ಶಾಸಕ ಎಸ್‍ಎಆರ್ ಮೊಮ್ಮಗನ ಕಾರು ಅಪಘಾತ

ವೇಗದ ಚಾಲನೆ ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಹಲ್ಲೆಗೆ ಯತ್ನಿಸಿ ಪುಂಡಾಟ

ದಾವಣಗೆರೆ:

    ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರನಾಥ್ ಮೊಮ್ಮಗನ ಇನ್ನೋವಾ ಕಾರ್ ಕಳೆದ ರಾತ್ರಿ ವಿದ್ಯುತ್ ಕಂಬ, ಮನೆಯೊಂದರ ಮುಂದಿನ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ನಗರದ ಹೊರ ವಲಯದ ಶಾಮನೂರು ಗ್ರಾಮದಲ್ಲಿ ಸಂಭವಿಸಿದೆ.

   ಶಾಸಕ ಎಸ್.ಎ.ರವೀಂದ್ರನಾಥ್ ಅವರ ಪುತ್ರಿ ಹಾಗೂ ಪಾಲಿಕೆ ಸದಸ್ಯೆಯು ಆಗಿರುವ ವೀಣಾ ನಂಜಯ್ಯನವರ ಮಗ ಅರುಣಕುಮಾರ್ ಪಾನ ಮತ್ತನಾಗಿ ಕಳೆದ ತಡರಾತ್ರಿ ಅತೀ ವೇಗವಾಗಿ ಇನ್ನೋವಾ ವಾಹನ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ನಂತರ ಮನೆಯೊಂದರ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ವಾಹನದ ಎಡಭಾಗದ ಡೋರ್ ಜಖಂಗೊಂಡಿದ್ದು, ವಿದ್ಯುತ್ ಕಂಬ ಸಹ ನೆಲಕ್ಕುರಳಿದೆ.

   ಘಟನೆಯಲ್ಲಿ ಮನೆ ಒಂದರ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗೆ ಅತಿ ವೇಗ, ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ಅರುಣಕುಮಾರ್‍ಗೆ ಗ್ರಾಮಸ್ಥರು ಪ್ರಶ್ನಿಸಿದರೆ, ಜನರ ಮೇಲೆಯೇ ಆತ ಹಲ್ಲೆಗೆ ಮುಂದಾಗಿ ಪುಂಡಾಟ ಮೆರೆದಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

   ಗ್ರಾಮಸ್ಥರೆಲ್ಲಾ ಒಗ್ಗಟ್ಟಾಗಿ ಅರುಣಕುಮಾರನಿಗೆ ದಬಾಯಿಸಿ ಇನ್ನೇನು ಧರ್ಮದೇಟು ನೀಡಬೇಕೆನ್ನುವಷ್ಟರಲ್ಲಿ ಆತನ ವಾಹನದಲ್ಲಿ ಬಿಜೆಪಿ ಧ್ವಜ, ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಗುರುತಿನ ಪತ್ರ, ಶಾಸಕ ಎಸ್.ಎ.ರವೀಂದ್ರನಾಥ್‍ರ ಪಾಸ್ ಪಾಸ್ ಪತ್ತೆಯಾಗಿದ್ದರಿಂದ ವಾಹನವನ್ನು ಅಲ್ಲಿಯೇ ಬಿಟ್ಟು ಹೋಗುವಂತೆ ಗ್ರಾಮಸ್ಥರು ತಾಕೀತು ಮಾಡಿದ್ದರಿಂದ ಆತ ಅಲ್ಲಿಂದ ಕಾಲು ಕಿತ್ತಿದ್ದಾನೆ.

    ಅಪಘಾತಕ್ಕೆ ಕಾರಣವಾದ ವಾಹನವನ್ನು ಸೋಮವಾರ ಬೆಳಿಗ್ಗೆ ತೆರವುಗೊಳಿಸಲು ಪೊಲೀಸರು ಶಾಮನೂರು ಗ್ರಾಮಕ್ಕೆ ಆಗಮಿಸಿದ್ದ ವೇಳೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದಲ್ಲದೆ, ಘಟನಾ ಸ್ಥಳಕ್ಕೆ ಶಾಸಕರು, ಅಪಘಾತಕ್ಕೆ ಕಾರಣನಾದ ಅರುಣಕುಮಾರ ಬರಬೇಕು. ಅಲ್ಲಿವರೆಗೂ ವಾಹನವನ್ನು ಕೊಂಡೊಯ್ಯಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು. ಹೀಗಾಗಿ ಪೊಲೀಸರು ಹಾಗೂ ಗ್ರಾಮಸ್ಥರ ಮಧ್ಯೆ ಕೆಲ ಕಾಲ ವಾಗ್ವಾದವೂ ನಡೆಯಿತು. ಕೊನೆಗೆ ಮನೆ ಮಾಲೀಕನ ಮನವೊಲಿಸಿದ ಪೊಲೀಸರು ಕಾರನ್ನು ಘಟನಾ ಸ್ಥಳದಿಂದ ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾದರು.ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link