ಸಡಗರದ ರಂಜಾನ್ ಆಚರಣೆ..!!

ಹರಿಹರ

      ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಬುಧವಾರ ಪವಿತ್ರ ರಂಜಾನ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ನಗರದ ಅಂಜುಮನ್ ಶಾಲೆ ಸಮೀಪದ ಈದ್ಗಾ ಮೈದಾನ ಅಹ್ಲೆ ಸುನ್ನತ್ ಜಮಾತ್ ಹಾಗೂ ಜೈಭೀಮನಗರ ಸಮೀಪದ ಈದ್ಗಾ ಮೈದಾನದಲ್ಲಿ ಅಹ್ಲೆ ಹದೀಸ್ ಜಮಾತ್‍ನವರು ಹಬ್ಬದ ಸಾಮೂಹಿಕ ಪ್ರಾರ್ಥನೆ ಪ್ರಕ್ರಿಯೆ ಪೊರೈಸಿದರು.

      ಪ್ರವಚನ ನೀಡಿದ ಮೌಲಾನಾರವರು, ದೇಹ, ಮನಸ್ಸು, ಆತ್ಮ ಹಾಗೂ ನಮ್ಮ ಆಸ್ತಿ, ಪಾಸ್ತಿಗಳನ್ನು ಶುದ್ಧೀಕರಿಸುವ ಪ್ರಕ್ರಿಯೆ ಪವಿತ್ರ ರಂಜಾನ್ ಮಾಸದಲ್ಲಿ ನಡೆಯುತ್ತದೆ. ಹೆಚ್ಚು ಸಂಚರಿಸಿದ ವಾಹನಗಳು ಸರ್ವಿಸ್ ಮಾಡಿದ ನಂತರ ಹೊಸ ಶಕ್ತಿ, ಹುಮ್ಮಸ್ಸು ಪಡೆಯುವಂತೆ ರಂಜಾನ್ ಉಪವಾಸ, ಉಪಾಸನೆ, ದಾನ, ಧರ್ಮ ಮಾಡಿದ ವ್ಯಕ್ತಿಯೂ ಪರಿಶುದ್ಧತೆಯನ್ನು ಪಡೆಯುತ್ತಾನೆ ಎಂದರು.

       ಹಸಿವು, ನೀರಿನ ದಾಹ, ಖುರ್‍ಆನ್ ಪಠಣ, ಐದು ಜಾಗರಾಣೆಗಳಿಂದ ಕೂಡಿದ ಈ ಮಾಸಾಚರಣೆ ಮೂಲಕ ಉಳ್ಳವರು ಬಡವರ ಸಂಕಷ್ಟವನ್ನು ಅರಿಯುತ್ತಾರೆ. ಧರ್ಮದ ಸಾರವನ್ನು ಅರಗಿಸಿಕೊಳ್ಳುತ್ತಾರೆ. ಇರುವ ಸಂಪತ್ತಿನ ಅನುಗುಣವಾಗಿ ಬಡವರು, ವಿಧವೆ, ನಿರ್ಗತಿಕರು, ನಿರಾಶ್ರಿತರಿಗೆ ದಾನ, ಧರ್ಮವನ್ನು ಮಾಡುವ ಮಾನವೀಯ ಗುಣಗಳನ್ನು ಪ್ರೇರೇಪಿಸುವುದು ಈ ಮಾಸದ ಉದ್ದೇಶವಾಗಿದೆ ಎಂದರು.

       ಇಸ್ಲಾಂ ಧರ್ಮ ಅತ್ಯಂತ ಸರಳ ಹಾಗೂ ವೈಜ್ಞಾನಿಕವಾದ ಧರ್ಮವಾಗಿದೆ. ಆರ್ಥಿಕ ಶಕ್ತಿ ಇದ್ದವರಿಗೆ ಮಾತ್ರ ಹಜ್ ಯಾತ್ರೆ ಕಡ್ಡಾಯಗೊಳಿಸಿದೆ. ದೇಹ ಹಾಗೂ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವರಿಗೆ ಸೃಷ್ಟಿಕರ್ತನ ಸಾಮಿಪ್ಯ ದೊರೆಯುತ್ತದೆ ಎಂದರು.

      ಮಳೆಗೆ ಪ್ರಾರ್ಥನೆ: ಮಳೆ, ಬೆಳೆ, ಸಮೃದ್ಧಿಗಾಗಿ ಎರಡೂ ಈದ್ಗಾ ಮೈದಾನಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಜೈಭೀಮನಗರ ಸಮೀಪದ ಈದ್ಗಾ ಮೈದಾನದ ಸಾಮೂಹಿಕ ಪ್ರಾರ್ಥನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರೂ ಭಾಗವಹಿಸಿದ್ದರು. ಮೋಡ ಮುಚ್ಚಿದ ವಾತಾವರಣದಿಂದಾಗಿ ಹೆಚ್ಚಿನ ಬಿಸಿಲಿನ ಶಾಖದ ತೊಂದರೆ ಇರಲಿಲ್ಲ.

      ಎರಡೂ ಈದ್ಗಾ ಮೈದಾನಗಳಿಗೆ ಶಾಸಕ ಎಸ್.ರಾಮಪ್ಪ ಹಾಗೂ ಇತರೆ ಜನಪ್ರತಿನಿಧಿಗಳು ಭೇಟಿ ನೀಡಿ ಶೂಭಾಷಯ ಕೋರಿದರು. ಅಂಜುಮನ್ ಸಂಸ್ಥೆ ಪದಾಧಿಕಾರಿಗಳು, ನಗರಸಭೆ ಸದಸ್ಯರು, ಮುಸ್ಲಿಂ ಸಮಾಜದ ಮುಖಂಡರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link