ಬೆಂಗಳೂರು
ಸದಾಶಿವ ಆಯೋಗದ ವರದಿಯ ಬಗ್ಗೆ ಸಮಗ್ರ ಚರ್ಚೆ ಆಗಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಪ್ರತಿಪಾದಿಸಿದ್ದಾರೆ.ನಗರದ ಅರಮನೆ ಮೈದಾನದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಹಾಗೂ ಕೈಪಿಡಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದ ಅವರು ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ನಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ದಲಿತರ ಬಗ್ಗೆ ಅಧ್ಯಯನ ನಡೆಸಲು ಸದಾಶಿವ ಆಯೋಗ ರಚಿಸಲಾಗಿತ್ತು. ಈ ಆಯೋಗ ವರದಿಯನ್ನೂ ನೀಡಿದೆ. ಈ ವರದಿ ಸರಕಾರದ ಮಟ್ಟದಲ್ಲಿ ಸಮಗ್ರವಾಗಿ ಚರ್ಚೆಯಾಗಬೇಕಿದೆ. ಈ ವರದಿ ಅನುಷ್ಠಾನಕ್ಕೆ ನಮ್ಮ ವಿರೋಧವಿಲ್ಲ. ನಾವೆಲ್ಲರೂ ಈ ವರದಿ ಜಾರಿಗೆ ಬರಬೇಕೆಂದು ಬಯಸುತ್ತೇವೆ. ಈ ನಿಟ್ಟಿನಲ್ಲಿ ಸರಕಾರದ ಹಂತದಲ್ಲಿ ಶೀಘ್ರವೇ ಚರ್ಚೆಯಾಗಬೇಕು ಎಂದು ಹೇಳಿದರು.
ಶೋಷಿತ ಸಮುದಾಯಗಳು ತಮ್ಮ ಹಕ್ಕು ಕೇಳಲು ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಅನುವು ಮಾಡಿಕೊಟ್ಟಿದ್ದಾರೆ. ಕಳೆದ ಹಾಗೂ ಪ್ರಸ್ತುತ ಸರಕಾರ ಶೋಷಿತ ಸಮುದಾಯದ ಅಭಿವೃದ್ಧಿಗೆ ಮೊದಲ ಬಾರಿಗೆ ಜನಸಂಖ್ಯೆ ಆಧಾರದ ಮೇಲೆ ಶೇ. 24.1 ಹಣವನ್ನು ಮೀಸಲಿಟ್ಟಿದ್ದೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ನಿಗಮ ಹಾಗೂ ಆದಿ ಜಾಂಬವ ನಿಗಮಕ್ಕೆ ತಲಾ 1 ಸಾವಿರ ಕೋಟಿ ರು. ಮೀಸಲಿಡಲು ಕೇಳಿರುವ ಬೇಡಿಕೆ ಸೂಕ್ತವಾಗಿದೆ ಎಂದರು.
ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಆದಿ ಜಾಂಬವ ಸಮುದಾಯ ಹಿಂದುಳಿದಿರುವ ಕಾರಣಕ್ಕಾಗಿ ಈ ಸಮುದಾಯಕ್ಕೆ ಪ್ರತ್ಯೇಕವಾಗಿ ನಿಗಮ ನಿರ್ಮಿಸಲು ಪ್ರಸ್ತಾವಕ್ಕೆ ಪ್ರತಿಯೊಬ್ಬರು ಒಪ್ಪಿದ್ದರು.ನಮಗೆ ಮೀಸಲಿಟ್ಟ ಹಣ ಇತರರ ಪಾಲಾಗುವುದಕ್ಕಿಂತ ಈ ಸಮುದಾಯಗಳಿಗೆ ಸೂಕ್ತ ರೀತಿಯಲ್ಲಿ ಬಳಕೆ ಯಾಗಬೇಕಿದ್ದರೆ ಪ್ರತ್ಯೇಕ ನಿಗಮದ ಅನಿವಾರ್ಯತೆ ಇತ್ತು. ಇಂದು ಇದು ಸಾಕಾರಗೊಂಡಿದೆ. ಈ ನಿಗಮ ಫಲಾನುಭವಿಗಳಿಗೆ ಪ್ರಯೋಜನವಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ,ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಇತರೆ ನಾಯಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
