು ಆರ್‍ಟಿಇಗೆ ಅರ್ಜಿಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಸಹ ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಈ ತಿದ್ದುಪಡಿಯನ್ನು ವಾಪಾಸ್ ಪಡೆದು, ಮೊದಲಿನಂತೆ ಆರ್‍ಟಿಇ ಕಾಯ್ದೆಯನ್ನು ರೂಪಿಸಿ, ಆಯಾ ವಾರ್ಡ್‍ಗಳ ಮಕ್ಕಳಿಗೆ ಎಲ್ಲಾ ಶಾಲೆಗಳಿಗೂ ಆರ್‍ಟಿಇ ಮೂಲಕ ಪ್ರವೇಶ ಕೊಡಿಸಿ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಆಶಯವನ್ನು ಸಾಕಾರಗೊಳಿಸಬೇಕೆಂಬುದು ಮಕ್ಕಳ ಪೋಷಕರ ಒತ್ತಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
