ಎಸ್.ನಾಗಣ್ಣ ಅವರ ಸಾಧನೆ ಶ್ಲಾಘನೀಯ.

ತುಮಕೂರು

    ತುಮಕೂರಿನ ಪ್ರಜಾಪ್ರಗತಿ ಪತ್ರಿಕೆಯನ್ನು ನಡೆಸುತ್ತಾ ಜನರ ಸಮಸ್ಯೆಗಳ ಹೆಚ್ಚಿನ ಗಮನ ಹರಿಸುವುದರ ಜೊತೆಗೆ ರೆಡ್ ಕ್ರಾಸ್ ಜಿಲ್ಲಾ ಘಟಕದ ಛೇರ್ಮನ್ ಆಗಿ ಇದೀಗ ರಾಜ್ಯ ಘಟಕದ ಛೇರ್ಮನ್ ಆಗಿ ಅವರು ಮಾಡುತ್ತಿರುವ ಸಾಧನೆ ಶ್ಲಾಘನೀಯ ಎಂದು ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.

    ನಗರದ ಎಪಿಎಂಸಿ ಆವರಣದಲ್ಲಿರುವ ಟಿಡಿಸಿಸಿಐ ಕಚೇರಿಯಲ್ಲಿ ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಅವರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಎಸ್.ನಾಗಣ್ಣ ಅವರು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಸಮಾಜದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಉತ್ಸುಕರಾಗಿ ಪಾಲ್ಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ತುಮಕೂರಿನಲ್ಲಿ ನಾಗಣ್ಣ ಅವರಿಗೆ ದೊರೆತಂತ ಸನ್ಮಾನಗಳು ಇನ್ನೊಬ್ಬರಿಗೆ ಸಿಗಲು ಸಾಧ್ಯವಾಗಿಲ್ಲ ಎಂದರು.

   ತುಮಕೂರು ಜಿಲ್ಲಾ ರೆಡ್ ಕ್ರಾಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ರೆಡ್ ಕ್ರಾಸ್ ಘಟಕದ ಏಳ್ಗೆಗೆ ಶ್ರಮಿಸಿ, ಉನ್ನತ ಮಟ್ಟಕ್ಕೇರಿಸುವಲ್ಲಿ ಬಹಳ ಶ್ರಮಪಟ್ಟಿದ್ದಾರೆ. ಆ ಶ್ರಮವೆ ಇಂದು ರಾಜ್ಯ ಘಟಕಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಲು ಕಾರಣವಾಗಿದೆ. ಇದೇ ರೀತಿ ಇನ್ನಷ್ಟು ಸಾಮಾಜಿಕ ಕಳಕಳಿಯುಳ್ಳ ಕೆಲಸಗಳನ್ನು ಮಾಡುವ ಮೂಲಕ ಹೆಚ್ಚಿನ ಹೆಸರು ಗಳಿಸಲಿ ಎಂದು ಆಶಿಸಿದರು.

    ಟಿಡಿಸಿಸಿಐ ಉಪಾಧ್ಯಕ್ಷ ಲೋಕೇಶ್ ಮಾತನಾಡಿ, ಎಸ್.ನಾಗಣ್ಣ ಎಂದರೆ ಇಡೀ ತುಮಕೂರಿಗೆ ಚಿರಪರಿಚಿತರು. ಅವರು ಶಿರಾದಿಂದ ತುಮಕೂರಿಗೆ ಬಂದು ಬಹಳ ಕಷ್ಟಕಾಲದಿಂದಲೂ ಅನೇಕ ಸಮಸ್ಯೆಗಳನ್ನು ಎದುರಿಸಿ, ನಂತರ ಪತ್ರಿಕೋದ್ಯಮದ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಇಂದಿಗೂ ಅವರ ಸಾಮಾಜಿಕ ಕಳಕಳಿಯಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಲಿದೆ. ಇವರ ಕೆಲಸಗಳು ಹೀಗೆ ಮುಂದುವರೆಯಲಿ ಎಂದು ಕೋರಿದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ನಾಗಣ್ಣ ಅವರು, ಈ ಹಿಂದೆ ಅಚ್ಚುಮೊಳೆ ಇದ್ದಾಗ ರಾತ್ರಿ 10 ಗಂಟೆ ಸಮಯದಲ್ಲಿ ಮುಖ್ಯವಾದ ಸುದ್ದಿ ಬಂದರೆ ಅದರಿಂದ ಜನರಿಗೆ ಉಪಯೋಗವಾಗುತ್ತದೆ ಎಂದು ಇಡೀ ರಾತ್ರಿ ಕಷ್ಟಬಿದ್ದು ಮೊಳೆಯನ್ನು ಜೋಡಿಸಿ ಮುದ್ರಣ ಮಾಡುತ್ತಿದ್ದೆವು. ಅಂದು ರಾತ್ರಿ ಅಲ್ಲಿಯೇ ಮಲಗುತ್ತಿದ್ದೆವು. ಅಂದಿನಿಂದ ಇಂದಿನವರೆಗೂ ಜನಪರವಾದ ವರದಿಗಳನ್ನು ಮಾಡುತ್ತಾ, ಜನರಿಗೆ ಅನುಕೂಲವಾಗುವಂತೆ ಮಾಡುತ್ತಿದ್ದೇವೆ. ಇದರಲ್ಲಿ ತುಂಬಾ ಜನರ ಶ್ರಮವಿದೆ. ಜೊತೆಗೆ ಪ್ರೋತ್ಸಾಹ ಬೆಂಬಲವಿದೆ. ಇದರಿಂದಲೇ ಇಂದು ಉನ್ನತ ಮಟ್ಟದಲ್ಲಿ ನಿಂತು ಮಾತನಾಡುತ್ತಿದ್ದೇನೆ ಎಂದರು.

   ನಮ್ಮ ಮನಸ್ಥಿತಿಯು ಆಸೆ ಆಕಾಂಕ್ಷೆಗಳಿಂದ ಕೂಡಿದ್ದಾಗ ಅದನ್ನು ಅದುಮಿಟ್ಟುಕೊಂಡು ಕೆಲಸ ಮಾಡಿದಾಗ ಮಾತ್ರ ನಾವು ಯಶಸ್ಸು ಕಾಣಲು ಸಾಧ್ಯ. ಅದೇ ಕೆಲಸ ನಾನು ಮಾಡಿಕೊಂಡು ಬಂದಿದ್ದೇನೆ. ಶ್ರೀಗಳ ಆಶೀರ್ವಾದೊಂದಿಗೆ ಇಂದು ನನ್ನ ಜೀವನ ಉತ್ತಮವಾಗಿದೆ. ನನ್ನ ಮನೆ, ವಾಹನ, ಓಡಾಟ ಎಂಬ ಕನಸು ನನಸಾಗಿದೆ. ಶ್ರೀಗಳ ಜನ್ಮದಿನದಂದೇ ನಾನು ರೆಡ್ ಕ್ರಾಸ್ ರಾಜ್ಯ ಘಟಕಕ್ಕೆ ಆಯ್ಕೆಯಾಗಿದ್ದೇನೆ. ಇದಕ್ಕೆ ಶ್ರೀಗಳ ಆಶೀರ್ವಾದ ಸದಾ ನನಗಿದೆ ಎಂಬುದನ್ನು ನೆನಪಿಸಿಕೊಂಡರು.

    ಸಮಾರಂಭದಲ್ಲಿ ನಿರ್ದೇಶಕರುಗಳಾದ ಚಂದ್ರಶೇಖರ್, ಪ್ರಕಾಶ್ ಮತ್ತಿತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಟಿಡಿಸಿಸಿ ಕಾರ್ಯದರ್ಶಿಗಳಾದ ಜಿ.ಜೆ.ಗಿರೀಶ್ ಸೇರಿದಂತೆ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link
Powered by Social Snap