ಚಿತ್ರದುರ್ಗ:
ಇಂಗ್ಲೆಂಡ್ನಲ್ಲಿ 1840 ರಲ್ಲಿ ಹುಟ್ಟಿಕೊಂಡ ಸಹಕಾರ ಚಳುವಳಿ 1904 ರಲ್ಲಿ ಭಾರತದಲ್ಲಿ ಆರಂಭಗೊಂಡಿತು ಎಂದು ಕರ್ನಾಟಕ ಗ್ಯಾಸೆಟಿಯರ್ ಇಲಾಖೆ ಮುಖ್ಯ ಸಂಪಾದಕ ಎಂ.ಬಿ.ಪಾಟೀಲ್ ಹೇಳಿದರು.
ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಇವರುಗಳು ಸಹಯೋಗದೊಂದಿಗೆ ಐ.ಎಂ.ಎ.ಹಾಲ್ನಲ್ಲಿ ಭಾನುವಾರ ನಡೆದ 33 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಉದ್ಯಮ ಮತ್ತು ಸಹಕಾರ ಚಳುವಳಿ ಆರಂಭ ಹಂತದಿಂದ ಏಕೀಕರಣದವರೆಗೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಲಾರ್ಡ್ ಕರ್ಜನ್ ಕಾಲದಲ್ಲಿ ಆರಂಭಗೊಂಡ ಸಹಕಾರ ಚಳುವಳಿಗೆ 115 ವರ್ಷವಾಗಿದೆ. ಸಹಕಾರ ಚಳುವಳಿ ಆರಂಭವಾದಾಗ ಕೃಷಿ ಪದ್ದತಿ ತುಂಬಾ ಹೀನಾಯವಾಗಿತ್ತು.
ಕೃಷಿಯಲ್ಲಿನ ಸಮಸ್ಯೆಗಳನ್ನು ಸುಧಾರಿಸಲು ಬ್ರಿಟೀಷ್ ಸರ್ಕಾರ ಐದರಿಂದ ಆರು ಬಗೆಯ ಕಾನೂನುಗಳನ್ನು ಜಾರಿಗೆ ತಂದಿತು. ಆದರೆ ಯಾವುದೂ ಪ್ರಯೋಜನವಾಗಲಿಲ್ಲ. ಅಂದಿನ ಕಾಲದಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ರವರಿಗೆ ರೈತರಿಗೆ ಬೆಳೆ ಸಾಲ ನೀಡಲು ಇಂತಿಷ್ಟು ಹಣವನ್ನು ನೀಡಲಾಗಿತ್ತು. ಮೈಸೂರು ದಿವಾನರ ಕಾಲದಲ್ಲಿ ಸಹಕಾರ ಚಳುವಳಿಯಿಂದ ಕೃಷಿ ಪದ್ದತಿ ಹಾಗೂ ಸಹಕಾರ ಸಂಘಗಳು ಸಾಕಷ್ಟು ಸುಧಾರಣೆಯಾಗಿದ್ದವು.
ಮೈಸೂರು ಮಹಾರಾಜರು 1907 ರಲ್ಲಿ ಅಧಿಕಾರಿಗಳನ್ನು ಇಂಗ್ಲೆಂಡ್, ಯೂರೋಪ್ಗೆ ಕಳಿಸಿ ಅಲ್ಲಿನ ಸಹಕಾರ ಚಳುವಳಿಯನ್ನು ತಿಳಿದುಕೊಂಡು ಬರಲು ಸೂಚಿಸಿದ್ದರು ಎಂದು ಹೇಳಿದರು.ನಿವೃತ್ತ ಕಂದಾಯಾಧಿಕಾರಿಗಳನ್ನು ಬಳಸಿಕೊಂಡರು. ಹಳೆ ಮೈಸೂರಿನಲ್ಲಿ ಆರಂಭಗೊಂಡ ಸಹಕಾರ ಚಳುವಳಿ ಕ್ರಮೇಣವಾಗಿ ಎಲ್ಲಾ ಕಡೆ ಆರಂಭವಾಯಿತು. ಪ್ರತಿ ಹಳ್ಳಿಯಲ್ಲಿಯೂ ಸಹಕಾರ ಸಂಘಗಳಿವೆ. ಚಿತ್ರದುರ್ಗದಿಂದ ಬೇರೆಯಾದ ದಾವಣಗೆರೆ ಜಿಲ್ಲೆಗೆ ಹೋಲಿಸಿದರೆ ಚಿತ್ರದುರ್ಗ ಅಭಿವೃದ್ದಿ ವಿಚಾರದಲ್ಲಿ ಹಿಂದುಳಿದಿದೆ ಎಂದು ಜಿಲ್ಲೆಯಲ್ಲಿ ಸಹಕಾರ ಚಳುವಳಿ ನಡೆದು ಬಂದ ಕುರಿತು ವಿವರಿಸಿದರು.
ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ1998 ರಲ್ಲಿ ನಿವೃತ್ತಿಯಾದ ಎಂ.ಬಿ.ಪಾಟೀಲ್ರವರು ರಾಜ್ಯದ 20 ಜಿಲ್ಲೆಗಳಲ್ಲಿ ಗ್ಯಾಸೆಟಿಯರ್ ಸಂಪಾದಕರಾಗಿ ಕೆಲಸ ಮಾಡಿದ್ದಾರೆಂದು ಗುಣಗಾನ ಮಾಡಿದರು.
ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಪ್ರೊ.ಲಕ್ಷ್ಮಣ್ತೆಲಗಾವಿ, ಶಂಕರ್ ಎಸ್.ಅಥಣಿ, ಮದಕರಿನಾಯಕ ಸಾಂಸ್ಕತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ವಕೀಲರುಗಳಾದ ಅಹೋಬಲನಾಯಕ, ಹೆಚ್.ಎಂ.ಎಸ್.ನಾಯಕ, ರಾಜ ಮದಕರಿ ಜಯಚಂದ್ರನಾಯಕ, ಗೌಡ್ರಗುರುಸಿದ್ದಪ್ಪ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸದಲ್ಲಿ ಭಾಗವಹಿಸಿದ್ದರು.