ಚಿತ್ರದುರ್ಗ:
ಮದಕರಿಪುರದಲ್ಲಿ ಫೆ.9 ರಂದು ನಡೆಯಲಿರುವ ತಾಲೂಕು ನಾಲ್ಕನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್.ದಾಸೇಗೌಡ ತಿಳಿಸಿದರು.
ಪ್ರವಾಸಿಮಂದಿರದಲ್ಲಿ ಬುಧವಾರ ಸಮ್ಮೇಳನದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲರಿಗೂ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುವುದು ಎಂದು ಹೇಳಿದರು.
ಹಾಸ್ಯ ಸಾಹಿತಿ ಬಿ.ತಿಪ್ಪೇರುದ್ರಪ್ಪನವರ ವೇದಿಕೆ, ಸ್ವಾತಂತ್ರ ಹೋರಾಟಗಾರ ಸಾ.ವಾಸುದೇವರಾವ್ ಮಂಟಪ, ದೊಡ್ಡಮಲ್ಲಪ್ಪ ಮಹಾದ್ವಾರ, ಗಮಕಿ ಕಲ್ಲಪ್ಪರ ಈಶಣ್ಣ ಭೋಜನ ಶಾಲೆಯನ್ನು ಸಮ್ಮೇಳನಕ್ಕೆ ಸಜ್ಜುಗೊಳಿಸಲಾಗಿದೆ. 9 ರಂದು ಬೆಳಿಗ್ಗೆ 7-45 ಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಾಡಧ್ವಜವನ್ನು ನಾನು ನೆರವೇರಿಸುತ್ತೇನೆ ಎಂದು ಸಮ್ಮೇಳನದ ಕುರಿತು ವಿವರಿಸಿದರು.
ಸಮ್ಮೇಳನಾಧ್ಯಕ್ಷ ಎಸ್.ಆರ್.ಗುರುನಾಥ್‍ರವರನ್ನು ಮದಕರಿಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆದುಕೊಂಡು ಹೋಗಲಾಗುವುದು. ಜಿ.ಪಂ.ಅಧ್ಯಕ್ಷ ಸೌಭಾಗ್ಯ ಬಸವರಾಜನ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಟಿ.ಸಿ.ಕಾಂತರಾಜ್, ಡಿ.ವೈ.ಎಸ್ಪಿ.ವಿಜಯಕುಮಾರ್ ಎಂ.ಸಂತೋಷ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೆಚ್.ಕೃಷ್ಣಾನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಇವರುಗಳು ಆಗಮಿಸಲಿದ್ದಾರೆ. ಸಮ್ಮೇಳನಕ್ಕೆ ತಾಲೂಕಿನಿಂದ ಆಗಮಿಸುವ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರುಗಳಿಗೆ ಅನ್ಯ ಕಾರ್ಯನಿಮಿತ್ತ ರಜೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಗೋವಿಂದಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಶ್ಯಾಮಲಶಿವಪ್ರಕಾಶ್, ರಂಗನಾಯ್ಕ, ದ್ಯಾಮಪ್ಪ, ಮೋಕ್ಷರುದ್ರಸ್ವಾಮಿ, ಮದಕರಿಪುರದವರಾದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ರಂಗಸ್ವಾಮಿ, ಎಂ.ಸಿದ್ದಪ್ಪ, ಶ್ವೇತೇಶ್ವರ್, ಬಸವರಾಜ್, ರಾಘವೇಂದ್ರ, ಮೂರ್ತಿನಾಯ್ಕ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
