ಶಿರಾ
ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಜವನಹಳ್ಳಿ ಟೋಲ್‍ಗೇಟ್ ಬಳಿ ವಾಹನಗಳಿಂದ ಹೆಚ್ಚುವರಿ ಹಣ ವಸೂಲು ಮಾಡಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ಮಧುಗಿರಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಇನ್ಸ್‍ಪೆಕ್ಟರ್‍ರೊಬ್ಬರು ಶುಕ್ರವಾರ ಎ.ಸಿ.ಬಿ. ಬಲೆಗೆ ಸಿಲುಕಿದ್ದಾರೆ.
ಶಿರಾ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯ ಜವನಹಳ್ಳಿ ಟೋಲ್‍ಗೇಟ್ ಸಮೀಪದಲ್ಲಿ ಮಧುಗಿರಿ ಆರ್.ಟಿ.ಓ. ಅಧಿಕಾರಿಗಳು ದಿನನಿತ್ಯ ವಾಹನ ತಪಾಸಣೆಗೆಂದು ಬಂದು ವಾಹನಗಳ ಪರಿಶೀಲನೆಯ ನೆಪದಲ್ಲಿ ಭ್ರಷ್ಟಾಚಾರದಲ್ಲಿ ತೊಡಗುತ್ತಾ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಮಾಡುತ್ತಿದ್ದರಲ್ಲದೆ ವಾಹನಗಳಿಂದ ಹೆಚ್ಚುವರಿ ಹಣ ವಸೂಲಾತಿಯ ದಂಧೆಯಲ್ಲೂ ತೊಡಗಿದ್ದರು.
ಈ ಸಂಬಂಧ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದನ್ನು ಖಾತರಿಪಡಿಸಿಕೊಂಡ ಎ.ಸಿ.ಬಿ. ಇಲಾಖೆಯ ಅಧಿಕಾರಿಗಳು ಟೋಲ್‍ಗೇಟ್ ಬಳಿ ಮಧುಗಿರಿ ಆರ್.ಟಿ.ಓ. ಇನ್ಸ್‍ಪೆಕ್ಟರ್ ಆರ್.ಸುರೇಂದ್ರಕುಮಾರ್ ಮತ್ತು ಸಿಬ್ಬಂದಿಯ ಮೇಲೆ ದಾಳಿ ನಡೆಸಿದರು ಎನ್ನಲಾಗಿದೆ. ಎ.ಸಿ.ಬಿ. ಡಿ.ವೈ.ಎಸ್.ಪಿ. ಬಿ.ಉಮಾಶಂಕರ್ ಮತ್ತು ಇನ್ಸ್‍ಪೆಕ್ಟರ್ ಸುನಿಲ್‍ಕುಮಾರ್ ಅವರ ತಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದ ಮಧುಗಿರಿ ಆರ್.ಟಿ.ಓ. ಇನ್ಸ್‍ಪೆಕ್ಟರ್ ಆರ್.ಸುರೇಂದ್ರಕುಮಾರ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿಢೀರ್ ದಾಳಿ ನಡೆಸಿದ ಪರಿಣಾಮ ಕಳೆದ ಹಲವು ವರ್ಷಗಳಿಂದಲೂ ಪ್ರಯಾಣಿಕರಿಂದ ವ್ಯಾಪಕವಾಗಿ ಹಣ ವಸೂಲು ಮಾಡುತ್ತಿದ್ದ ಆರ್.ಟಿ.ಓ. ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ದಾಳಿಯ ಸಂದರ್ಭದಲ್ಲಿ ಹಣ ಸಂದಾಯದ ರಸೀದಿಯ ಮೊತ್ತಕ್ಕಿಂತ 35,000 ರೂ ಹೆಚ್ಚುವರಿಯಾಗಿದ್ದದ್ದು ಕಂಡು ಬಂದಿದೆ.
ನೆರಳು ಸಾಕ್ಷಿದಾರರು ಮತ್ತು ಪಂಚರ ಸಮಕ್ಷಮದಲ್ಲಿ ಹೆದ್ದಾರಿ ರಸ್ತೆಯಲ್ಲಿಯೇ ಪಂಚನಾಮೆ ಸಿದ್ಧಪಡಿಸಿದ ಎ.ಸಿ.ಬಿ. ಅಧಿಕಾರಿಗಳು ದಾಳಿಯ ಸಂದರ್ಭದಲ್ಲಿ ಸರ್ಕಾರಿ ಬುಲೆರೋ ವಾಹನ ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ.ಮಧುಗಿರಿ ಆರ್.ಟಿ.ಓ. ಅಧಿಕಾರಿಗಳ ಇಂತಹ ಭ್ರಷ್ಟಾಚಾರದ ಕೃತ್ಯ ಕಳೆದ ಹಲವು ವರ್ಷಗಳಿಂದಲೂ ವ್ಯಾಪಕವಾಗಿ ನಡೆಯುತ್ತಿತ್ತು ಎಂಬುದಕ್ಕೆ ಅನೇಕ ಪ್ರಯಾಣಿಕರು ಈ ಅಧಿಕಾರಿಗಳಿಗೆ ಹಾಕುತ್ತಿದ್ದ ಹಿಡಿ ಶಾಪವೇ ಕಾರಣವಾಗಿತ್ತು.
ಶಿರಾ ಮಾರ್ಗದಿಂದ ಹೋಗುವ ಪ್ರಯಾಣಿಕರು ಟೋಲ್‍ಗೇಟ್ ಶುಲ್ಕ ಸಂದಾಯ ಮಾಡಿ ಹತ್ತು ಹೆಜ್ಜೆ ಮುಂದೆ ಹೋಗುತ್ತಿದ್ದಂತೆಯೇ ಎಡಭಾಗದ ರಸ್ತೆಯಲ್ಲಿ ಆರ್.ಟಿ.ಓ. ಅಧಿಕಾರಿಗಳು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದರು. ಬೆಳಿಗ್ಗೆ 9 ಗಂಟೆಗೆಲ್ಲಾ ಟೋಲ್ ಬಳಿ ಬಂದು ದಿನ ನಿತ್ಯ ಬೀಡುಬಿಡುತ್ತಿದ್ದ ಆರ್.ಟಿ.ಓ. ಅಧಿಕಾರಿಗಳನ್ನು ಪ್ರಶ್ನಿಸುವವರೇ ಇಲ್ಲದಂತಾಗಿತ್ತು.
ಎ.ಸಿ.ಬಿ. ಅಧಿಕಾರಿಗಳ ಈ ದಾಳಿಯಿಂದ ಸಾರ್ವಜನಿಕರಲ್ಲಿ ಪ್ರಶಂಸೆಯೂ ವ್ಯಕ್ತವಾಗಿದ್ದು ತುಮಕೂರಿನಿಂದ ಶಿರಾ ಹಾಗೂ ಚಿತ್ರದುರ್ಗ ಮಾರ್ಗದ ರಸ್ತೆಯಲ್ಲಿ ದಿನ ನಿತ್ಯ ಇದೇ ದಂಧೆಯಲ್ಲಿ ತೊಡಗುತ್ತಿದ್ದ ಆರ್.ಟಿ.ಓ. ಅಧಿಕಾರಿಗಳಿಗೆ ಎ.ಸಿ.ಬಿ. ಅಧಿಕಾರಿಗಳ ಈ ದಾಳಿ ಬೆಚ್ಚಿ ಬೀಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
