ಸಾರಿಗೆ ಇಲಾಖೆ ಚೆಕ್‍ಪೋಸ್ಟುಗಳಲ್ಲಿ ವಸೂಲಿ ಧಂದೆ

ಬೆಂಗಳೂರು

         ರಾಜ್ಯಾದ್ಯಂತ ಸಾರಿಗೆ ಇಲಾಖೆ ಚೆಕ್‍ಪೋಸ್ಟುಗಳಲ್ಲಿ ವಸೂಲಿ ಧಂದೆ ನಡೆಯುತ್ತಿದ್ದರೂ ಅದನ್ನು ಸಂಪೂರ್ಣವಾಗಿ ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ ಎಂದು ಖುದ್ದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಇಂದಿಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

         ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು,ಸಾರಿಗೆ ಇಲಾಖೆ ಚೆಕ್‍ಪೋಸ್ಟುಗಳಲ್ಲಿ ವಸೂಲಿ ಧಂದೆ ನಡೆಯುತ್ತಿದೆ ಎಂದು ಮೇಲಿಂದ ಮೇಲೆ ದೂರುಗಳು ಬರುತ್ತಲೇ ಇವೆ ಎಂದು ಹೇಳಿದರು.

          ನಾವು ಕೂಡಾ ಅದನ್ನು ತಡೆಗಟ್ಟಲು ಸಿಸಿಟಿವಿ ಅಳವಡಿಕೆ,ವಾಹನಗಳ ನಿಲುಗಡೆ ವಿವರ ಅರಿಯುವ ಯಂತ್ರಗಳನ್ನು ಅಳವಡಿಸಿದ್ದೇವೆ.ಆದರೂ ಸಾರಿಗೆ ಇಲಾಖೆ ಚೆಕ್ ಪೋಸ್ಟುಗಳಲ್ಲಿ ನಡೆಯುತ್ತಿರುವ ವಸೂಲಿ ಧಂದೆಯನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

         ಚೆಕ್‍ಪೋಸ್ಟ್‍ಗಲ್ಲಿ ನಿಗದಿತ ಮೊತ್ತ ವಸೂಲು ಮಾಡಿದರೂ ಸ್ವಲ್ಪ ಮುಂಭಾಗದಲ್ಲಿ ಅನಧಿಕೃತವಾಗಿ ನೇಮಕಗೊಂಡ ರೌಡಿಗಳು ವಾಹನಗಳಿಂದ ವಸೂಲಿ ಮಾಡುತ್ತಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು,ಇದನ್ನು ತಡೆಗಟ್ಟಲು ನಾವು ನಮ್ಮಿಂದಾದ ಪ್ರಯತ್ನ ಮಾಡುತ್ತಿದ್ದೇವೆ.ಆದರೆ ಎಲ್ಲರೂ ಸಹಕಾರ ನೀಡಿದರೆ ಮತ್ತಷ್ಟು ಪರಿಣಾಮಕಾರಿಯಾಗಿ ಇದನ್ನು ನಿಲ್ಲಿಸಲು ಸಾಧ್ಯ ಎಂದರು.

         ಇದು ನಾನು ಬಂದ ನಂತರ ನಡೆಯುತ್ತಿರುವ ಕೆಲಸವಲ್ಲ,ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ.ಹೀಗಾಗಿ ಅದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

          ಸಾರಿಗೆ ಇಲಾಖೆ ಚೆಕ್ ಪೋಸ್ಟ್‍ಗಳ ಧಂದೆಯ ಬಗ್ಗೆ ವಿರೋಧ ಪಕ್ಷದಲ್ಲಿದ್ದಾಗ ಹೆಚ್.ಡಿ.ಕುಮಾರಸ್ವಾಮಿ ಅವರೇ ಆರೋಪ ಮಾಡಿದ್ದರು ಎಂದವರ ಗಮನ ಸೆಳೆದಾಗ,ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ ಚೆಕ್ ಪೋಸ್ಟುಗಳ ಮೇಲೆ ಹದ್ದುಗಣ್ಣಿಡಲಾಗುವುದು ಎಂದು ಹೇಳಿದರು.

          ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುತ್ತಿರುವ ಸರ್ಕಾರಿ ಬಸ್ಸುಗಳ ಪ್ರಯಾಣಿಕರ ಮೇಲೆ ದುಬಾರಿ ಶುಲ್ಕದ ಹೊರೆ ಹೊರಿಸಲಾಗಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಹಾಕುತ್ತಿರುವ ಪರಿಣಾಮವಾಗಿ ನಾವದನ್ನು ಪ್ರಯಾಣಿಕರಿಂದ ವಸೂಲಿ ಮಾಡಬೇಕಾಗಿ ಬಂದಿದೆ ಎಂದರು.

          ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಸರ್ಕಾರಿ ಬಸ್ಸುಗಳ ಮೇಲೆ ಟೋಲ್ ವಿಧಿಸದಂತೆ ಮನವಿ ಮಾಡಿಕೊಳ್ಳಲಾಗಿದೆಯಾದರೂ ಅವರಿನ್ನೂ ಕ್ರಮ ಕೈಗೊಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

         ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲಿ ನಗರ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಬಲಿಷ್ಟವಾಗಲಿದೆ ಎಂದು ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

         ವಾಹನ ಸಂಚಾರ ದಟ್ಟಣೆಯಿಂದ ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ದಟ್ಟವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ವಾರ್ಡ್ ಮಟ್ಟಗಳಲ್ಲಿ ತಜ್ಞರ ಸಮಿತಿ ರಚಿಸಿ ಅವರಿಂದಲೇ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕಾಗಿದೆ ಎಂದರು.

        ಇವತ್ತು ಬೆಂಗಳೂರು,ಮೈಸೂರು ಸೇರಿದಂತೆ ಎಲ್ಲ ಮಹಾನಗರಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ವಾಹನಗಳು ನಿಂತಿರುತ್ತವೆ.ಇದೇ ಪರಿಸ್ಥಿತಿ ಮುಂದುವರಿದರೆ ನಾವು ಕಷ್ಟಕರ ಪರಿಸ್ಥಿತಿಗೆ ಸಿಲುಕುತ್ತೇವೆ ಎಂದು ಹೇಳಿದರು.ಕಳೆದ ವರ್ಷ ಬೆಂಗಳೂರು ಒಂದರಲ್ಲಿಯೇ ಪರಿಸರ ಮಾಲಿನ್ಯದ ಪರಿಣಾಮವಾಗಿ ಶ್ವಾಸಕೋಶದ ತೊಂದರೆಗೊಳಗಾದ 4800 ಜನ ಮೃತಪಟ್ಟಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಸಚಿವರು ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದರು.ಹೀಗಾಗಿ ನಗರ ಸ್ಥಳೀಯ ಸಂಸ್ಥೆಗಳು ದೊಡ್ಡ ದೊಡ್ಡ ಜಾಗವನ್ನು ಹುಡುಕಿ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತೇವೆ ಎನ್ನುವುದಲ್ಲ.ಬದಲಿಗೆ ಸಣ್ಣ ಸಣ್ಣ ಜಾಗಗಳಲ್ಲೂ ಪಾರ್ಕಿಂಗ್ ವ್ಯವಸ್ಥೆಯನ್ನು ರೂಪಿಸಬೇಕು.ಜಪಾನ್‍ನಂತಹ ದೇಶಗಳಲ್ಲಿ ಹೀಗೆ ಸಣ್ಣ ಜಾಗಗಳಲ್ಲಿ ಐವತ್ತರಿಂದ ನೂರು ವಾಹನಗಳನ್ನು ಪಾರ್ಕಿಂಗ್ ಮಾಡುವ ವ್ಯವಸ್ಥೆಯಿದೆ.ಆ ಮೂಲಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದವರಿಗೂ ಅನುಕೂಲ ಕಲ್ಪಿಸಿಕೊಟ್ಟಂತಾಗುತ್ತದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap