ಸಾಯಿಬಾಬಾ ಸನ್ನಿದಿಯಲ್ಲಿ ಅತೃಪ್ತರ ಪ್ರಮಾಣ..!

ಮುಂಬೈ

     ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ರೆಸಾರ್ಟ್‍ನಲ್ಲಿ ವಾಸ್ತವ್ಯ ಮಾಡಿರುವ 12 ಅತೃಪ್ತ ಶಾಸಕರು ಇಂದು ಶಿರಡಿ ಶ್ರೀ ಸಾಯಿಬಾಬಾ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಯಾವುದೇ ಕಾರಣಕ್ಕೂ ನಾವು ರಾಜೀನಾಮೆ ಹಿಂಪಡೆಯುವುದಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂಬ ಪ್ರಮಾಣ ಮಾಡಿದ್ದಾರೆ.

       ನಿನ್ನೆಯಷ್ಟೆ ಮುಂಬೈನ ಪ್ರತಿಷ್ಠಿತ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ ಈ ಶಾಸಕರು ಇಂದು ಎರಡು ವಿಶೇಷ ವಿಮಾನಗಳಲ್ಲಿ ಶಿರಡಿ ಶ್ರೀ ಸಾಯಿಬಾಬಾ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಎಲ್ಲರೂ ಒಕ್ಕೊರಲಿನಿಂದ ಬಾಬಾರವರ ಮುಂದೆ ನಿಂತು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಾಗಲೀ, ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುವುದಾಗಲೀ ಮಾಡುವುದಿಲ್ಲ ಎಂದು ಶಪಥ ಮಾಡಿದ್ದಾರೆ.

     ಜು.6 ರಂದು ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಗೆ ಬೇಸತ್ತು ರಾಜೀನಾಮೆ ನೀಡಿರುವ 1.ಎಚ್.ವಿಶ್ವನಾಥ್, 2. ನಾರಾಯಣಗೌಡ, 3. ಕೆ.ಗೋಪಾಲಯ್ಯ, 4. ಸ್.ಟಿ.ಸೋಮಶೇಖರ್, 5. ಭೈರತಿ ಬಸವರಾಜ್, 6. ಪ್ರತಾಪ್‍ಗೌಡ ಪಾಟೀಲ್, 7. ರಮೇಶ್ ಜಾರಕಿ ಹೊಳಿ, 8. ಮಹೇಶ್ ಕುಮಟಳ್ಳಿ, 9. ಶಿವರಾಮ್ ಹೆಬ್ಬಾರ್, 10. ಬಿ.ಸಿ.ಪಾಟೀಲ್ , (ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ 11. ನಾಗೇಶ್ , 12. ಆರ್.ಶಂಕರ್ ಅವರು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದರು.

      ಇಂದು ವಿಶೇಷ ವಿಮಾನದಲ್ಲಿ ಶಿರಡಿಗೆ ತೆರಳಿದ ಅವರು ಪೂಜೆ ಸಲ್ಲಿಸಿದ ಎಲ್ಲರೂ ಒಟ್ಟಾಗಿ ನಿಂತು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದು ರಾಜಕೀಯ ವಲಯದಲ್ಲಿ ಅತ್ಯಾಶ್ಚರ್ಯ ಮೂಡಿಸಿದೆ.

     ಮುಂಬೈಗೆ ಹೋಗಿರುವ ಅತೃಪ್ತರಲ್ಲಿ ನಾಲ್ವರನ್ನು ಕರೆತಂದು ವಿಶ್ವಾಸ ಮತ ಗೆಲ್ಲುವ ಹುಮ್ಮಸ್ಸಿನಲ್ಲಿ ಮೈತ್ರಿ ನಾಯಕರಿದ್ದರು. ಆದರೆ ಮುಂಬೈನಲ್ಲಿರುವ ಎಲ್ಲಾ 12 ಮಂದಿ ಅತೃಪ್ತ ಶಾಸಕರು ಸಾಯಿಬಾಬಾನ ಮುಂದೆ ಪ್ರಮಾಣ ಮಾಡಿರುವುದು ರಾಜಕೀಯ ವಲಯದಲ್ಲಿ ರೋಚಕ ತಿರುವು ಪಡೆಯುವ ಸಾಧ್ಯತೆ ಇದೆ.

       ಒಂದೆಡೆ ಅತೃಪ್ತರ ಮನವೊಲಿಕೆಗೆ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಮತ್ತೊಂದೆಡೆ ನ್ಯಾಯಾಲಯದಲ್ಲಿ ಸ್ಪೀಕರ್ ಕ್ರಮ ಆಕ್ಷೇಪಿಸಿ ಕಾನೂನು ಹೋರಾಟ ಮುಂದುವರೆದಿದೆ. ಇಂದು ಮತ್ತೆ ಐವರು ಶಾಸಕರು ತಮ್ಮ ರಾಜೀನಾಮೆಯನ್ನೂ ಕೂಡ ಪರಿಗಣಿಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

      ಸದನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತಯಾಚಿಸುವುದಾಗಿ ತಿಳಿಸಿದ್ದಾರೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಶಾಸಕರು ರೆಸಾರ್ಟ್ ಹಾಗೂ ಹೊಟೇಲ್‍ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ರಾಜ್ಯದ ರಾಜಕೀಯ ವಿಪ್ಲವ ಪರಿಸ್ಥಿತಿ ತಲುಪಿದೆ. ಇಂತಹ ಸಂದರ್ಭದಲ್ಲಿ ಅತೃಪ್ತರು ತಮ್ಮ ಪಟ್ಟು ಸಡಿಲಿಸದೆ ದೇವರ ಮುಂದೆ ಪ್ರಮಾಣ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap