ದಾವಣಗೆರೆ:
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಶಾಸಕ ಎಸ್.ಎ. ರವೀಂದ್ರನಾಥ್ ಅವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದರು ಎಂಬುದಾಗಿ ಕೆಲ ಮಾಧ್ಯಮಗಳಲ್ಲಿ ತಪ್ಪಾಗಿ ವರದಿ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಶಾಸಕ ಎಸ್.ಎ.ರವೀಂದ್ರನಾಥ್ ಅವರು ಭದ್ರಾ ನೀರು ಹೋರಾಟಕ್ಕೆ ಸಂಬಂಧಿಸಿದ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ, ಇವರ ಜೊತೆಯಲ್ಲಿದ್ದ ಮೂವರು ಕಾಲ, ಕಾಲಕ್ಕೆ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಹಾಗೂ ತಮಗೆ ಕೋರ್ಟ್ ನೋಟೀಸ್ ಸಿಕ್ಕಿಲ್ಲ ಎಂಬುದಾಗಿ ಹೇಳಿದ್ದರಿಂದ ನ್ಯಾಯಾಧೀಶರು ಐದು ನಿಮಿಷ ಹೊರಗಡೆ ಕೂರುವಂತೆ ಸೂಚಿಸಿದ್ದರು.
ಇದನ್ನೆ ಕೆಲ ಮಾಧ್ಯಮಗಳು ರವೀಂದ್ರನಾಥ್ ಅವರನ್ನು ಚುನಾವಣಾ ನೀತಿ ಸಂಹಿತಿ ಉಲ್ಲಂಘನೆ ಆರೋಪದ ಮೇಲೆ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆಂಬುದಾಗಿ ತಪ್ಪಾಗಿ ಗ್ರಹಿಸಿಕೊಂಡು ಸುದ್ದಿ ಬಿತ್ತರಿಸಿವೆ. ರವೀಂದ್ರನಾಥ್ ಅವರು ಕೋರ್ಟ್‍ಗೆ ಹಾಜರಾಗಿರುವುದಕ್ಕೂ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು.
2015ರಲ್ಲಿ ಭದ್ರಾ ನಾಲೆಗೆ ನೀರು ಹರಿಸದ ಕಾಡಾ ಕ್ರಮ ಖಂಡಿಸಿ, ಎಸ್.ಎ.ರವೀಂದ್ರನಾಥ್, ಪ್ರೋ.ನರಸಿಂಹಪ್ಪ ಹಾಗೂ ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ಮಲವಗೊಪ್ಪದಲ್ಲಿರುವ ಕಾಡಾ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಲಾಗಿತ್ತು. ಆಗ ಅಧಿಕಾರಿಗಳು ನೀರು ಹರಿಸುವುದಾಗಿ ಭರಸವೆ ನೀಡಿದ್ದರು. ಆದರೆ, ನಂತರದಲ್ಲಿ ಅಧಿಕಾರಿಗಳು ಹೇಳಿದ ಮಾತಿನಂತೆ ನಡೆದುಕೊಳ್ಳದ ಕಾರಣ ಮತ್ತೆ ಬೃಹತ್ ಸಂಖ್ಯೆಯ ರೈತರೊಂದಿಗೆ ಕಾಡಾಕ್ಕೆ ಮುತ್ತಿಗೆ ಹಾಕಲಾಗಿತ್ತು. ಆಗ ರವೀಂದ್ರನಾಥ್ ಸೇರಿದಂತೆ ಹಲವರ ಮೇಲೆ ದೂರು ದಾಖಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ರವೀಂದ್ರನಾಥ್ ಅವರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಿದ್ದರು ಎಂದು ಮಾಹಿತಿ ನೀಡಿದರು.
ಕಾಡಾಕ್ಕೆ ಮುತ್ತಿಗೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಶಾಸಕ ಎಸ್.ಎ. ರವೀಂದ್ರನಾಥ್ ಅವರು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರಾಗಿ ಬೇಲ್ ಪಡೆದಿದ್ದರು. ಆದರೆ, ಉಳಿದ ನಾಗೇಂದ್ರ ನಾಯ್ಕ, ಸುರೇಂದ್ರನಾಯ್ಕ, ಸುರೇಶ್ ಬಿಸಾಡಿ ಅವರುಗಳಿಗೆ ಬೇಲ್ ಸಿಕ್ಕಿರಲಿಲ್ಲ. ಅಲ್ಲದೇ, ಕೆಲವು ಬಾರಿ ನ್ಯಾಯಾಲಯಕ್ಕೆ ಹಾಜುರು ಸಹ ಆಗಿರಲಿಲ್ಲ. ಆದ್ದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರಾದ ಸಂದರ್ಭ ನ್ಯಾಯಾಧೀಶರು ಕೆಲ ಸಮಯ ಕೋರ್ಟ್ ಹೊರಗಡೆ ಕಾಯುವಂತೆ ತಿಳಿಸಿದ್ದರು. ಅದರಂತೆ ಅವರು ನ್ಯಾಯಾಲಯದ ಆವರಣದಲ್ಲಿ ಕುಳಿತಿರುವುದನ್ನೇ ಮಾಧ್ಯಮಗಳು ತಪ್ಪಾಗಿ ಭಾವಿಸಿ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದ್ರನಾಥ್ ಅವರನ್ನು ಪೊಲೀಸರು ಕಷ್ಟಡಿಗೆ ಪಡೆದಿದ್ದಾರೆಂಬುದಾಗಿ ಸುದ್ದಿ ಬಿತ್ತರಿಸಿವೆ ಎಂದರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಎಸ್.ಜಗದೀಶ್, ಮುಖಂಡರಾದ ಶಿವಕುಮಾರ್, ಆರ್. ಲಕ್ಷ್ಮಣ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ