ನಗರದತ್ತ ಗ್ರಾಮೀಣ ವಿದ್ಯಾರ್ಥಿಗಳ ವಲಸೆ…!!

ತುಮಕೂರು:

ಮಕ್ಕಳಲ್ಲಿ ಜಾಗೃತಿ:

     ಗ್ರಾಮೀಣ ಪ್ರದೇಶದ ಮಕ್ಕಳು ಇಂದು ಸ್ಪರ್ಧಾತ್ಮಕ ಜಗತ್ತಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಕೀಳರಿಮೆ ಮರೆಯಾಗುತ್ತಿದೆ. ನಾನೂ ನಗರದವರಂತೆ ಆಗಬೇಕು. ಅವರಂತೆ ಬೆಳೆಯಬೇಕು, ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂಬ ಹಂಬಲ ಎಲ್ಲ ಮಕ್ಕಳಲ್ಲಿಯೂ ಮೂಡುತ್ತಿದೆ. ಅದಕ್ಕೆ ತಕ್ಕಂತೆ ಪರಿಶ್ರಮ ಹಾಕುತ್ತಿದ್ದಾರೆ. ಗ್ರಾಮೀಣ ಜನಜೀವನದ ಬದುಕಿನ ಇತರೆ ಒತ್ತಡಗಳ ನಡುವೆಯೂ ಶೈಕ್ಷಣಿಕ ಚಟುವಟಿಕೆಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.

      ಈ ಕ್ರಿಯಾಶೀಲತೆ ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆಗೆ ಆಸಕ್ತಿ ಮೂಡಿಸುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಶೈಕ್ಷಣಿಕ ಆಸಕ್ತಿ, ಸ್ಪರ್ಧೆಗೆ ಒಡ್ಡಿಕೊಳ್ಳುವ ಛಲಗಾರಿಕೆ, ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಮನೋಸ್ಥಿತಿ, ಮರೆಯಾದ ಕೀಳರಿಮೆ ಇವೆಲ್ಲವೂ ಉತ್ತಮ ಸಾಧನೆಗೆ ಪ್ರೇರಣೆಯಾಗಿ ನಿಲ್ಲುತ್ತಿವೆ.

     ಕಂಪ್ಯೂಟರ್, ಮೊಬೈಲ್‍ಗಳ ಬಳಕೆ, ಸಮೂಹ ಮಾಧ್ಯಮಗಳ ಅರಿವು ಈಗ ಎಲ್ಲ ವರ್ಗಕ್ಕೂ ವಿಸ್ತರಿಸಿದೆ. ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಕ್ಕೆ ಸರ್ಕಾರವಷ್ಟೇ ಅಲ್ಲ, ಇತರೆ ಸಂಘ ಸಂಸ್ಥೆಗಳೂ ಸಹಕಾರಿಯಾಗಿವೆ. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ವೇತನಗಳು ಲಭ್ಯವಾಗುತ್ತಿವೆ. ಸರ್ಕಾರದ ವಿದ್ಯಾರ್ಥಿ ವೇತನದ ಜೊತೆಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಲವಾರು ಬಗೆಯ ವೇತನಗಳು ಈಗ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿವೆ. ವಿದ್ಯಾರ್ಥಿಗಳಿಗೆ ನೆರವಾಗಲೆಂದೆ ಸಾಕಷ್ಟು ಸಂಖ್ಯೆಯ ಸಂಸ್ಥೆಗಳು ಹುಟ್ಟಿಕೊಂಡಿವೆ.

    ಸ್ಕಾಲರ್‍ಶಿಪ್ ದೊರಕಿಸಿಕೊಳ್ಳುವ ಜೊತೆಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಹೆಚ್ಚಿನ ಅಂಕ ಪಡೆಯುವ ಅನಿವಾರ್ಯತೆಗೆ ವಿದ್ಯಾರ್ಥಿಗಳು ಸಿಲುಕಿದ್ದಾರೆ.ಮಕ್ಕಳಂತೆ ಪೋಷಕರೂ ಜಾಗೃತರಾಗಿದ್ದಾರೆ. ವ್ಯವಸಾಯವನ್ನೇ ನಂಬಿ ಬದುಕುವ ಕಾಲ ಈಗ ಇಲ್ಲ. ಎಕರೆಗಟ್ಟಲೆ ಕೃಷಿ ಜಮೀನು ಹೊಂದಿ ಬದುಕುತ್ತಿದ್ದವರು ಇಂದು ಕೈಚೆಲ್ಲಿ ಕುಳಿತಿದ್ದಾರೆ. ಕೃಷಿಯಿಂದ ಯಾವತ್ತೂ ನಷ್ಟವೆ ಎಂಬ ಅರಿವಾಗಿ ಮಕ್ಕಳಾದರೂ ಹೊರಗೆ ಹೋಗಿ ದುಡಿದು ತಿನ್ನಲಿ ಎಂಬ ಅಭಿಲಾಷೆ ಅವರಲ್ಲ್ಲಿ ಮೂಡಿದೆ. ಹೀಗಾಗಿಯೇ ಮಕ್ಕಳ ಬಗ್ಗೆ, ಶಿಕ್ಷಣದ ಬಗ್ಗೆ, ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಮಕ್ಕಳನ್ನು ತಮ್ಮ ಕೃಷಿ ಚಟುವಟಿಕೆಗೆ ಬಳಸಿಕೊಳ್ಳದೆ, ಇತರೆ ಕೆಲಸ ಕಾರ್ಯಗಳಿಗೆ ಹಚ್ಚದೇ ಓದಿಗೆ ಸಹಕರಿಸುತ್ತಿದ್ದಾರೆ.

     ಗ್ರಾಮೀಣ ಪ್ರದೇಶಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕಲಿಕಾ ಬೋಧನೆಯ ಜೊತೆ ಜೊತೆಯಲ್ಲೇ ವಾಸ್ತವ ಚಿತ್ರಣದ ಅರಿವು ಇರುತ್ತದೆ. ತಾನು ಶಾಲೆಯಲ್ಲಿ ಕಲಿಯುವ ಹಲವು ವಿಷಯಗಳು ತನ್ನ ದೈನಂದಿನ ಕೃಷಿ ಚಟುವಟಿಕೆಗಳಲ್ಲಿ ಹತ್ತಿರದಿಂದ ಕಂಡಿರುವ, ನೋಡಿರುವ ವಿಷಯಗಳಾಗಿರುವುದರಿಂದ ಬಹು ಬೇಗನೆ ಅರ್ಥವಾಗುತ್ತದೆ. ನಗರ ಪ್ರದೇಶದ ಮಕ್ಕಳಿಗೆ ಗ್ರಾಮೀಣ ಸೊಗಡಿನ ಚಿತ್ರಣವನ್ನು ಬಿಡಿ ಬಿಡಿಯಾಗಿ ವಿವರಿಸಬೇಕು.

    ಆದರೂ ಅರ್ಥವಾಗದು. ಗ್ರಾಮೀಣ ಮಕ್ಕಳಿಗೆ ಇದೆಲ್ಲ ಅತ್ಯಂತ ಸುಲಭವಾದ ಸಂಗತಿ. ಬೋಧನೆಯ ಪಾಠದ ಜೊತೆಗೆ ಪ್ರಾಯೋಗಿಕ ಅನುಭವವೂ ಇರುವುದರಿಂದ ಪಠ್ಯ ವಿಷಯಗಳು ಬಹು ಬೇಗನೆ ಮನಸ್ಸಿಗೆ ನಾಟುತ್ತವೆ. ಹೆಚ್ಚು ಜ್ಞಾನಾರ್ಜನೆಗೆ ಇದು ಪೂರಕ. ರಾಗಿ ಬೆಳೆಯುವುದರಿಂದ ಹಿಡಿದು ಇತರೆ ದವಸ ಧಾನ್ಯಗಳ ಕೃಷಿ ಚಟುವಟಿಕೆ, ತೋಟಗಾರಿಕೆ, ಹೈನುಗಾರಿಕೆ, ಹಣ್ಣು ಹಂಪಲು ಇತ್ಯಾದಿ ವಿಷಯಗಳು ಗ್ರಾಮೀಣ ಮಕ್ಕಳಿಗೆ ವಿವರಿಸಿ ಹೇಳಬೇಕಿಲ್ಲ.
ಹಸಿವು, ಬಡತನ, ಶ್ರಮವನ್ನು ಹತ್ತಿರದಿಂದ ನೋಡುವ ಗ್ರಾಮೀಣ ಮಕ್ಕಳಿಗೆ ಬದುಕಿನ ಛಲ ಮೂಡದೇ ಇರದು. ಶ್ರಮದ ಹಾದಿಯಲ್ಲಿಯೇ ಶಿಕ್ಷಣ ಪಡೆಯುವ ಮಕ್ಕಳಿಗೆ ಮುಂದಿನ ಭವಿಷ್ಯ ತುಂಬಾ ಪ್ರಮುಖವಾಗುತ್ತದೆ. ಬದುಕಿನ ಕಲೆಯನ್ನು ಕಲಿಯುವ ಮಕ್ಕಳು ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗುತ್ತಾರೆ. ಇದೇ ಹಾದಿಯಲ್ಲಿ ಉತ್ತಮ ಅಂಕ ಗಳಿಸಲು ಪ್ರಯತ್ನಿಸುತ್ತಾರೆ. ಹೀಗಾಗಿ ಸೋಮಾರಿತನ ಎಂಬುದು ಅವರ ಮುಂದೆ ಸುಳಿಯಲು ಸಾಧ್ಯವಾಗದು.
ಮಕ್ಕಳು ಹಾಗೂ ಪೋಷಕರಿಗೆ ಈಗ ಸಮೂಹ ಮಾಧ್ಯಮಗಳು ಹೆಚ್ಚು ಪರಿಣಾಮಕಾರಿಯಾಗಿ ಕಾಣುತ್ತಿವೆ. ಪ್ರಪಂಚದ ವಿದ್ಯಮಾನಗಳು ಅರ್ಥವಾಗುತ್ತಿವೆ. ಎಂತಹ ಕುಗ್ರಾಮಗಳಲ್ಲೂ ಈಗ ಟಿ.ವಿ.ಗಳು ಬಂದು ಕುಳಿತಿವೆ. ಪತ್ರಿಕೆಗಳು ತಲುಪದ ಜಾಗ ಈಗ ಇಲ್ಲ. ಅದಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಎಲ್ಲೆಲ್ಲಿಯೂ ಪಸರಿಸಿದೆ. ದಿನೆ ದಿನೆ ಮುಂದುವರಿಯುತ್ತಿರುವ ಈ ಸ್ಪರ್ಧಾತ್ಮಕ ಜಗತ್ತಿಗೆ ಹೊಂದಿಕೊಳ್ಳುವ ಪರಿಕಲ್ಪನೆ ಮೂಡಿಸುವಲ್ಲಿ ವಿವಿಧ ಮಾಧ್ಯಮಗಳು ಈ ಸಮುದಾಯಕ್ಕೆ ಸಹಕಾರಿಯಾಗಿವೆ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ.
ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಲೇ ಇವೆÉ. ವಿಷಯಾವಾರು ಆಧಾರಿತ ಶೈಕ್ಷಣಿಕ ಕಾರ್ಯಾಗಾರಗಳನ್ನು ನಡೆಸುತ್ತಿದ್ದು ಇಂತಹ ವಿಷಯಗಳಿಗೆ ಇಲಾಖೆ ಹಾಗೂ ಶೈಕ್ಷಣಿಕ ಸಂಘಟನೆಗಳು ಹೆಚ್ಚು ಒತ್ತು ನೀಡುವ ಅಗತ್ಯವಿದೆ. ಗಣಿತ, ವಿಜ್ಞಾನ, ಇಂಗ್ಲಿಷ್ ಇಂತಹ ವಿಷಯಗಳು ಇಂದಿಗೂ ಕೆಲವರಿಗೆ ಕಬ್ಬಿಣದ ಕಡಲೆ ಎನ್ನುವ ಮಾತಿದೆ. ಶಿಕ್ಷಕರು ಈ ನಿಟ್ಟಿನಲ್ಲಿ ಮತ್ತಷ್ಟು ಕ್ರಿಯಾಶೀಲರಾಗಬೇಕಿದೆ. ಯಾವ ವಿಷಯಗಳು ವಿದ್ಯಾರ್ಥಿಗಳಿಗೆ ಕಷ್ಟಕರ ಎಂಬುದು ಇಲಾಖೆಗೆ ತಿಳಿದಿರುತ್ತದೆ. ಅಂತಹ ವಿಷಯಗಳ ವಿಶೇಷ ಬೋಧನೆಯತ್ತ ಹೆಚ್ಚು ಗಮನ ಹರಿಸಬೇಕಿದೆ. ಶಿಕ್ಷಣ ಇಲಾಖೆಯು ಶಿಕ್ಷಕರು ಹಾಗೂ ಮಕ್ಕಳಿಗೆ ಸೇತುಬಂಧವಾಗಿ ಕಾರ್ಯನಿರ್ವಹಿಸಬೇಕು. ಆಗಾಗ್ಗೆ ನಡೆಸುವ ಸಭೆ, ತರಬೇತಿ ಮತ್ತು ಕಾರ್ಯಾಗಾರಗಳು ಹೆಚ್ಚು ಉಪಯುಕ್ತವಾಗಬಲ್ಲವು. ಸರ್ಕಾರಿ ಶಾಲೆಗಳಲ್ಲಿ ಬೋಧಿಸುವ ಶಿಕ್ಷಕರು ಸಮರ್ಥರಿರುತ್ತಾರೆ. ಅವರ ಆ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವುದೇ ಮುಂದಿರುವ ದಾರಿ.
ವಲಸೆ ತಡೆಯಬೇಕಿದೆ:-
ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಷ್ಟೂ ಆ ಶಾಲೆಗಳತ್ತ ಪೋಷಕರ ಗಮನ ಹರಿಯಲು ಸಾಧ್ಯವಾಗುತ್ತದೆ. ದಿನೆ ದಿನೆ ಹೆಚ್ಚುತ್ತಿರುವ ನಗರೀಕರಣದಿಂದಾಗಿ ಪಟ್ಟಣ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳು ಗಲ್ಲಿಗಲ್ಲಿಗಳಲ್ಲಿ ಆರಂಭವಾಗುತ್ತಿವೆ. ಶಿಕ್ಷಣ ನಗರ ಕೇಂದ್ರೀತವಾಗುತ್ತಿದೆ. ಮಕ್ಕಳು ಹಳ್ಳಿಯಿಂದ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವುದರಿಂದ ಶಿಕ್ಷಣವು ದುಬಾರಿಯಾಗುತ್ತಿದೆ. ಅತ್ತ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಶ್ರಮಿಸಿದರೂ ಪ್ರಯೋಜನಕ್ಕೆ ಬಾರದಂತಾಗುತ್ತಿದೆ. ನಮ್ಮ ಮುಂದೆ ಇರುವ ಈಗಿನ ದೊಡ್ಡ ಸವಾಲೆಂದರೆ ಗ್ರಾಮೀಣ ಮಕ್ಕಳು ಅಲ್ಲಿನ ಶಾಲೆಗಳಲ್ಲಿಯೇ ಕಲಿಯುವಂತಾಗುವುದು. ಆ ಮೂಲಕ ನಗರ ಪ್ರದೇಶಕ್ಕೆ ವಲಸೆ ಬರುವುದನ್ನು ತಡೆಯುವುದು.
ನಗರಗಳಿಂದು ಅನೇಕ ಸಮಸ್ಯೆಗಳ ಬೀಡಾಗಿವೆ. ರೋಗರುಜಿನಗಳು ಅಂಟಿಕೊಳ್ಳುತ್ತಿವೆ. ನಗರದಲ್ಲಿರುವವರು ಹಳ್ಳಿ ವಾತಾವರಣ ಅಪೇಕ್ಷಿಸುತ್ತಿದ್ದರೆ, ಹಳ್ಳಿಗಳಲ್ಲಿರುವವರು ನಗರಕ್ಕೆ ಬಂದು ಸೇರುತ್ತಿದ್ದಾರೆ. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ನಗರಕ್ಕೆ ಬರುತ್ತಿರುವುದರಿಂದಲೇ ವಿವಿಧ ಸಮಸ್ಯೆಗಳು ಉಲ್ಬಣಗೊಳ್ಳಲು ಕಾರಣವಾಗುತ್ತಿದೆ. ಪರಿಸರ ಅನೈರ್ಮಲ್ಯ, ಕುಡಿಯುವ ನೀರಿನ ಸಮಸ್ಯೆ, ಉತ್ತಮ ಆಹಾರ ದೊರಕದೇ ಇರುವುದು ಇತ್ಯಾದಿಗಳಿಂದಾಗಿ ಬದುಕು ಏರುಪೇರಾಗುತ್ತಿದೆ. ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಇದೇ ಕಾರಣದಿಂದ. ನಗರ ಪ್ರದೇಶಗಳಲ್ಲಿರುವ ಮಕ್ಕಳು ದಷ್ಟಪುಷ್ಟವಾಗಿ ಬೆಳೆದಿರಬಹುದು. ನೋಡಲು ಅಂದವಾಗಿ ಕಾಣಬಹುದು. ಗ್ರಾಮೀಣ ಮಕ್ಕಳು ಸಣ್ಣಗಿದ್ದರೂ ಅವರಲ್ಲಿ ಗಟ್ಟಿತನ ಇರುತ್ತದೆ. ಅಲ್ಲಿನ ವಾತಾವರಣ ಅವರನ್ನು ಗಟ್ಟಿಗರನ್ನಾಗಿ ಮಾಡಿದೆ.
ಹಲವು ಸಮಸ್ಯೆಗಳಿಂದ ನರಳುತ್ತಿರುವ ನಗರ ಪ್ರದೇಶಗಳು ಸುಸ್ಥಿತಿಗೆ ಬರಬೇಕಾದರೆ ಗ್ರಾಮೀಣ ಜನ ನಗರಗಳಿಗೆ ವಲಸೆ ಬರುವುದನ್ನು ತಡೆಯಬೇಕು. ಉದ್ಯೋಗ ಅರಸಿ ನಗರಗಳಿಗೆ ಬರುವಂತೆಯೇ ತಮ್ಮ ಮಕ್ಕಳನ್ನು ನಗರಗಳಲ್ಲಿ ಓದಿಸುವುದಕ್ಕಾಗಿಯೇ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಎಷ್ಟೋ ಮಂದಿ ತಮ್ಮ ಕೃಷಿ ಭೂಮಿಯನ್ನು ಹಾಳುಬಿಟ್ಟು ಮಕ್ಕಳಿಗಾಗಿ ನಗರ ಸೇರಿದ್ದಾರೆ. ಇನ್ನು ಕೆಲವರು ಹಾಸ್ಟೆಲ್‍ಗಳಿಗೆ ಸೇರಿಸಿದ್ದಾರೆ. ಎಲ್ಲ ಮಕ್ಕಳಿಗೂ ಹಾಸ್ಟೆಲ್ ಸೌಲಭ್ಯ ಸಿಗುವುದಿಲ್ಲ ಎಂಬುದು ಗೊತ್ತು. ಆದರೂ ಹಾಸ್ಟೆಲ್ ದೊರಕಿಸಿಕೊಳ್ಳುವ ಇನ್ನಿಲ್ಲದ ಪ್ರಯತ್ನಗಳು ನಡೆದೇ ಇರುತ್ತವೆ. ಸ್ಥಳೀಯವಾಗಿಯೇ ಇರುವ ಉತ್ತಮ ಶಾಲಾ ಕಾಲೇಜುಗಳನ್ನು ಬಿಟ್ಟು ಅದೇಕೆ ಈ ಪರಿಯ ಸಂಕಟಕ್ಕೆ ಬೀಳುತ್ತಾರೆಂಬುದು ಅರ್ಥವಾಗದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap