ಸಾಧನೆಯ ಹಾದಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ..!!

ತುಮಕೂರು

ವಿಶೇಷ ವರದಿ : ಸಾ.ಚಿ.ರಾಜಕುಮಾರ್

     ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶಗಳು ಸಿಕ್ಕಿದ್ದರೆ ಉತ್ತಮ ಸಾಧನೆ ಮಾಡಬಲ್ಲರು ಎಂಬುದಕ್ಕೆ ಕಳೆದ ಸೋಮವಾರ ಪ್ರಕಟವಾದ 10ನೇ ತರಗತಿ ಸಿಬಿಎಸ್‍ಸಿ ಪರೀಕ್ಷಾ ಫಲಿತಾಂಶವೇ ಸಾಕ್ಷಿ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಾಯಿತಿಮ್ಮನಹಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾನೆ.

     ಈತನ ಕುಟುಂಬವೇನೂ ನಗರ ಪ್ರದೇಶದಲ್ಲಿ ವಾಸವಿಲ್ಲ. ರೈತ ಕುಟುಂಬದಿಂದ ಬೆಳೆದುಬಂದಿರುವ ಈ ಪ್ರತಿಭೆಯ ಸಾಧನೆ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಇದೊಂದು ಉದಾಹರಣೆ ಮಾತ್ರ. ಇಂತಹ ಹಲವು ಪ್ರತಿಭೆಗಳು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಅಂತಹವರಿಗೆ ಒಂದಷ್ಟು ಸೌಲಭ್ಯ, ಅವಕಾಶಗಳು ದೊರಕಿದರೆ ನಗರ ಪ್ರದೇಶದವರಷ್ಟೇ ಉತ್ತಮ ಸಾಧನೆ ಮಾಡಬಲ್ಲರು.

     ಗ್ರಾಮೀಣ ಪ್ರದೇಶದ, ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ ಎಂದು ಹಂಗಿಸುವವರು ಇದ್ದಾರೆ. ಇಂತಹ ಮನಸ್ಥಿತಿಗಳಿಂದಾಗಿಯೇ ಸರ್ಕಾರಿ ಶಾಲೆಗಳೆಂದರೆ ಕೆಲವರಿಗೆ ಅಸಡ್ಡೆ. ಆದರೆ ಕಳೆದ ಎರಡು ವರ್ಷಗಳಿಂದ ಹೊರ ಬರುತ್ತಿರುವ ಪರೀಕ್ಷಾ ಫಲಿತಾಂಶ ಟೀಕಾಕಾರರಿಗೆ ಉತ್ತರ ನೀಡುವಂತಹ ವಾತಾವರಣ ಮೂಡಿಸುತ್ತಿದೆ.

      ಸರ್ಕಾರಿ ಶಾಲೆಗಳ ಮಕ್ಕಳು ವಿಶೇಷವಾಗಿ ಗ್ರಾಮೀಣ ಸಮುದಾಯದ ವಿದ್ಯಾರ್ಥಿಗಳು ನಗರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಗೆ ಇಳಿದಿದ್ದಾರೆ. ಒಟ್ಟಾರೆ ಶೇಕಡಾವಾರು ಫಲಿತಾಂಶದಲ್ಲಿ ಕುಸಿತದ ಆತಂಕ ಎದುರಾದರೂ, ಗ್ರಾಮೀಣ ಪ್ರದೇಶಗಳ ಕನ್ನಡ ಶಾಲೆಗಳ ಮಕ್ಕಳ ಸಾಧನೆಯ ಫಲಿತಾಂಶ ಕನವರಿಕೆಯಿಂದ ಹೊರಬರುವಂತೆ ಮಾಡಿದೆ.

ಧಿಕಾರದಲ್ಲಿರುವ ಅನೇಕರು ಗ್ರಾಮೀಣ ಪ್ರದೇಶದಿಂದ ಬಂದವರೆ. ಇವರೆಲ್ಲ ಅಲ್ಲಿನ ಕನ್ನಡ ಮುರುಕಲು ಶಾಲೆಯಲ್ಲಿ ಕಲಿತವರೆ. ಇಷ್ಟಾದರೂ ಅವರಲ್ಲಿ ಗ್ರಾಮೀಣ ಕನ್ನಡ ಶಾಲೆಗಳ ಬಗ್ಗೆ ಪ್ರೀತಿ ಹುಟ್ಟುತ್ತಿಲ್ಲ. ತಮ್ಮ ಮಕ್ಕಳು ಅಪ್ಪಿತಪ್ಪಿಯೂ ಅತ್ತ ಸುಳಿಯದಂತೆ ನೋಡಿಕೊಳ್ಳುತ್ತಾರೆ. ಅಧಿಕಾರಿಗಳಲ್ಲಿ ಮಾತ್ರವೇ ಈ ಮನಸ್ಥಿತಿ ಇಲ್ಲ. ಒಬ್ಬ ಸರ್ಕಾರಿ ಕೆಲಸದಲ್ಲಿರುವ ಅಥವಾ ಬೇರಾವುದೇ ನೌಕರಿಯಲ್ಲಿರುವ ವ್ಯಕ್ತಿಯಲ್ಲಿಯೂ ಇದೇ ಮನೋಭಾವವಿದೆ. ಗ್ರಾಮೀಣ ಶಾಲೆಗಳಲ್ಲಿ ನಮ್ಮ ಮಕ್ಕಳು ಓದುವುದು ಬೇಡ ಎನ್ನುವವರೇ ಹೆಚ್ಚು.

      ಗ್ರಾಮೀಣ ಕನ್ನಡ ಶಾಲೆಗಳಲ್ಲಿ ಓದಿ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ಅಂದಿನ ಗ್ರಹಿಕೆಯನ್ನು ಇಂದಿಗೂ ಮರೆತಿಲ್ಲ. ನಗರ ಪ್ರದೇಶದ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು. ಆದರೆ ಮೂಲಶಿಕ್ಷಣವನ್ನು ಜ್ಞಾಪಿಸಿಕೊಳ್ಳುವವರು, ಸಂದರ್ಭ ಬಂದಾಗ ಅದನ್ನು ಹೊರ ಹಾಕುವವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೆ. ವ್ಯಾಕರಣ, ಸಂಧಿ-ಸಮಾಸ, ಅಲ್ಪಪ್ರಾಣ, ಮಹಾಪ್ರಾಣ ಇತ್ಯಾದಿ ಕಾಗುಣಿತ ವಿಷಯಗಳನ್ನು ಗ್ರಾಮೀಣ ವಿದ್ಯಾರ್ಥಿಗಳು ಚನ್ನಾಗಿ ಬಲ್ಲವರಿದ್ದಾರೆ. ಎಲ್ಲಿ ಹೋದರೂ ಸ್ಪಷ್ಟವಾಗಿ ಉಚ್ಚರಿಸುತ್ತಾರೆ.

      ಇದಕ್ಕೊಂದು ಉದಾಹರಣೆ ಕೊಡುವುದಾದರೆ ವಿಧಾನಸಭೆಯಲ್ಲಿ ಅಧಿವೇಶನ ನಡೆಯುತ್ತಿರುವಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನ ಸಚಿವ-ಶಾಸಕ ಸಹದ್ಯೋಗಿಗಳೊಂದಿಗೆ ಸಂಧಿ-ಸಮಾಸ, ಅಲ್ಪಪ್ರಾಣ, ಮಹಾಪ್ರಾಣದ ಚರ್ಚೆ ಆರಂಭಿಸಿದರು. ಈ ವಿಷಯ ಅದೆಷ್ಟೋ ಶಾಸಕರು ಸಚಿವರಿಗೆ ಮರೆತೆ ಹೋಗಿತ್ತು. ಅದನ್ನು ಸಿದ್ದರಾಮಯ್ಯ ಜ್ಞಾಪಿಸಿದರು. ಅಲ್ಲಿದ್ದವರಿಗೆ ವ್ಯಾಕರಣದ ಪಾಠ ಮಾಡಿದರು.

     ಟಿವಿಗಳಲ್ಲಿ ಇದನ್ನು ನೋಡಿದ ಜನ ಸಿದ್ದರಾಮಯ್ಯ ಅವರಲ್ಲಿರುವ ಕನ್ನಡ ವ್ಯಾಕರಣ ಗ್ರಹಿಕೆಗೆ ತಲೆದೂಗಿದರು. ಇಂತಹ ಅನೇಕ ಪ್ರಸಂಗಗಳು ನಿತ್ಯ ಜೀವನದಲ್ಲಿ ಎದುರಾಗುತ್ತವೆ. ಅವುಗಳನ್ನು ನೋಡಿ ಕೆಲವರು ಆಶ್ಚರ್ಯಪಡುತ್ತಾರೆ. ಗ್ರಾಮೀಣ ಶಾಲೆಗಳಲ್ಲಿ ಓದಿ ಮುಂದೆ ಬಂದವರು ಧೈರ್ಯದಿಂದ ಉತ್ತರಿಸುತ್ತಾರೆ. ಶೈಕ್ಷಣಿಕ ಚಟುವಟಿಕೆಗೆ ಮಾತ್ರವೇ ಅವರು ಸೀಮಿತವಲ್ಲ. ಅದರಾಚೆಗಿನ ಬದುಕಿನತ್ತಲೂ ವ್ಯವಹರಿಸುವ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಅಂತಹ ವಾತಾವರಣ ಅವರಿಗೆ ಸಿಗಬೇಕಷ್ಟೆ. ದುರಂತವೆಂದರೆ ಕನ್ನಡ ಶಾಲೆಗಳಲ್ಲಿ ಕಲಿಯುವ ಮಕ್ಕಳನ್ನು, ಗ್ರಾಮೀಣ ಪ್ರದೇಶದ ಶಾಲೆಗಳನ್ನು ತಾತ್ಸಾರದಿಂದ ನೋಡುವ ಮನಸ್ಸುಗಳು ಬದಲಾಗಬೇಕಷ್ಟೆ.

      ಕನ್ನಡ ಶಾಲೆಗಳ ಬಗ್ಗೆ ಅಸಡ್ಡೆ ಹೊಂದಲು ಕಾರಣಗಳೂ ಇವೆ. ಒಂದು ಹಂತದಲ್ಲಿ ಶಾಲಾ ಶಿಕ್ಷಕರು ತಮ್ಮ ದೈನಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ಹೊರತಾದ ವ್ಯವಹಾರಗಳಲ್ಲಿ ತೊಡಗಿಸಿಕೊಂಡರು. ಅದೆಷ್ಟೋ ಶಿಕ್ಷಕರು ಬಡ್ಡಿ ವ್ಯವಹಾರದಲ್ಲಿ ಮುಳುಗಿದರು. ತಮ್ಮ ವೈಯಕ್ತಿಕ ಬದುಕು, ವ್ಯವಹಾರಗಳಿಗೆ ಹೆಚ್ಚು ಆದ್ಯತೆ ಕೊಟ್ಟಂತೆಲ್ಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗತೊಡಗಿತು. ಇದೇ ಸಮಯಕ್ಕೆ ಖಾಸಗಿ ಕಾನ್ವೆಂಟ್‍ಗಳು ತಲೆ ಎತ್ತಿದವು.

       ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಕಾನ್ವೆಂಟ್ ಸಂಸ್ಕøತಿ ಕ್ರಮೇಣ ಹೋಬಳಿ ಮಟ್ಟಕ್ಕೂ ದಾಂಗುಡಿ ಇಟ್ಟವು. ಸರ್ಕಾರಿ ಶಾಲೆಗಳ ಬಗ್ಗೆ, ಅಲ್ಲಿನ ಶಿಕ್ಷಕರ ನಡವಳಿಕೆಗಳ ಬಗ್ಗೆ ಬೇಸತ್ತಿದ್ದ ಪೋಷಕ ವರ್ಗ ಕ್ರಮೇಣ ತಮ್ಮ ಮಕ್ಕಳನ್ನು ಹೊಸ ಹಸನಾದ ಕಾನ್ವೆಂಟ್ ಶಾಲೆಗಳಿಗೆ ದಾಖಲಿಸಲು ಪ್ರಾರಂಭಿಸಿದರು. ಇದೊಂದು ಕಾಲಘಟ್ಟ.

     ಈ ಕಾಲಘಟ್ಟ ಇನ್ನೂ ಮುಂದುವರೆದಿದೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಸರ್ಕಾರಿ ಶಾಲೆಗಳು ತಮ್ಮ ಗುಣಾತ್ಮಕತೆ ಕಾಯ್ದುಕೊಂಡು ಫಲಿತಾಂಶದಲ್ಲಿ ಉತ್ತಮ ಸಾಧನೆ ಕಾಯ್ದುಕೊಳ್ಳುತ್ತಿರುವುದು ಅಚ್ಚರಿಯಷ್ಟೇ ಅಲ್ಲ, ಸರ್ಕಾರಿ ಶಾಲೆಗಳ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಿದ್ದವರಲ್ಲಿ ಹೊಸದೊಂದು ಆಶಾಭಾವ ಮೂಡಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದ್ದ ಈ ಕಾಲಘಟ್ಟದಲ್ಲಿ ಉತ್ತಮ ಫಲಿತಾಂಶ ಹೊಸ ಭರವಸೆಗೆ ನಾಂದಿ ಹಾಡಿದೆ.

     ಈ ವರ್ಷದ ಫಲಿತಾಂಶವನ್ನೊಮ್ಮೆ ಗಮನಿಸಿದರೆ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಸರ್ಕಾರಿ ಪ್ರೌಢಶಾಲೆಗಳು ಉತ್ತಮ ಪ್ರಗತಿ ಸಾಧಿಸಿರುವುದು, ಯಾವುದೇ ಸರ್ಕಾರಿ ಶಾಲೆಯಲ್ಲಿ ಶೂನ್ಯ ಫಲಿತಾಂಶ ಬಾರದೇ ಇರುವುದು ಹರ್ಷದಾಯಕ. ಇದು ಅಧಿಕಾರಿಗಳು ಮತ್ತು ಶಿಕ್ಷಕರ ವಲಯದಲ್ಲಿ ಹೊಸ ಹುರುಪು ಮೂಡಿಸಿದೆ. ಒಟ್ಟಾರೆ ಶೇಕಡಾವಾರು ಫಲಿತಾಂಶದಲ್ಲಿ ಗಣನೀಯ ಸಾಧನೆ ಇಲ್ಲದೆ ಹೋದರೂ ಸರ್ಕಾರಿ ಶಾಲೆಗಳ, ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಇವರಿಗೆಲ್ಲ ತೃಪ್ತಿ ತಂದಿರಲಿಕ್ಕೆ ಸಾಧ್ಯ.

        ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ರಾಜ್ಯಮಟ್ಟದ ಒಟ್ಟಾರೆ ಫಲಿತಾಂಶವನ್ನು ನೋಡಿದರೆ 593 ಸರ್ಕಾರಿ ಪ್ರೌಢಶಾಲೆಗಳು ಶೇಕಡಾ 100ರಷ್ಟು ಫಲಿತಾಂಶ ಪಡೆದುಕೊಂಡಿವೆ. ಶೇಕಡಾ 77.84ರಷ್ಟು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ 102 ಸರ್ಕಾರಿ ಶಾಲೆಗಳು ಶೇಕಡಾ 100ರಷ್ಟು ಫಲಿತಾಂಶ ಪಡೆದಿದ್ದವು. ಈ ಬಾರಿ 593ಕ್ಕೆ ಏರಿಕೆಯಾಗಿರುವುದು ಹುರುಪು ತಂದಿದೆ.

       ಅನುದಾನಿತ ಶಾಲೆಗಳು ಶೇಕಡಾ 77.21ರಷ್ಟು ಫಲಿತಾಂಶ ಪಡೆದುಕೊಂಡಿವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇಕಡಾ 76.76ರಷ್ಟು ಫಲಿತಾಂಶ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಶೇಕಡಾ 2ರಷ್ಟು ಫಲಿತಾಂಶದಲ್ಲಿ ಹೆಚ್ಚಳ ಕಂಡು ಬಂದಿದೆ. ಆದರೆ ನಗರಪ್ರದೇಶದ ಫಲಿತಾಂಶದಲ್ಲಿ ಈ ಬಾರಿ ಏರಿಕೆಯಾಗಿರುವುದು ಶೇಕಡಾ 1ರಷ್ಟು ಮಾತ್ರ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link