ಚಿತ್ರದುರ್ಗ:
ರಾಜ್ಯದಲ್ಲಿ ಬಿಜೆಪಿ.ಗಟ್ಟಿಯಾಗಿ ಎದುರಾಳಿ ಪಕ್ಷಗಳನ್ನು ಎದುರಿಸಬೇಕಾದರೆ ಸದಸ್ಯತ್ವ ಅಭಿಯಾನವನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಬಿಜೆಪಿ.ರಾಜ್ಯ ಉಪಾಧ್ಯಕ್ಷ ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಬಿಜೆಪಿ. ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಶ್ಯಾಂಪ್ರಸಾದ್ ಮುಖರ್ಜಿರವರ ಹುಟ್ಟುಹಬ್ಬದ ಅಂಗವಾಗಿ 45 ದಿನಗಳ ಕಾಲ ನಡೆಯುವ ಸದಸ್ಯತ್ವ ಅಭಿಯಾನಕ್ಕೆ ಜಿಲ್ಲೆಯಲ್ಲಿ ಈ ಬಾರಿ ಒಂದು ಲಕ್ಷ ಗುರಿಯಿದೆ. ರಾಜ್ಯದಲ್ಲಿ ಐವತ್ತು ಲಕ್ಷ ಸದಸ್ಯರನ್ನು ನೊಂದಾವಣೆ ಮಾಡಬೇಕೆಂದು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್‍ಷಾ ಸೂಚಿಸಿದ್ದಾರೆ. ಬೇರೆ ಪಕ್ಷಗಳಿಗೆ ರಾಜಕಾರಣವೇ ಮುಖ್ಯ. ನಮಗೆ ಹಿಂದುತ್ವ, ದೇಶ, ರಾಷ್ಟ್ರ ಮುಖ್ಯವಾಗಿರುವುದರಿಂದ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚು ಸದಸ್ಯರನ್ನು ನೊಂದಣಿ ಮಾಡಿಸಿ ಪಕ್ಷವನ್ನು ಬಲಪಡಿಸಿ ಎಂದು ವಿನಂತಿಸಿದರು.
ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ಪಕ್ಷಕ್ಕೆ ಶೇ.51 ರಷ್ಟು ಮತಸಿಕ್ಕಿದೆ. ಮುಂದಿನ ದಿನಗಳಲ್ಲಿ ಹೆಚ್ಚಾಗಬೇಕು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಮ್ಮ ಪಕ್ಷ 25 ಸ್ಥಾನಗಳನ್ನು ಗೆದ್ದಿದೆ ಎಂದರೆ ಅದಕ್ಕೆ ಸದಸ್ಯತ್ವವೇ ಕಾರಣ. ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವಂತೆ ಬಿಜೆಪಿ.ಕೆಲಸ ದೇಶದ ಕೆಲಸ, ರಾಷ್ಟ್ರದ ಕೆಲಸ ಎಂದು ತಿಳಿದುಕೊಂಡು ಪಕ್ಷ ಸಂಘಟನೆಗಾಗಿ ಶ್ರಮಿಸಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಬಿ.ಶ್ರೀರಾಮುಲು ಎಲ್ಲಾ ವರ್ಗಕ್ಕೂ ಒಳ್ಳೆಯದಾಗಬೇಕೆಂದರೆ ಬಿಜೆಪಿ.ಯಿಂದ ಮಾತ್ರ ಸಾಧ್ಯ.
ಜೆಡಿಎಸ್.ಕಾಂಗ್ರೆಸ್ ರಾಜ್ಯದಲ್ಲಿ ಬೇಡವೆ ಬೇಡ ಎಂದು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದೇವೆ. ಮೋದಿ ಅಲೆ, ಕಾರ್ಯಕರ್ತರ ಶಕ್ತಿ, ಸದಸ್ಯತ್ವ ಅಭಿಯಾನದಿಂದ ಪಕ್ಷಕ್ಕೆ ಬಲ ಬರುವುದರಿಂದ ನರೇಂದ್ರಮೋದಿ ಇನ್ನು ಮೂವತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿರಲಿ ಅದಕ್ಕಾಗಿ ಅನೇಕ ಜಾತಿಗಳನ್ನು ಒಂದು ಮಾಡಿಕೊಂಡು ಪಕ್ಷ ಹೋರಾಡುತ್ತಿದೆ ಎಂದು ಹೇಳಿದರು.
ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರುಗಳನ್ನು ಹೊಂದಿರುವ ಪಕ್ಷ ಯಾವುದಾದರೂ ಇದೆ ಎನ್ನುವುದಾದರೆ ಅದು ಬಿಜೆಪಿ. ಮಾತ್ರ. ಅದಕ್ಕಾಗಿ ಈ ಬಾರಿಯ ಸದಸ್ಯತ್ವ ಅಭಿಯಾನದಲ್ಲಿ ಮಹಿಳೆಯರು ಪುರುಷ ಕಾರ್ಯಕರ್ತರಿಗಿಂತ ಹೆಚ್ಚು ಸದಸ್ಯತ್ವ ನೊಂದಣಿ ಮಾಡಿಸಬೇಕು. ದೇಶದ ಪ್ರತಿ ಮನೆಗೂ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಅಡುಗೆ ಅನಿಲ, ವಸತಿ ರಹಿತರಿಗೆ ಮನೆ ನೀಡುವುದಾಗಿ ನಿರ್ಮಲ ಸೀತಾರಾಮನ್ ಹೊರಡಿಸಿರುವ ಬಜೆಟ್‍ನಲ್ಲಿ ಸಂಕಲ್ಪ ಮಾಡಿದ್ದಾರೆ. ಜನಧನ್ ಖಾತೆಯಲ್ಲಿ ಮಹಿಳೆಯರು ಐದು ಸಾವಿರ ರೂ. ಓ.ಡಿ. ಪಡೆಯಬಹುದು. ಸ್ತ್ರೀಶಕ್ತಿ ಸಂಘದ ಮಹಿಳೆಯರಲ್ಲಿ ಒಬ್ಬರು ಒಂದು ಲಕ್ಷ ರೂ.ಗಳನ್ನು ಮುದ್ರಾ ಬ್ಯಾಂಕ್‍ನಿಂದ ಸಾಲ ಪಡೆಯಬಹುದು ಎಂದು ಬಿಜೆಪಿ.ಕೊಡುಗೆಯನ್ನು ತಿಳಿಸಿದರು.
ಸದಸ್ಯತ್ವ ಅಭಿಯಾನದಲ್ಲಿ ನೀವುಗಳು ಮಿಸ್ಡ್ ಕಾಲ್ ಜೊತೆಗೆ ವಿಳಾಸ, ಪಿನ್‍ಕೋಡ್ ನಮೂದಿಸಿ. ಕಾಂಗ್ರೆಸ್ ನಾಟಕ ಮಂಡಳಿಯಿದ್ದಂತೆ ರಾಜ್ಯದ ಮುಖ್ಯಮಂತ್ರಿ ಕುರ್ಚಿಯನ್ನು ಬೆಂಗಳೂರಿನ ಕಳಾಸಿಪಾಳ್ಯದ ಫುಟ್‍ಪಾತ್‍ಗೆ ತಂದಿಟ್ಟಿದ್ದಾರೆ. ರಾಜ್ಯದಲ್ಲಿಯೂ ಬಿಜೆಪಿ.ಅಧಿಕಾರಕ್ಕೆ ಬಂದರೆ ಕಟ್ಟ ಕಡೆಯ ವ್ಯಕ್ತಿಯ ಪರವಾಗಿ ಯೋಜನೆ ರೂಪಿಸುತ್ತದೆ. ಸರ್ವ ಶಿಕ್ಷ ಅಭಿಯಾನದ ಮೂಲಕ ಬಿಜೆಪಿ. ಶಿಕ್ಷಣಕ್ಕೆ ಸಾಕಷ್ಟು ಒತ್ತು ಕೊಟ್ಟಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ.ಇಪ್ಪತ್ತೈದು ಕ್ಷೇತ್ರಗಳಲ್ಲಿ ಗೆದ್ದಿದೆ ಇದರಿಂದ ಜನ ಬಿಜೆಪಿ.ಪರವಾಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ವಿರ್ಪಯಾಸವೆಂದರೆ ಕಾಂಗ್ರೆಸ್-ಜೆಡಿಎಸ್.ಗೆ ಜನ ನಮ್ಮನ್ನು ತಿರಸ್ಕರಿಸಿದ್ದಾರೆ ಎನ್ನುವುದು ಇನ್ನೂ ಅರಿವಿಗೆ ಬಂದಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿ.ಸಿದ್ದಾಂತ, ಕಾರ್ಯವೈಖರಿ, ದೇಶಭಕ್ತಿಗೆ ಹಿಂದಿನಿಂದಲೂ ಒತ್ತು ಕೊಡುತ್ತ ಬರುತ್ತಿದೆ. ಪಕ್ಷಕ್ಕೆ ಹಾನಿಯಾಗದ ರೀತಿಯಲ್ಲಿ ನಿಷ್ಟೆ ಪ್ರಾಮಾಣಿಕತೆಯಿಂದ ನಡೆದುಕೊಂಡರೆ ಒಂದಲ್ಲ ಒಂದು ದಿನ ಅಧಿಕಾರಕ್ಕೆ ಮನೆ ಬಾಗಿಲಿಗೆ ಬರುತ್ತದೆ ಎನ್ನುವುದಕ್ಕೆ ನಾನೆ ಸಾಕ್ಷಿ ಎಂದು ಹೆಮ್ಮೆಯಿಂದ ಹೇಳಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿ ಬಿಜೆಪಿ.ಸರ್ವವ್ಯಾಪಿ, ಸರ್ವಪಕ್ಷವಾಗಬೇಕೆಂಬುದು ಪ್ರಧಾನಿ ಮೋದಿರವರ ಆಸೆಯಂತೆ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದೆ. ಸಬ್‍ಕಾಸಾಥ್, ಸಬ್‍ಕಾವಿಕಾಸ್ ಎನ್ನುವುದರ ಜೊತೆಗೆ ಸಬ್‍ಕಾವಿಶ್ವಾಸ್ ಎನ್ನುವುದು ಪಕ್ಷದ ಮೂಲಮಂತ್ರವಾಗಿದೆ. ಅದಕ್ಕಾಗಿ ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಮೂರು ಲಕ್ಷ ಗುರಿ ಮುಟ್ಟಬೇಕಾಗಿದೆ ಎಂದರು.ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್, ಸ್ಲಂಮೋರ್ಚದ ಸಿದ್ದೇಶ್‍ಯಾದವ್, ಪ್ರಧಾನ ಕಾರ್ಯದರ್ಶಿಗಳಾದ ಮುರಳಿ, ರತ್ನಮ್ಮ ವೇದಿಕೆಯಲ್ಲಿದ್ದರು.
ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಖಜಾಂಚಿ ನರೇಂದ್ರ, ಶಿವಣ್ಣಾಚಾರ್, ಸುರೇಶ್‍ಸಿದ್ದಾಪುರ, ಟೈಗರ್ ತಿಪ್ಪೇಸ್ವಾಮಿ, ಜಿ.ಹೆಚ್.ಮೋಹನ್, ಡಿ.ರಮೇಶ್, ರಾಜುಶಿವನಕೆರೆ, ಚಂದ್ರಿಕ ಲೋಕನಾಥ್, ನೆಲ್ಲಿಕಟ್ಟೆ ಜಗದೀಶ್, ನಂದಿ ನಾಗರಾಜ್, ವಿಕಾಸ್, ಸಾಗರ್, ಸತ್ಯನಾರಾಯಣ, ನಗರಸಭೆ ಸದಸ್ಯರುಗಳಾದ ಶಶಿ, ಹರೀಶ್, ಮಹಿಳಾ ಮುಖಂಡರುಗಳಾದ ಬಸಮ್ಮ, ವಿಜಯಲಕ್ಷಿ ಇನ್ನು ಮುಂತಾದವರು ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ನಿವೃತ್ತ ಯೋಧರು, ಪೌರಸೇವಾ ನೌಕರರು, ರೈತರು, ವಿದ್ಯಾರ್ಥಿಗಳು, ಅಸಂಘಟಿತ ಆಟೋ ಚಾಲಕರು, ಶಿಕ್ಷಕರುಗಳು ಸದಸ್ಯತ್ವ ಅಭಿಯಾನದಲ್ಲಿ ಹಾಜರಿದ್ದರು.ಪೌರ ಕಾರ್ಮಿಕರಿಗೆ, ಆಟೋ ಚಾಲಕರುಗಳಿಗೆ, ನಿವೃತ್ತ ಯೋಧರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಸನ್ಮಾನಿಸಲಾಯಿತು. ಸದಸ್ಯತ್ವ ಅಭಿಯಾನದ ನಂತರ ಮೆರವಣಿಗೆ ಮೂಲಕ ಸಾಗಿ ಆನೆಬಾಗಿಲು ಬಳಿಯಿರುವ ದೇವಸ್ಥಾನದ ಎದುರಿನ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
