ನ.14ರಿಂದ ಸಹಕಾರ ಸಪ್ತಾಹ ಸಮಾರಂಭ.!

ತುಮಕೂರು
     ನವಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ಧ್ಯೇಯದೊಂದಿಗೆ 66ನೇ ವರ್ಷದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಇದೇ ತಿಂಗಳ 14ರಂದು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್.ಗಂಗಣ್ಣ ತಿಳಿಸಿದರು.
      ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 21 ಜಿಲ್ಲೆಗಳಲ್ಲಿ ಸಹಕಾರಿ ಮಹಾಮಂಡಳದ ಶಾಖೆಗಳಿವೆ. ಅದರಲ್ಲಿ ಬರ ಹಾಗೂ ನೆರೆ ಇದ್ದಂತಹ ಪ್ರದೇಶಗಳನ್ನು ಹೊರತು ಪಡಿಸಿ ಏಳು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಉದ್ಘಾಟನೆ ಕಾರ್ಯಕ್ರಮವನ್ನು ತುಮಕೂರಿನಲ್ಲಿ ನಡೆಸಿದರೆ ಉಳಿದ ಆರು ದಿನಗಳ ಕಾರ್ಯಕ್ರಮಗಳನ್ನು ಕೊಪ್ಪಳ, ಯಾದಗಿರಿ, ಉತ್ತರ ಕನ್ನಡ ಜಿಲ್ಲೆಯ ಕುಮಟ, ಮಂಗಳೂರು, ಹಾಸನದಲ್ಲಿ ನಡೆಸಿ ಕೊನೆಯ ಸಮಾರೋಪ ಸಮಾರಂಭವನ್ನು ಮೈಸೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
      2003ರಿಂದ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಅದೇ ರೀತಿ ಈ ಭಾರಿಯೂ 6 ಮಂದಿಗೆ ಸಹಕಾರಿ ರತ್ನ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಗೆ ತುಮಕೂರು ಜಿಲ್ಲೆಯಿಂದ ಮಾಜಿ ಶಾಸಕ ಕೆ.ಷಡಕ್ಷರಿಯವರ ಹೆಸರನ್ನು ಪ್ರಸ್ತಾಪ ಮಾಡಲಾಗಿದೆ. ನ.12ರಂದು ನಡೆಯುವ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದರು.ಕೇಂದ್ರ ಸರ್ಕಾರದಿಂದ ಆರ್‍ಸಿಇಪ ಒಪ್ಪಂದಕ್ಕೆ ಸಹಿ ಹಾಕುವುದನ್ನು ಒಂದು ವರ್ಷದ ವರೆಗೆ ಮುಂದೂಡಿರುವುದು ಸಂತಸದ ವಿಷಯ.
      ಈ ಒಪ್ಪಂದ ಜಾರಿಯಾಗಿದ್ದರೆ ಭಾರತದ ಹೈನುಗಾರಿಕೆಗೆ ತುಂಬಾ ಹೊಡೆತ ಬೀಳುತ್ತಿತ್ತು. ಅದೆಷ್ಟೋ ಮಂದಿ ರೈತರು ಜೀವನವನ್ನು ಕಳೆದುಕೊಳ್ಳುತ್ತಿದ್ದರು. ಸದ್ಯ ಈ ಒಪ್ಪಂದಕ್ಕೆ ಸಹಿ ಹಾಕದೇ ಇರುವುದು ಒಳ್ಳೆಯ ಬೆಳವಣಿಗೆ. ಮುಂದೆಯೂ ಪ್ರಧಾನ ಮಂತ್ರಿಗಳು ಈ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಒತ್ತಾಯಿಸಿದರು.
      ಈ ಹಿಂದೆ ರಾಜ್ಯಸರ್ಕಾರ ಯಶಸ್ವಿನಿ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಇದರಿಂದ ಅನೇಕ ರೈತರಿಗೆ ಉಪಯೋಗವಾಗುತ್ತಿತ್ತು. ಆದರೆ ಇದೀಗ ಈ ಯೋಜನೆಯನ್ನು ನಿಲ್ಲಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೊಳಿಸುವ ನಿರೀಕ್ಷೆ ಇದೆ ಎಂದರು.
      ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಹಕಾರಿ ರತ್ನ ಪ್ರಶಸ್ತಿ ಪ್ರದಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ನೆರವೇರಿಸಲಿದ್ದಾರೆ. ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ವಸತಿ ಸಚಿವ ವಿ.ಸೋಮಣ್ಣ ಸಹಕಾರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಹಕಾರ ಪತ್ರಿಕೆ ವಿಶೇಷ ಸಂಚಿಕೆಯನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಬಿಡುಗಡೆಗೊಳಿಸಲಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕಾರ್ಯಚಟುವಟಿಕೆಗಳ ಕೈಪಿಡಿಯನ್ನು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‍ನ ಅಧ್ಯಕ್ಷ ಕೆ.ಎನ್.ರಾಜಣ್ಣ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.
        ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳದ ನಿರ್ದೇಶಕ ಆರ್.ರಾಜೇಂದ್ರ ಮಾತನಾಡಿ, ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ತುಮಕೂರಿನಲ್ಲಿ ನಡೆಯುತ್ತಿರುವುದರಿಂದ ಈ ಬಾರಿ ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸುತ್ತಿದ್ದಾರೆ. ಒಟ್ಟು 30 ಸಾವಿರ ವರೆಗೆ ಸಹಕಾರಿಗಳು ಹಾಗೂ ರೈತರು ಸೇರಲಿದ್ದಾರೆ. ನ.14ರಂದು ಆರಂಭವಾಗುವ ಸಪ್ತಾಹ ಕಾರ್ಯಕ್ರಮದಲ್ಲಿ ಮೊದಲನೇ ದಿನ ಗ್ರಾಮೀಣ ಸಹಕಾರ ಸಂಸ್ಥೆಗಳ ಮೂಲಕ ಅನ್ವೇಷಣೆ ದಿನ ಎಂಬ ವಿಷಯದ ಬಗ್ಗೆ  ಚಿಂತನ ಮಂಥನ, ನ.15ರಂದು ಸಹಕಾರ ಸಂಸ್ಥೆಗಳಿಗಾಗಿ ಶಾಸನಾಧಿಕಾರ ರೂಪಿಸುವುದು, 
     ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಎನ್.ಗಂಗಣ್ಣ, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಆರ್.ರಾಜೇಂದ್ರ , ತುಮಕೂರು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ ಅಧ್ಯಕ್ಷ ಬಿ.ಜಿ.ವೆಂಕಟೇಗೌಡರು, ತುಮಕೂರು ಸಹಕಾರಿ ಹಾಲು ಒಕ್ಕೂಟ ನಿಯಮಿತದ ಅಧ್ಯಕ್ಷ ಸಿ.ಬಿ.ಮಹಲಿಂಗಯ್ಯ, ಡಿಸಿಸಿ ಬ್ಯಾಂಕ್ ಸಿಇಒ ಬಿ.ಎಸ್.ಕುಬೇಂದ್ರ ನಾಯ್ಕ್, ತುಮಕೂರು ಜಿಲ್ಲಾ ಸಹಕಾರ ಯೂನಿಯನ್‍ನ ಸಿಇಒ ಡಿ.ಮಹದೇವಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮೀನಾರಾಯಣ, ದೇವರಾಜು, ಪಿ.ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link