ಕುಣಿಗಲ್ :
ಹಲವು ವರ್ಷಗಳಿಂದ ಹಾಗೆಯೇ ಉಳಿದ ಸಾಗುವಳಿ ಚೀಟಿ ನೀಡುವಲ್ಲಿ ಬಾರಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್‍ನ ಮುಖಂಡರಾದ ಜಗದೀಶ್‍ನಾಗರಾಜಯ್ಯ ಅವರ ನೇತೃತ್ವದಲ್ಲಿ ತಹಸೀಲ್ದಾರ್‍ಗೆ ಘೇರಾವ್ ಹಾಕಿ ಪ್ರತಿಭಟಿಸಿ ಎಚ್ಚರಿಕೆ ನೀಡಿದ ಪ್ರಸಂಗ ನಡೆಯಿತು.
ಶುಕ್ರವಾರ ತಹಸೀಲ್ದಾರ್‍ರವರಿಗೆ ತಾಲ್ಲೂಕು ಕಚೇರಿ ಆವರಣದಲ್ಲಿ ತಹಸೀಲ್ದಾರ್ ಅವರನ್ನ ಸುತ್ತುವರೆದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳದಲ್ಲೇ ಸಾಗುವಳಿ ಚೀಟಿ ವಿತರಿಸಬೇಕೆಂದು ಒತ್ತಾಯಿಸಿದರು.
ಹುಲಿಯೂರುದುರ್ಗ ಹೋಬಳಿ ಮಾದಪ್ಪನಹಳ್ಳಿ ಸ.ನಂ.23ರಲ್ಲಿ 160 ಹೆಚ್ಚುಜನ ಬಗರ್‍ಹುಕುಂ ಸಮಿತಿಗೆ ಅರ್ಜಿಸಲ್ಲಿಸಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ತಾವುಗಳು ಸೇರಿದಂತೆ ತಮ್ಮ ಕೆಳಗಿನ ಅಧಿಕಾರಿಗಳಾದ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಸರ್ವೇಯರ್ ರವರುಗಳು ಸ್ಥಳಪರಿಶೀಲನೆ ನಡೆಸಿ ಬಗರ್‍ಹುಕುಂ ಸಮಿತಿಗೆ ವರದಿ ನೀಡಿದ ನಂತರ ಜಮೀನು ಮಂಜೂರಾಗಿದೆ. ಟಿಪ್ಪು ಜಯಂತಿಯ ದಿನದಂದು, ಸಂಸದರು ಹಾಗೂ ಶಾಸಕರು ಸಾಗುವಳಿ ಚೀಟಿ ವಿತರಿಸಿದ್ದಾರೆ. ಈ ಭಾಗದ ರೈತರಿಗೇಕೆ ಸಾಗುವಳಿ ಚೀಟಿ ನೀಡಲಿಲ್ಲ ಎಂದು ಜೆಡಿಎಸ್ ಮುಖಂಡರೊಂದಿಗೆ ತೆರಳಿದ ಮಾದಪ್ಪನಹಳ್ಳಿ, ನಾಗತಿಹಳ್ಳಿಯ ಗ್ರಾಮದ ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ಮುಖಂಡ ಜಗದೀಶ್, ಹಿಂದೆ ಇದೇ ಸ.ನಂ.ನಲ್ಲಿ 160 ಕ್ಕೂ ಹೆಚ್ಚು ಜನರಿಗೆ ಜಮೀನು ಮಂಜೂರಾಗಿದೆ. ಕೆಲವರು ಮಂಜೂರಾದಾಗಿನಿಂದ ಉಳುಮೆಮಾಡುತ್ತಿಲ್ಲ, ಆ ಜಮೀನಿನಲ್ಲಿ ಮಂಜೂರಾಗದ ಕೆಲವು ಬಲಾಡ್ಯರು ಕ್ರಯಕ್ಕೆ ಪಡೆದಿದ್ದೇವೆಂದು ಉಳುಮೆ ಮಾಡುತ್ತಿದ್ದಾರೆ. ಈಗ ಸಾಗುವಳಿ ಚೀಟಿ ನೀಡಿರುವ ಜಾಗಕ್ಕೂ ಆ ಜಾಗಕ್ಕು ಸಂಬಂಧವಿಲ್ಲ.
ಆದರೆ ಅದೇ ಬಲಾಢ್ಯರು ಸೇರಿದಂತೆ ರಿಯಲ್ ಎಸ್ಟೇಟ್‍ದಾರರು ಈ ಜಮೀನನ್ನು ಲಪಟಾಯಿಸಲು ಹೊರಟಿದ್ದಾರೆ. ಸುತ್ತಲು ಬಂಡೆಗಳಿವೆ ಈ ಬಂಡೆಗಳ ಮೇಲೆ ಕಣ್ಣು ಬಿದ್ದಿದೆ. ಶಾಸಕರು ಇದಕ್ಕೆ ಕುಮ್ಮಕ್ಕು ನೀಡಿ ನೂರಾರು ರೈತರಿಗೆ ಸಾಗುವಳಿ ಚೀಟಿ ನೀಡದಂತೆ ಆಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ. ಕೂಡಲೇ ಉಳುಮೆ ಚೀಟಿ ನೀಡುವಂತೆ ಆಗ್ರಹಿಸಿದ ಅವರು, ಶಾಸಕರು ಸಂಸದರು ಇಂತಹ ಕೆಟ್ಟ ದ್ವೇಷದ ರಾಜಕೀಯವನ್ನು ಬಿಟ್ಟು ತಾಲ್ಲೂಕಿನ ರೈತರ ಹಿತ ಕಾಪಾಡಲಿ, ತಪ್ಪಿದ್ದಲ್ಲಿ ಅದಕ್ಕೆ ಪ್ರತಿಫಲ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ನಾಗರಾಜು ಮಾತನಾಡಿ, ಈ ಸಂಬಂಧ ಹಳೆಯ ಮಂಜೂರಾತಿದಾರರು ತಪ್ಪು ತಿಳುವಳಿಕೆಯಿಂದ ಸಾಗುವಳಿ ಚೀಟಿ ನೀಡಬಾರದೆಂದು ಜಿಲ್ಲಾಧಿಕಾರಿಗಳಿಗೆ ತಕರಾರು ಅರ್ಜಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸಲು ನಮಗೆ ತಿಳಿಸಿರುವುದರಿಂದ ಸಾಗುವಳಿ ಚೀಟಿ ವಿತರಿಸಲು ತಡವಾಗಿದೆ. ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಅವರಿಂದ ಆದೇಶ ಬಂದ ಕೂಡಲೇ ಸಾಗುವಳಿ ಚೀಟಿ ವಿತರಿಸಲಾಗುವುದು. ಮೂರ್ನಾಲ್ಕು ದಿನ ಕಾಲಾವಕಾಶ ನೀಡಿ, ಸಾಗುವಳಿ ಚೀಟಿ ನೀಡದಿದ್ದರೆ ಈ ತಾಲ್ಲೂಕಿನಿಂದ ವರ್ಗಾವಣೆಯಾಗಿ ಹೋಗುತ್ತೇನೆಂದರು. ತಹಸೀಲ್ದಾರ್ ಮನವಿಗೆ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟು ಮೂರ್ನಾಲ್ಕುದಿನಗಳೊಳಗೆ ಸಾಗುವಳಿ ಚೀಟಿ ನೀಡದಿದ್ದರೆ ತಾಲ್ಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಟೇಲ್ ಚಂದ್ರಯ್ಯ, ಯಜಮಾನ್ ತಿರುಮಲಯ್ಯ, ಗ್ರಾ.ಪಂ. ಸದಸ್ಯ ಸುರೇಶ್, ನಾಗತಿಹಳ್ಳಿ ತಿಮ್ಮಯ್ಯ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ