ಬೆಂಗಳೂರು
ಐತಿಹಾಸಿಕ ದಸರಾ ಮಹೋತ್ಸವವನ್ನು ಎಂದಿನಂತೆ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದ್ದು ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಸೆಪ್ಟೆಂಬರ್ ೨೮ ರಂದು ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ .ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಕುರಿತ ವಿವರಗಳನ್ನು ನೀಡಿದರಲ್ಲದೆ,ದಸರಾ ಮಹೋತ್ಸವವನ್ನು ಪ್ರತಿವರ್ಷದಂತೆ ಆಚರಿಸಲು ಈ ಬಾರಿ ೨೦.೫೦ ಕೋಟಿ ರೂ ನೀಡಲು ತೀರ್ಮಾನಿಸಲಾಗಿದೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳು ಪ್ರವಾಹದಿಂದ ಕಂಗೆಟ್ಟು ಹೋಗಿವೆ.ಆದರೂ ದಸರಾ ಮಹೋತ್ಸವವನ್ನು ಯಾವ ಕೊರತೆಯೂ ಇಲ್ಲದಂತೆ ಎಂದಿನಂತೆ ಆಚರಿಸಬೇಕು ಎಂದು ನಿರ್ಧರಿಸಲಾಗಿದೆ.ಅದೇ ಕಾಲಕ್ಕೆ ದಸರಾ ಮಹೋತ್ಸವವನ್ನು ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಉದ್ಘಾಟಿಸಲಿದ್ದಾರೆ ಎಂದ ಅವರು,ಈ ಬಾರಿ ದಸರೆಯಲ್ಲಿ ಹೊರರಾಜ್ಯದ ಕಲಾವಿದರನ್ನು ಕರೆಸುವುದಕ್ಕಿಂತ ಮುಖ್ಯವಾಗಿ ನಮ್ಮ ರಾಜ್ಯದಲ್ಲೇ ಇರುವ ಕಲಾವಿದರಿಗೆ ಅವಕಾಶ ನೀಡಬೇಕು ಎಂದು ಸಭೆ ತೀರ್ಮಾನಿಸಿದೆ.
ಹೊರರಾಜ್ಯದ ಕಲಾವಿದರನ್ನು ಕರೆಸಿಕೊಂಡು ದುಬಾರಿ ವೆಚ್ಚ ಮಾಡುವುದಕ್ಕಿಂತ ನಮ್ಮಲ್ಲೇ ಇರುವ ಪ್ರತಿಭೆಗಳನ್ನು ಗುರುತಿಸಬೇಕು.ಆ ಮೂಲಕ ನಮ್ಮ ಕಲಾವಿದರಿಗೇ ಅವಕಾಶ ಒದಗಿಸಬೇಕು ಎಂದು ತೀರ್ಮಾನಿಸಲಾಗಿದೆ ಎಂದರು.
ಇದಕ್ಕೂ ಮುನ್ನ ೧೨:೩೦ ಕ್ಕೆ ಆರಂಭವಾದ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ರಾಜ್ಯದ ಪ್ರವಾಹ ಪೀಡಿತ ಪರಿಸ್ಥಿತಿಯನ್ನು ಉಲ್ಲೇಖಿಸಿದ ಸಿಎಂ:ದಸರೆಯನ್ನು ಸರಳವಾಗಿ ಆಚರಣೆ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ.ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.ಇಂತಹ ಸಂದರ್ಭದಲ್ಲಿ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುವುದು ಬೇಡ ಎಂದು ಅವರು ಸಭೆಯ ಗಮನಕ್ಕೆ ತಂದರೂ ಬಹುತೇಕರು ಇದನ್ನು ಒಪ್ಪಲಿಲ್ಲ.ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸುತ್ತೇವೆ ಎಂದು ಈ ಹಿಂದೆ ಹೇಳಿದ ಕಾರಣದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲ ಬರಲಿಲ್ಲ.ಪ್ರವಾಸಿಗರು ಬರದೆ ಹೋಗಿದ್ದರಿಂದ ಆರ್ಥಿಕ ಚಟುವಟಿಕೆಗಳು ನೀರಸವಾದವು.ದಸರಾ ಮಹೋತ್ಸವ ಕೂಡಾ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಹೋತ್ಸವ ಆಚರಿಸೋಣ ಎಂದು ಹಲವರು ಹೇಳಿದರು.
ಅದ್ಧೂರಿ ದಸರಾ ಎಂದು ಘೋಷಿಸುವುದು ಬೇಡ.ಬದಲಿಗೆ ಎಂದಿನಂತೆ ದಸರಾ ಮಹೋತ್ಸವ ನಡೆಸುತ್ತೇವೆ ಎಂದರೆ ಸಾಕು.ಇದರಿಂದ ದಸರಾ ಮಹೋತ್ಸವಕ್ಕೆ ಕಳೆ ಬರುತ್ತದೆ.ಹೆಚ್ಚು ದೀಪಾಲಂಕಾರಗಳು ಬೇಡ.ಆದರೆ ನಿಗದಿತ ಕಾರ್ಯಕ್ರಮಗಳು ನಡೆಯಲಿ ಎಂದರು.
ಕೆಲ ಶಾಸಕರು,ಈ ಬಾರಿ ಯುವ ದಸರಾ ಆಚರಣೆ ಮಾಡುವುದು ಬೇಡ ಎಂದು ಸಲಹೆ ನೀಡಿದರೆ ಕೆಲವರು ದಿವಂಗತ ಜಯಚಾಮರಾಜೇಂದ್ರ ಒಡೆಯರ್ ಅವರ ನೂರನೇ ವರ್ಷಾಚರಣೆಯನ್ನು ಗಮನದಲ್ಲಿಟ್ಟುಕೊಂಡು ವಾಗ್ಗೇಯಕಾರರ ಮೂಲಕವೂ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.
ಮೈಸೂರಿನಂತೆ ಚಾಮರಾಜನಗರದಲ್ಲೂ ದಸರಾ ಮಹೋತ್ಸವ ಆಚರಣೆಯಾಗಬೇಕು ಎಂಬುದರಿಂದ ಹಿಡಿದು ಹಲವು ಬಗೆಯ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು ಎಂದು ಮೂಲಗಳು ಹೇಳಿವೆ.ಈ ಮಧ್ಯೆ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಮಾತ್ರ ಅದ್ಧೂರಿ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸಿರಲ್ಲದೆ ನಾಡಿನ ಜನ ಪ್ರವಾಹದಿಂದ ತತ್ತರಿಸುತ್ತಿರುವಾಗ,ಹಲವರು ಮನೆ ಮಠ ಕಳೆದುಕೊಂಡಿರುವಾಗ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವುದು ಸರಿಯಲ್ಲ ಎಂದು ಹೇಳಿದರು.
ಆದರೆ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ದಸರಾ ಆಚರಣೆ ಎಂದಿನಂತಿರಬೇಕು.ಸರಳ ದಸರಾ ಆಚರಣೆ ಎನ್ನುವ ಮೂಲಕ ಅದರ ಕಳೆಗುಂದಿಸಬಾರದು ಎಂದು ಒತ್ತಾಯಿಸಿದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅದಕ್ಕೆ ಒಪ್ಪಿಗೆ ನೀಡಿದರು.ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳು,ಪೋಲೀಸ್ ವರಿಷ್ಟಾಧಿಕಾರಿಗಳು,ಪ್ರಾದೇಶಿಕ ಆಯುಕ್ತರು,ಸಂಸದರಾದ ಶ್ರೀನಿವಾಸ ಪ್ರಸಾದ್,ಪ್ರತಾಪ್ ಸಿಂಹ,ಶಾಸಕರಾದ ಎ.ರಾಮದಾಸ್, ಎನ್.ಮಹೇಶ್ ,ಪುಟ್ಟರಂಗಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








