ದಾವಣಗೆರೆ
ಸಾಧನೆ ಬರೀ ಒಂದೇ ಸತಿಗೆ ಮುಗಿದು ಅಕಸ್ಮಿಕ ಆಗಬಾರದು, ಅದು ವಿದ್ಯಾರ್ಥಿ ಜೀವನದುದ್ದಕ್ಕೂ ಮುಂದುವರೆದು ಹೆಚ್ಚು, ಹೆಚ್ಚು ಅಂಕ ಗಳಿಸಲು ಪ್ರೇರಣೆಯಾಗಬೇಕೆಂದು ಹಿರಿಯ ಮನೋವೈದ್ಯ ಡಾ| ಸಿ.ಆರ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ನಗರದ ರೇಣುಕಾ ಮಂದಿರದಲ್ಲಿ ಭಾನುವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯ ಪ್ರಥಮ ಭಾಷೆ ಕನ್ನಡದಲ್ಲಿ 125 ಅಂಕ ಪಡೆದ ಮಕ್ಕಳಿಗೆ ‘ಕನ್ನಡ ಕೌಸ್ತುಭ’ ಒಟ್ಟು 625ಕ್ಕೆ 600ಕ್ಕೂ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ‘ಸರಸ್ವತಿ ಪುರಸ್ಕಾರ’ ಹಾಗೂ ಸೆಂಟ್ರಲ್ ಸಿಲೆಬಸ್‍ನ ಒಟ್ಟು 500 ಅಂಕಗಳಿಗೆ 480ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ‘ಜ್ಞಾನಸಿರಿ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಇಂದು ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿ, ಪ್ರಶಸ್ತಿ ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳು, ಸಾಧನೆಯನ್ನು ಇಲ್ಲಿಗೆ ನಿಲ್ಲಿಸದೇ, ಮುಂದಿನ ಪಿಯುಸಿ, ಪದವಿ ತರಗತಿಗಳಲ್ಲೂ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆ, ರಾಜ್ಯದ ಟಾಪರ್‍ಗಳಾಗಿ ಹೊರಹೊಮ್ಮುವ ವರೆಗೂ ಮುಂದುವರೆಸಬೇಕು ಎಂದು ಕರೆ ನೀಡಿದರು.
ಪ್ರಸ್ತುತ ಎಲ್ಲರೂ ಟ್ರಿಪಲ್ ಎಮ್ ಅಂದರೆ, ಮಾಕ್ರ್ಸ್, ಮನಿ, ಮೆಟಿರಿಯಲ್ಸ್ ಹಿಂದೆ ಬೆನ್ನು ಬಿದ್ದಿರುವುದು ಒಳ್ಳೆಯದಲ್ಲ. ಆದರೆ, ವರ್ಷದಿಂದ ವರ್ಷಕ್ಕೆ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ, ಸ್ಪರ್ಧೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂಕ ಗಳಿಕೆಯು ಅನಿವಾರ್ಯವೂ ಆಗಿದೆ ಎಂದ ಅವರು, ದೇಶದಲ್ಲಿ ಇರುವ 60 ಸಾವಿರ ಎಂಬಿಬಿಎಸ್ ಸೀಟ್‍ಗಳಿಗೆ ಪ್ರತಿ ವರ್ಷ 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಿದ್ದಾರೆ. ಹೀಗಾಗಿ ಸ್ಪರ್ಧೆ, ಪೈಪೋಟಿ ಅನಿವಾರ್ಯ ಆಗಿರುವ ಕಾರಣ ವಿದ್ಯಾರ್ಥಿಗಳ ಯೋಗ್ಯತೆಯನ್ನು ಅಂಕ ಗಳಿಕೆಯ ಆಧಾರದ ಮೇಲೆಯೇ ಅಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕನಿಷ್ಠ ಪದವಿ ತರಗತಿಯ ವರೆಗಾದರೂ ಶಿಕ್ಷಣ ಪಡೆದು ಕೌಶಲ್ಯ ವೃದ್ಧಿಸಿಕೊಂಡು ಉದ್ಯೋಗ ಕಂಡುಕೊಳ್ಳಬೇಕು. ದೇಶದಲ್ಲೂ ಇಂದಿಗೂ ಶೇ.30 ರಷ್ಟು ಬಾಲ್ಯ ವಿವಾಹ ನಡೆಯುತ್ತಿವೆ. ಇದು ಶಿಕ್ಷಾರ್ಹ ಅಪರಾಧ ಆಗಿರುವುದರಿಂದ ಹೆಣ್ಣು ಮಕ್ಕಳಿಗೆ ಪದವಿ ವರೆಗಾದರೂ ಶಿಕ್ಷಣ ಕೊಡಿಸಿ ಮದುವೆ ಮಾಡಿಕೊಡಬೇಕೆಂದು ಸಲಹೆ ನೀಡಿದರು.
ಮಕ್ಕಳು ವಿದ್ಯಾವಂತರಾಗುವುದರ ಜೊತೆಗೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಟೋಪಿ ಹಾಕುವ ಜನರೇ ಹೆಚ್ಚಿರುವ ಸಂದರ್ಭದಲ್ಲಿ ಯಾರಿಗೂ ಮೋಸ ಮಾಡದೇ, ಜೀವನ ರೂಪಿಸಿಕೊಂಡು ಸಂಸಾರ ನಿಭಾಯಿಸುವ ಬುದ್ಧಿವಂತಿಕೆಯನ್ನು ರೂಢಿಸಿಕೊಳ್ಳಬೇಕೆಂದ ಅವರು, ತಂದೆ-ತಾಯಿ ಮಕ್ಕಳಿಗೆ ಸಾಮಾನ್ಯ ಜ್ಞಾನ ಹೇಳಿ ಕೊಡುವುದರ ಜೊತೆಗೆ ವ್ಯವಹಾರಿಕ ಜ್ಞಾನವನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಇಂದು ಸಾಮಾಜಿಕ ಹಾಗೂ ಕೌಟುಂಬಿಕ ಸಂಬಂಧಗಳು ಹಳಸು ಹೋಗುತ್ತಿರುವ ಸಂದರ್ಭದಲ್ಲಿ ಯಾರನ್ನು ನಂಬಬೇಕೆಂಬ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ಇತಿಮಿತಿ ಇಲ್ಲದೇ ಆಹಾರವನ್ನು ಸೇವಿಸುತ್ತ್ತಿರುವ ಕಾರಣ ಪ್ರಸ್ತುತ 100 ಜನರಲ್ಲಿ 70 ಮಂದಿ ಅನ್ಯಾರೋಗಕ್ಕೆ ತುತ್ತಾಗಿದ್ದಾರೆ. ಆದ್ದರಿಂದ ಸಿಕ್ಕಿದೆಲ್ಲವನ್ನೂ ತಿನ್ನುವ ಬದಲು ಹಿತ, ಮಿತವಾಗಿ ತಿಂದು ಆರೋಗ್ಯವಂತರಾಗಿರ ಬೇಕೆಂದು ಸಲಹೆ ನೀಡಿದರು.
ಪ್ರಸ್ತುತ ಮಕ್ಕಳ ಆಟ ಆಡುವುದಕ್ಕಿಂತ ಮೊಬೈಲ್, ವಿಡಿಯೋ ಗೇಮ್, ಟಿಕ್‍ಟಾಕ್‍ಗಳಿಗೆ ಸೀಮಿತವಾಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಯಾವುದೇ ಕಾರಣಕ್ಕೂ 12ನೇ ವಯಸ್ಸಿನ ವರೆಗೂ ಮಕ್ಕಳ ಕೈಯಲ್ಲಿ ತಂದೆ-ತಾಯಿ ಮೊಬೈಲ್ ಕೊಡಬಾರದು. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು. ತಾಯಂದಿರು, ಅಜ್ಜಿಯಂದಿರು ಸಿರಿಯಲ್ ವ್ಯಸನಿಗಳಾಗಬಾರದು ಎಂದರು.
ಕಲಾಕುಂಚ ಸಂಸ್ಥೆ ಸಂಸ್ಥಾಪಕ ಗಣೇಶ್ ಶೆಣೈ ಪ್ರಾಸ್ತಾವಿಕ ಮಾತನಾಡಿದರು.ಸಂಸ್ಥೆಯ ಅಧ್ಯಕ್ಷ ಕೆ.ಎಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಸಾಹಿತಿ ಡಾ.ನಾ.ಸೋಮೇಶ್ವರ, ಕವಯತ್ರಿ ಎ.ಸಿ.ಶಶಿಕಲಾ ಶಂಕರಮೂರ್ತಿ, ಎಸ್.ಎಸ್.ಹಿರೇಮಠ, ಹೇಮಾ ಶಾಂತಪ್ಪ ಪೂಜಾರಿ ಉಪಸ್ಥಿತರಿದ್ದರು.