ಬೆಂಗಳೂರು
ಬಹುಕೋಟಿ ವಂಚನೆ ನಡೆಸಿ ಪರಾರಿಯಾಗಿರುವ ಐಎಂಎ ಸಮೂಹ ಸಂಸ್ಥೆಯ ಮಾಲೀಕ ಮನ್ಸೂರ್‍ಖಾನ್‍ನ ದುಬೈ, ಇಸ್ತಾನ್‍ಬುಲ್, ಇರಾನ್ ಸೇರಿ ದೇಶ ವಿದೇಶಗಳ ಬಗೆ ಬಗೆಯ ಸುಗಂಧ ದ್ರವ್ಯಗಳು ದೊರೆಯುತ್ತಿದ್ದ `ರಯ್ಯನ್'(ಸುಗಂಧ ದ್ರವ್ಯ ಮಾರಾಟ)ಮಳಿಗೆಗೆ ಬೀಗ ಜಡಿಯಲಾಗಿದೆ.ವಂಚಕ ಮನ್ಸೂರ್ ಖಾನ್ ಪರಾರಿಯಾದ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ ಅಧಿಕಾರಿಗಳು ಪುಲಿಕೇಶಿ ನಗರದ ಕೋಲ್ಸ್ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ `ರಯ್ಯನ್’ಮಳಿಗೆಗೆ ಬೀಗ ಜಡಿದು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಸುಮಾರು 5 ಕೋಟಿ ರೂಪಾಯಿ ಬಂಡವಾಳ ಹೂಡಿ 23 ದೇಶಗಳಲ್ಲಿ ದೊರೆಯುವ ಸುಗಂಧ ದ್ರವ್ಯಗಳಾದ ಬರ್ಖೂರ್ಸ್ ಊದ್’, ಡೆಹ್ನಾಲ್ ಊದ್, ಮೊಘಲ್-ಲಾಟ್ಸ್, ಅರೇಬಿಯನ್ ಮಿಕ್ಸ್, ಫ್ರೆಂಚ್ ಸಾಫ್ಟ್, ನ್ಯಾಚುರಲ್ ರೋಸ್, ಅಂಬರ್, ಖಾಸ್ ಹೇಗೆ ವಿವಿಧ ಬಗೆಯ ಪ್ರತಿಷ್ಠಿತ ಸುಗಂಧ ದ್ರವ್ಯಗಳನ್ನು ಮನ್ಸೂರ್ ಮಳಿಗೆಯಲ್ಲಿಟ್ಟು ಮಾರಾಟ ಮಾಡುತ್ತಿದ್ದು ಇವುಗಳ ಬೆಲೆ ಪ್ರತಿ 100 ಗ್ರಾಂ.ಗೆ ಬರೋಬ್ಬರಿ 5-6 ಸಾವಿರ ರೂಪಾಯಿ ದರ ಮಾರುಕಟ್ಟೆಯಲ್ಲಿದೆ.
ಮಾರ್ಚ್ ಮಾಸದಲ್ಲಿ ಆರಂಭವಾಗಿದ್ದ ರಯ್ಯನ್ ಮಳಿಗೆಯಲ್ಲಿ ಇತ್ತೀಚಿಗೆ ವ್ಯಾಪಾರ ಹೆಚ್ಚಾಗಿತ್ತು ಶಿವಾಜಿನಗರ, ಆರ್‍ಟಿನಗರ, ಫ್ರೇಝರ್ ಟೌನ್ ಸೇರಿದಂತೆ ಹಲವು ಕಡೆಗಳಿಂದ ಗ್ರಾಹಕರು ಇಲ್ಲಿನ ಸುಗಂಧ ದ್ರವ್ಯಗಳನ್ನು ಇಷ್ಟಪಟ್ಟಿದ್ದರು. ಇನ್ನೂ, ರಂಜಾನ್ ಮಾಸದಲ್ಲಿ ರಿಯಾಯಿತಿ ನೀಡಿದ್ದ ಕಾರಣ, ಲಕ್ಷಾಂತರ ರೂಪಾಯಿ ವಾಹಿವಾಟು ನಡೆದಿತ್ತು.
ಜೂ.5 ರಂಜಾನ್ ಆಚರಣೆವರೆಗೂ ತೆರೆದಿದ್ದ ರಯ್ಯನ್ ಮಳಿಗೆ, ತದನಂತರ ಏಕಾಏಕಿ ಬಂದ್ ಆಗಿತ್ತು.ಸಿಬ್ಬಂದಿಗೂ ಯಾವುದೇ ಕಾರಣ ಹೇಳದೆ, ಹಬ್ಬದ ನಂತರವೂ ಐದು ದಿನ ರಜೆಯಲ್ಲಿ ಇರುವಂತೆ ಸೂಚಿಸಿದ್ದ ಮನ್ಸೂರ್. ಆದರೆ, ಜೂ.10 ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು.
ಜೂ.17 ಮತ್ತು 20ರಂದು ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯ ಐಎಂಎ ಜ್ಯುವೆಲರಿ ಅಂಗಡಿ ಸೇರಿದಂತೆ ಹಲವು ಕಡೆ ಸಿಟ್ ತನಿಖಾಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ವೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೂ, ರಯ್ಯನ್ ಮಳಿಗೆ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿದ್ದು, ಸದ್ಯ ಈ ಮಳಿಗೆಗೆ ಬೀಗ ಹಾಕಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
